".

Header Ads

ಯುವಕನ ಅಪಹರಿಸಿ ಬಲವಂತದ ಲಿಂಗ ಪರಿವರ್ತನೆ!- ಇಬ್ಬರು ಮಂಗಳಮುಖಿಯರು ಅರೆಸ್ಟ್


 ಚಿತ್ರದುರ್ಗ  ಜಿಲ್ಲೆಯಲ್ಲಿ ಯುವಕನೊಬ್ಬನನ್ನು ಅಪಹರಿಸಿ ಬಲವಂತವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ಶಾಕಿಂಗ್‌  ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರು ಮಂಗಳಮುಖಿಯರನ್ನು  ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗದ ಬುದ್ಧನಗರದ ನಿವಾಸಿಗಳಾದ ಅನುಷ್ಕಾ ಮತ್ತು ನಳಿನಾ ಬಂಧಿತ ಆರೋಪಿಗಳಾಗಿದ್ದಾರೆ. ಚಿತ್ರದುರ್ಗದಲ್ಲಿ ಹೂವು ವ್ಯಾಪಾರ ಮಾಡುತ್ತಿದ್ದ ಯುವಕನೊಬ್ಬನಿಗೆ ಹೂವು ನೀಡುವ ಸಂದರ್ಭದಲ್ಲಿ ಈ ಇಬ್ಬರು ಮಂಗಳಮುಖಿಯರ ಪರಿಚಯವಾಗಿತ್ತು. ಬಳಿಕ ಯುವಕನ ಒಡನಾಟವನ್ನು ದುರುಪಯೋಗಪಡಿಸಿಕೊಂಡು, ಸೆಪ್ಟೆಂಬರ್ 1 ರಂದು ಆತನನ್ನು ಅಪಹರಿಸಿ ಬಂಧನದಲ್ಲಿಟ್ಟು ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಅಷ್ಟೇ ಅಲ್ಲದೆ, ಯುವಕನ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿ, ತೊಡೆಗಳ ಮೇಲೆ ಬಿಸಿನೀರು ಹಾಗೂ ಕೆಂಡದಿಂದ ಸುಟ್ಟು ಹಿಂಸೆ ನೀಡಲಾಗಿದೆ ಎಂಬ ಗಂಭೀರ ದೂರು ದಾಖಲಾಗಿದೆ.

ಈ ದೌರ್ಜನ್ಯದ ಬಳಿಕ ಸಂತ್ರಸ್ತ ಯುವಕ ತನ್ನ ಸ್ವಗ್ರಾಮಕ್ಕೆ ತೆರಳಿ ನೆಲೆಸಿದ್ದನು. ಘಟನೆ ಕುರಿತು ಯುವಕನ ತಂದೆ ಅಕ್ಟೋಬರ್ 9 ರಂದು ಪರಶುರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಈ ಪ್ರಕರಣವು ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ನಗರ ಠಾಣೆ ಪೊಲೀಸರು, ಚಳ್ಳಕೆರೆ ಗೇಟ್ ಬಳಿ ಸುತ್ತಾಡುತ್ತಿದ್ದ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.

Powered by Blogger.