".

Header Ads

‘ಕಿಸಾನ್ ಪರಿವಾರ್’ ಸಂಸ್ಥೆಯಲ್ಲಿ ಹೂಡಿಕೆ ಆಮಿಷ; ₹12 ಲಕ್ಷ ಹೂಡಿಕೆ ಮಾಡಿ ₹7.32 ಲಕ್ಷ ಕಳೆದುಕೊಂಡ ಹಿರಿಯ ನಾಗರಿಕ!

  ಗೂಗಲ್‌ನಲ್ಲಿ ಇನ್ವೆಸ್ಟ್‌ಮೆಂಟ್ ಸಂಸ್ಥೆಗಾಗಿ ಹುಡುಕಾಟ ನಡೆಸುತ್ತಿದ್ದ 62 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ‘ಕಿಸಾನ್ ಪರಿವಾರ್ ಲಿಮಿಟೆಡ್’ ಹೆಸರಿನಲ್ಲಿ ಭಾರಿ ಲಾಭಾಂಶದ ಆಮಿಷ ಒಡ್ಡಿ ಬರೋಬ್ಬರಿ 12 ಲಕ್ಷ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಸೈಬರ್ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಹಿರಿಯ ನಾಗರಿಕರು ನೀಡಿದ ದೂರಿನ ಅನ್ವಯ, ಅಪರಿಚಿತ ಸೈಬರ್ ಖದೀಮರು ಹಾಗೂ ಸಂಸ್ಥೆಯ ವಿರುದ್ಧ ಸೈಬರ್ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ವಿವರಗಳ ಪ್ರಕಾರ, ದೂರುದಾರರು 2023 ರಲ್ಲಿ ಮನೆಯಲ್ಲಿದ್ದಾಗ ಗೂಗಲ್ (Google) ನಲ್ಲಿ ಹಣ ಹೂಡಿಕೆ ಮಾಡುವ ಕುರಿತು ಮಾಹಿತಿ ಹುಡುಕುತ್ತಿದ್ದರು. ಈ ವೇಳೆ ‘ಕಿಸಾನ್ ಪರಿವಾರ್ ಲಿಮಿಟೆಡ್’ (KISSAN PARIVAR LIMITED) ಎಂಬ ಸಂಸ್ಥೆಯ ಬಗ್ಗೆ ತಿಳಿದುಬಂದಿದೆ. ಆನ್‌ಲೈನ್‌ನಲ್ಲಿ ಲಭ್ಯವಿದ್ದ ದೂರವಾಣಿ ಸಂಖ್ಯೆ (9991545545) ಮೂಲಕ ಸಂಪರ್ಕಿಸಿದಾಗ, ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಭಾರಿ ಬಡ್ಡಿಯ ರೂಪದಲ್ಲಿ ಲಾಭಾಂಶ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು.

ಆರೋಪಿಗಳ ಮಾತುಗಳನ್ನು ನಿಜವೆಂದು ನಂಬಿದ ದೂರುದಾರರು, 2023 ರ ಜೂನ್ 05 ರಿಂದ 2026 ರ ಮಾರ್ಚ್ 22 ರವರೆಗಿನ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹12,00,000/- (12 ಲಕ್ಷ ರೂ.) ಹಣವನ್ನು ಆರೋಪಿಗಳು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ದೂರುದಾರರು ಹೂಡಿಕೆ ಮಾಡಿದ ಹಣಕ್ಕೆ ಪ್ರತಿಯಾಗಿ ಸಂಸ್ಥೆಯು 2025 ರ ಸೆಪ್ಟೆಂಬರ್ 30 ರವರೆಗೆ ಪ್ರತಿ ತಿಂಗಳು ಬಡ್ಡಿಯ ರೂಪದಲ್ಲಿ ಒಟ್ಟು ₹4,68,000/- ಹಣವನ್ನು ಅವರ ಖಾತೆಗೆ ಜಮೆ ಮಾಡಿತ್ತು. ಆದರೆ, ಕಳೆದ ಒಂದು ವರ್ಷದಿಂದ ಸಂಸ್ಥೆಯಿಂದ ಯಾವುದೇ ಬಡ್ಡಿ ಅಥವಾ ಅಸಲು ಹಣ ಹಿಂತಿರುಗಿರಲಿಲ್ಲ.

ಹಣ ಬರುವುದು ನಿಂತಾಗ ದೂರುದಾರರು ಸಂಸ್ಥೆಯವರನ್ನು ಸಂಪರ್ಕಿಸಿದಾಗ, “ಸಂಸ್ಥೆಗೆ ಪ್ರಸ್ತುತ ಆರ್ಥಿಕ ಕಷ್ಟವಿದೆ, ಮುಂದಿನ ತಿಂಗಳು ಬಡ್ಡಿಯ ಹಣವನ್ನು ಒಟ್ಟಿಗೆ ನೀಡುತ್ತೇವೆ” ಎಂದು ಸಮಜಾಯಿಷಿ ನೀಡಿದ್ದರು. ಆದರೆ, ಸುದೀರ್ಘ ಕಾಯುವಿಕೆಯ ನಂತರವೂ ಯಾವುದೇ ಹಣ ಹಿಂತಿರುಗದೇ ಇದ್ದಾಗ ಮತ್ತು ಕರೆಗಳಿಗೆ ಸರಿಯಾಗಿ ಸ್ಪಂದಿಸದೇ ಇದ್ದಾಗ ತಾವು ಸಂಘಟಿತ ಆನ್‌ಲೈನ್ ಮೋಸಕ್ಕೆ ಒಳಗಾಗಿರುವುದನ್ನು ಅರಿತ ಹಿರಿಯ ನಾಗರಿಕರು ಪೊಲೀಸರ ಮೊರೆ ಹೋಗಿದ್ದಾರೆ. ಆರೋಪಿಗಳು ಆನ್‌ಲೈನ್ ಮೂಲಕ ಆಮಿಷವೊಡ್ಡಿ, ಸಂಘಟಿತ ಅಪರಾಧ ಎಸಗಿ ಲಕ್ಷಾಂತರ ರೂಪಾಯಿ ವಂಚಿಸಿರುವ ಕುರಿತು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Powered by Blogger.