'ಹೊಸ ವರುಷ ಹರುಷ ತರಲಿ'
ಹೇಳುತ್ತಿದ್ದರು...
ನಾವು ಎಲ್ಲವನ್ನೂ ಬದಲಾಯಿಸುತ್ತೇವೆ!
ಈಗ ನೋಡಿ, ಏನೆಲ್ಲ ಬದಲಾವಣೆ ಆಗಿದೆ?! ಬದಲಾದದ್ದು ಕ್ಯಾಲಂಡರ್ ವರ್ಷ 2022 ರಿಂದ 2023.
ನಾಯಕರು ಐದು ವರ್ಷಗಳಿಗೊಮ್ಮೆ ತಮ್ಮ ಭರವಸೆಗಳಿಂದ ಹಿಂದೆ ಸರಿಯುತ್ತಾರೆ. ಆದರೆ ಕ್ಯಾಲಂಡರ್ ವರ್ಷಕ್ಕೊಮ್ಮೆ ಬದಲಾಗುತ್ತದೆ.
ಅವರೆಲ್ಲ ದೊಡ್ಡ ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ- ಕ್ಯಾಲೆಂಡರ್ ಬದಲಾದಂತೆ.
2020 ಮತ್ತು2021 ನ್ನು ಕೊರೋನಾ ಭೀತಿಯಲ್ಲಿ ಕಳೆಯಲಾಗಿದೆ ಎಂದು 2022 ರಲ್ಲಿ ಹೇಳುತ್ತಿದ್ದರು. ಆದರೆ 2022 ನ್ನು ನೆಮ್ಮದಿಯಿಂದ ಬೀಳ್ಕೊಡೋಣ ಅಂದ್ರೆ ಮತ್ತೆ ಕೊರೋನಾ ನಾಲ್ಕನೆಯ ಅಲೆಯ ಭಯವನ್ನು ಹುಟ್ಟಿಸಿದ್ದಾರೆ.
ಹೊಸ ವರ್ಷದ 2023 ರ ಕ್ಯಾಲೆಂಡರ್ ಭಾನುವಾರದಿಂದ ಪ್ರಾರಂಭವಾಗುತ್ತದೆ. ಇದು ಭಾನುವಾರದಿಂದಲೇ ಕೊನೆಗೊಳ್ಳುತ್ತದೆ.
ಜಗತ್ತಿನ ಜನಸಾಮಾನ್ಯರಿಗೆ ಭಾನುವಾರ ರಜೆ. ಈ ಬಾರಿ 2023 ರ ಹೊಸ ವರ್ಷವು ಜನವರಿ 1 ರ ಭಾನುವಾರದಿಂದ ಪ್ರಾರಂಭವಾಗುತ್ತಿದೆ. ಡಿಸೆಂಬರ್ 31 ರ ಭಾನುವಾರದಂದು ಮುಕ್ತಾಯವೂ ನಡೆಯುತ್ತಿದೆ. ಭಾನುವಾರ ವರ್ಷದ ಮೊದಲ ದಿನ ಮತ್ತು ಕೊನೆಯ ದಿನ ಎಂಬುದು ಜನಸಾಮಾನ್ಯರಿಗೆ ಸಂತೋಷದ ಸಂಗತಿ! ಇದು ಕಾಕತಾಳೀಯವಾಗಿದೆ. ಅಂತಹ ಕ್ಯಾಲೆಂಡರ್ ಭಾನುವಾರದಂದು ಪ್ರಾರಂಭವಾಗಿ ಕೊನೆಗೊಳ್ಳುವ ಕಾಕತಾಳೀಯತೆಯು ಈ ಶತಮಾನದಲ್ಲಿ ಮೊದಲ ಬಾರಿಗೆ ಬಂದಿಲ್ಲ. ಈ ಹಿಂದೆ 2006 ಮತ್ತು 2017ರಲ್ಲಿಯೂ ಇದೇ ರೀತಿಯ ಕ್ಯಾಲೆಂಡರ್ ವರ್ಷದಲ್ಲಿ ಬಂದಿತ್ತು.
