ಅಂದು ಅಬ್ಬರಿಸಿದ್ದ ವಿಂಡೀಸ್ ಇಂದು ಮನೆಗೆ ತೆರಳಿದೆ...
ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿದ್ದ ಆ ಪಂದ್ಯದಲ್ಲಿ ಕೊನೇ ಓವರ್‌ನಲ್ಲಿ ವಿಂಡೀಸ್ ಗೆ ಕಪ್ ಗೆಲ್ಲಲು 19 ರನ್‌ಗಳ ಅಗತ್ಯವಿತ್ತು. 2016ರ ಏಪ್ರಿಲ್ 3ರ೦ದು ರೋಚಕವೆನಿಸಿದ್ದ ಆ ಪಂದ್ಯದಲ್ಲಿ ಪಂದ್ಯದಲ್ಲಿ ಕೊನೇ ಓವರ್‌ಗೆ ಸ್ಟ್ರೈಕ್‌ನಲ್ಲಿದ್ದ ಕಾರ್ಲೋಸ್ ಬ್ರಾತ್‌ವೇಟ್ ಬೆನ್ ಸ್ಟೋಕ್ಸ್ ಅವರ ಸತತ ನಾಲ್ಕು ಎಸೆತಗಳನ್ನು ಸಿಕ್ಸ್ ಮಯವಾಗಿಸಿದ್ದರು..
ವೆಸ್ಟ್ ಇಂಡೀಸ್ ಮಂಡಳಿಯಿಂದ ಕಿರುಕುಳಗಳನ್ನು ಸಹಿಸಿ ತಮ್ಮೊಳಗೆ ಹತಾಶೆ, ರೋಷವನ್ನು ತಡೆಹಿಡಿದಿಟ್ಟುಕೊಂಡಿದ್ದ ವಿಂಡೀಸ್ ಟಿ-20 ವಿಶ್ವಕಪ್ ನಲ್ಲಿ ಅದನ್ನು ಹೊರ ಹಾಕಿತ್ತು. ಗೆಲ್ಲಲೇ ಬೇಕೆಂಬ ಛಲದಲ್ಲಿ ಅಂತಿಮ ಹಂತದವರೆಗೂ ಪಂದ್ಯವನ್ನು ಇಂಗ್ಲೆಂಡ್ ಗೆ ಬಿಟ್ಟುಕೊಡದ ವಿಂಡೀಸ್ ಕೊನೆಗೂ ಜಯದ ಮಾಲೆಗೆ ಕೊರಳೊಡ್ಡಿತ್ತು.
4 ವಿಕೆಟ್‌ಗಳ ಜಯ ದಾಖಲಿಸಿ ಇನ್ನೂ 2 ಎಸೆತಗಳು ಬಾಕಿಯುಳಿಸಿ ವಿಂಡೀಸ್ ಎರಡನೇ ಟಿ20 ವಿಶ್ವಕಪ್ ಟ್ರೋಫಿ ಗೆದ್ದಿತ್ತು.
8ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಬ್ರಾತ್‌ವೇಟ್ 10 ಎಸೆತಗಳಿಗೆ ಅಜೇಯ 34 ರನ್ ಬಾರಿಸಿದ್ದರು. ಮತ್ತೊಬ್ಬ ದಾಂಡಿಗ ಮಾರ್ಲಸ್ ಸ್ಯಾಮುವೆಲ್ಸ್ 66 ಎಸೆತಗಳಲ್ಲಿ ಅಜೇಯ 85 ರನ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.
2012ರಲ್ಲಿ ಮೊದಲ ಟಿ20 ವಿಶ್ವಕಪ್ ಜಯಿಸಿದ್ದ ವಿಂಡೀಸ್ 2016 ರಲ್ಲಿ ದ್ವಿತೀಯ ಬಾರಿಗೆ ಕಪ್ ಗೆದ್ದಿತ್ತು.
ಅಂದು ಕಾರ್ಲೋಸ್ ಬ್ರಾತ್ ವೇಟ್ ಸಿಡಿಸಿದ ನಾಲ್ಕು ಮನಮೋಹಕ ಸಿಕ್ಸರ್ ಗಳು ವಿಶ್ವದ ಗಮನ ಸೆಳೆದಿದ್ದವು. ಈ ನಾಲ್ಕು ಸಿಕ್ಸರ್ ಗಳು ಟೂರ್ನಿಗೂ ಮೊದಲು ವಿಂಡೀಸ್ ತಂಡ ಅನುಭವಿಸಿದ ಅವಮಾನ, ನೋವು, ಹತಾಶೆ ಮತ್ತು ಗೆಲುವಿನ ಎಂಬ ಭಾವನೆ ಎಂಬುದಾಗಿ ಅಂದಿನ ನಾಯಕ ನಾಯಕ ಡರೇನ್ ಸಾಮಿ ಹೇಳಿದ್ದರು.
ಪಂದ್ಯದ ಬಳಿಕ ಮಾತನಾಡಿದ್ದ ಸಾಮಿ ತಮ್ಮದೇ ಕ್ರಿಕೆಟ್ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ದುಬೈನಲ್ಲಿ ಪ್ರಾಕ್ಟಿಸ್ ನಲ್ಲಿ ತೊಡಗಿದ್ದ ವೇಳೆ ಜೆರ್ಸಿಕೊಳ್ಳಲು ಹಣವಿಲ್ಲದೇ ಪರದಾಡಿದ್ದ ವಿಚಾರವನ್ನು ಭಾವೋದ್ವೇಗದಿಂದ ಹೇಳಿಕೊಂಡಿದ್ದರು. ನಿಜಕ್ಕೂ ವಿಂಡೀಸ್ ಆಟಗಾರರ ಈ ಕಥೆಯ ಜಾಲವನ್ನು ಕೆದಕಿದರೆ ಅಲ್ಲಿ ನೋವಿನ ಕಥೆಗಳ ಸರಪಳಿಯೇ ಬಿಚ್ಚಿಕೊಂಡಿತ್ತು.
