ಉಡುಪಿ :ನವರಾತ್ರಿ ಹಬ್ಬದ ಆರಂಭದೊಂದಿಗೆ ಶಂಕರಪುರ ಮಲ್ಲಿಗೆಯ ಬೇಡಿಕೆ,ಬೆಲೆಯಲ್ಲಿ ಭಾರಿ ಏರಿಕೆ
ನವರಾತ್ರಿ ಹಬ್ಬದ ಆರಂಭದೊಂದಿಗೆ ಪ್ರಸಿದ್ಧ ಉಡುಪಿ ಶಂಕರಪುರ ಮಲ್ಲಿಗೆಯ ಬೇಡಿಕೆ ಮತ್ತು ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.ಭಾನುವಾರದಂದು ತೆರೆದ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಬೆಲೆ ಪ್ರತಿ ಅಟ್ಟೆಗೆ 1,600 ರೂ. ಗೆ ಏರಿದೆ. ಕೇವಲ 15 ದಿನಗಳ ಹಿಂದೆ ಪ್ರತಿ ಅಟ್ಟೆಗೆ 240 ರೂ. ರಿಂದ 300 ರೂ. ರಷ್ಟಿದ್ದ ಬೆಲೆ, ಇದೀಗ ಮುಕ್ತ ಮಾರುಕಟ್ಟೆಯಲ್ಲಿ ಸುಮಾರು ಐದು ಪಟ್ಟು ಹೆಚ್ಚಾಗಿದೆ.
ಮಲ್ಲಿಗೆ ಬೆಳೆಗಾರರ ಸಂಘವು ಪ್ರತಿ ಅಟ್ಟೆಗೆ 570 ರೂ. ರಂತೆ ಬೆಲೆಯನ್ನು ನಿಗದಿಪಡಿಸಿದೆ. ದೇವಿ ಪೂಜೆಗೆ ಮಲ್ಲಿಗೆಯು ಅತ್ಯಂತ ಪ್ರಮುಖ ಮತ್ತು ಅನಿವಾರ್ಯವಾಗಿರುವುದರಿಂದ ನಡೆಯುತ್ತಿರುವ ನವರಾತ್ರಿ ಉತ್ಸವದಿಂದಾಗಿ ಬೇಡಿಕೆಯಲ್ಲಿ ಹಠಾತ್ ಏರಿಕೆಯಾಗಿದೆ. ದಸರಾ ಹಬ್ಬದ ಸಂಭ್ರಮ ಮುಕ್ತಾಯಗೊಳ್ಳುವಷ್ಟರಲ್ಲಿ ಬೆಲೆಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಜಾಜಿ ಹೂವಿನ ದರವೂ ಸಹ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಅಟ್ಟೆಗೆ 800 ರೂ. ದರವಿದೆ. ಬೆಳೆಗಾಗರರ ಸಂಘದಲ್ಲಿ ಅಟ್ಟೆಗೆ 160 ರೂ. ದರವಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಎಲ್ಲ ಹೂವುಗಳ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ.

Post a Comment