".

Header Ads

ಚರ್ಚಿನಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಪಾದ್ರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

 

ಪ್ರಾರ್ಥನೆಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ನಗರದ ಚರ್ಚ್ ವೊಂದರ ಧರ್ಮಗುರು ವಿರುದ್ದ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಅಪ್ರಾಪ್ತ ವಯಸ್ಸಿನ ನೊಂದ ಬಾಲಕನು ಚರ್ಚಿಗೆ ಪ್ರಾರ್ಥನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ಚರ್ಚ್ನ ಫಾದರ್ ಅವರು ಲೈಂಗಿಕ ದುರುದ್ದೇಶದಿಂದ ಬಾಲಕನಿಗೆ ಚಾಕಲೇಟ್ ನೀಡಿ ಪುಸಲಾಯಿಸಿ, ಚರ್ಚ್ನ ಕೊಠಡಿಗೆ ಕರೆದೊಯ್ದು ಅನುಚಿತವಾಗಿ ವರ್ತಿಸುತ್ತಿದ್ದರು. ನಂತರದ ದಿನಗಳಲ್ಲೂ ಬಾಲಕ ಪ್ರಾರ್ಥನೆಗೆ ಹೋದಾಗಲೆಲ್ಲ ನಿರಂತರವಾಗಿ ಲೈಂಗಿಕ ಕಿರುಕುಳ ಮುಂದುವರಿದಿತ್ತು. ಆಗಸ್ಟ್ 14ರ ಸಂಜೆ 6:30ರ ಸುಮಾರಿಗೆ ಪ್ರಾರ್ಥನೆಗೆ ಹೋದಾಗ, ಬಾಲಕನನ್ನು ರಿಸೆಪ್ಷನಿಸ್ಟ್ ಕೊಠಡಿಗೆ ಕರೆಯಿಸಿಕೊಂಡ ಫಾದರ್ ತೀವ್ರ ಸ್ವರೂಪದ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಬಾಲಕನು ತನ್ನ ಸ್ನೇಹಿತರ ಬಳಿ ವಿಚಾರಿಸಿದಾಗ, ಅವರಿಗೂ ಇದೇ ರೀತಿ ನಿರಂತರವಾಗಿ ಕಿರುಕುಳ ನೀಡಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಭಯಭೀತನಾದ ಬಾಲಕನು ಪೋಷಕರಿಗೆ ವಿಷಯ ತಿಳಿಸಿದ್ದು, ಬಳಿಕ ಪೋಷಕರು ಬಿಷಪ್ ಅವರ ಬಳಿ ತೆರಳಿ ಘಟನೆಯನ್ನು ವಿವರಿಸಿದ್ದಾರೆ. ಬಿಷಪ್ ಅವರು ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವಿಳಂಬವಾಗಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Powered by Blogger.