ವಿಂಡೀಸ್ ಮಂಡಳಿಯ ವೇತನ ತಾರತಮ್ಯದಿಂದ ತೀವ್ರ ನೊಂದಿದ್ದ ವಿಂಡೀಸ್ ಆಟಗಾರರು, ಟಿ20 ವಿಶ್ವಕಪ್ ತೊರೆಯುವ ಕುರಿತು ಚಿಂತನೆಯಲ್ಲಿ ತೊಡಗಿದ್ದರು. ಈ ನಡುವೆ ಆಟಗಾರರ ನಡೆ ಕುರಿತು ಮಂಡಳಿಯಲ್ಲಿರುವ ಕೆಲ ಹಿರಿಯ ಆಟಗಾರರ ವಿರುದ್ಧ ವಾಗ್ದಾಳಿ ಮಾಡುವ ಮೂಲಕ ಅವರನ್ನು ಮತ್ತಷ್ಟು ರೊಚ್ಚಿಗೇಳುವಂತೆ ಮಾಡಿದ್ದರು. ವಿಂಡೀಸ್ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ತಿಕ್ಕಾಟ ಯಾವ ಮಟ್ಟಕ್ಕೆ ಹೋಗಿತ್ತು ಎಂದರೆ ಟಿ20 ವಿಶ್ವಕಪ್ ನಂತಹ ಪ್ರಮುಖ ಟೂರ್ನಿಯಿಂದಲೇ ಆಟಗಾರರು ಹೊರಗುಳಿಯು ನಿರ್ಧಾರ ಮಾಡಬೇಕಾಯಿತು. ಆದರೆ ಹಿರಿಯ ಆಟಗಾರರ ಸಂಧಾನ ಮತ್ತು ವೆಸ್ಟ್ ಇಂಡೀಸ್ ಅಧ್ಯಕ್ಷರ ಸ್ಪೂರ್ತಿಯ ಸಲಹೆಗಳು ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿತ್ತು. ಬಳಿಕ ನಡೆದಿದ್ದು ಇತಿಹಾಸ.
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದ ವೆಸ್ಟ್ ಇಂಡೀಸ್ 9 ವಿಕೆಟ್‌ಗಳ ಭಾರಿ ಅಂತರದಲ್ಲಿ ಐರ್ಲೆಂಡ್ ವಿರುದ್ಧ ಸೋತು ಸುಣ್ಣವಾಗಿದೆ. ಬಿ ಓವಲ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 147 ರನ್ ಗುರಿ ಹಿಂಬಾಲಿಸಿದ ಐರ್ಲೆಂಡ್ ತಂಡ ಪಾಲ್ ಸ್ಟರ್ಲಿಂಗ್(66* ರನ್) ಹಾಗೂ ಲಾರ್ಕನ್ ಟಕ್ಕರ್(45*) ಅಜೇಯ ಬ್ಯಾಟಿಂಗ್ ಬಲದಿಂದ 17.3 ಓವರ್‌ಗಳಿಗೆ ಕೇವಲ ಒಂದು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಸೂಪರ್ 12ರ ಹಂತಕ್ಕೆ ಲಗ್ಗೆ ಇಟ್ಟಿತು.
ಇದಕ್ಕೂ ಮುನ್ನ ಟಾಸ್ ಗದ್ದು ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡ ಪರ ಬಹುತೇಕ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಅತ್ಯುತ್ತಮ ಬೌಲಿಂಗ್ ದಾಳಿ ನಡೆಸಿ ಗ್ಯಾರೆಥ್ ಡಿಲೇನಿ ಅವರು, ಎವಿನ್ ಲೆವಿಸ್(13), ನಾಯಕ ನಿಕೋಲಸ್ ಪೂರನ್ (13) ಹಾಗೂ ರೊವ್ಮನ್ ಪೊವೆಲ್(6) ಸೇರಿ ಪ್ರಮುಖ ಕೀ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಬ್ರೆಂಡನ್ ಕಿಂಗ್ (ಅಜೇಯ 62 ರನ್, 48 ಎಸೆತ, 1 ಸಿಕ್ಸರ್ ಹಾಗೂ 6 ಬೌಂಡರಿ) ವೆಸ್ಟ್ ಇಂಡೀಸ್ ತಂಡಕ್ಕೆ ದೊಡ್ಡ ಮೊತ್ತ ತಂದುಕೊಡಲು ಸಾಕಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗದೆ ಹೋಯಿತು. ಆ ಮೂಲಕ ವಿಂಡೀಸ್ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲು ನೆರವಾಗಿದ್ದರು.
ಕ್ರಿಕೆಟ್ ಕೂಸು ಐರ್ಲೆಂಡ್ ವಿರುದ್ಧ ಸೋಲುವುದರೊಂದಿಗೆ ಎರಡು ಬಾರಿಯ ವಿಶ್ವ ಚಾಂಪಿಯನ್ಸ್ ಕೂಟದಿಂದ ಹೊರ ಬಿದ್ದಿರುವುದು ಇತರ ತಂಡಗಳು ನಿರಾಳವಾಗುವಂತೆ ಮಾಡಿರುವುದಂತೂ ಸತ್ಯ.


Post a Comment