ಮುಂಬರುವ ವರ್ಷಗಳಲ್ಲಿ 2034, 2045, 2051, 2062, 2073, 2079 ಮತ್ತು 2090 ಈ ಕ್ಯಾಲೆಂಡರ್ ಮತ್ತೆ ಸೇರಿಕೊಳ್ಳುತ್ತದೆ. 21 ನೇ ಶತಮಾನದಲ್ಲಿ, ಅಂತಹ ಕ್ಯಾಲೆಂಡರ್ ಕಾಕತಾಳೀಯತೆಯು ಒಟ್ಟು 10 ಬಾರಿ ಬರುತ್ತದೆ.
ಮತ್ತೆ ಹೊಸ ವರ್ಷದಲ್ಲಿ ನಾವಿದ್ದೇವೆ. ಜಗತ್ತಿನ ಬಹುಪಾಲು ಜನರು ಇಂಗ್ಲಿಷ್ ತಿಂಗಳಿಂದ ಆರಂಭವಾಗುವ ಜನವರಿ ಒಂದನೇ ತಾರೀಕಿನಿಂದ ಹೊಸ ವರ್ಷವನ್ನು ಆಚರಿಸುವ ಪರಂಪರೆ ಇದೆ. ಭಾರತವನ್ನು ಸುಮಾರು ಮುನ್ನೂರು ವರ್ಷಗಳಷ್ಟು ಕಾಲ ಆಳಿದ ಬ್ರಿಟಿಷರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತಮ್ಮ ಜೊತೆ ತಂದಿದ್ದು, ಭಾರತದಲ್ಲೂ ಜನವರಿ 1ನೇ ತಾರೀಕಿನಿಂದ ಹೊಸ ವರ್ಷ ಎಂದು ಸಹಜವಾಗಿಯೇ ಆಚರಿಸುತ್ತಾರೆ.
ನೂತನ ವರ್ಷವೆಂದರೆ ಹಳೆಯದರ ಮೆಲುಕು ಹಾಕುತ್ತಾ, ಹೊಸ ಸಂಕಲ್ಪವನ್ನು ತಳೆಯುವುದಕ್ಕೆ ಪ್ರೇರಣೆ, ಡಿಸೆಂಬರ್ 31ರ ರಾತ್ರಿ ಮೋಜು ಮಸ್ತಿಯಲ್ಲಿ ಕಳೆಯುತ್ತಾ, ಹೊಸ ವರ್ಷವನ್ನು ಸ್ವಾಗತಿಸಿರುವ ಒಂದು ವರ್ಗವೂ ಇದೆ. ಆದರೆ, ನಿಜವಾಗಿ ಚಿಂತನ - ಮಂಥನ ಮಾಡುವುದು ಹೊಸ ವರ್ಷದ ಮೊದಲ ಕರ್ತವ್ಯ ನಮ್ಮದಾಗಬೇಕು. ಹಳೆಯ ವರ್ಷದ ತಪ್ಪುಗಳನ್ನು ನಾವು ಸರಿಪಡಿಸುವ, ತಿದ್ದಿ ಮುನ್ನಡೆಯುವ ದಿನವೇ ಹೊಸ ವರ್ಷದ ಸಂಕಲ್ಪವಾಗಬೇಕು. ಹಳೆ ಬೇರು, ಹೊಸ ಚಿಗುರು ಎಂಬ ಕವಿವಾಣಿಯನ್ನು ನೆನಪಿಸಿ ಮುನ್ನಡೆಯಬೇಕು. ಒಂದು ರೀತಿಯಲ್ಲಿ ಪ್ರತಿಯೊಬ್ಬರೂ ಋಣಗಳ ವರ್ತುಲದಲ್ಲೇ ಬದುಕಿರುತ್ತಾರೆ. ಈ ಋಣದಿಂದ ಮುಕ್ತರಾಗಬೇಕಾದರೆ ಸುತ್ತಲಿನ ಸಮಾಜಕ್ಕಾಗಿ ಏನಾದರೂ ಒಳ್ಳೆಯ ಕೆಲಸಗಳನ್ನು ಮಾಡುತ್ತಿರಬೇಕು.
ಹಳೆ ವರ್ಷದಲ್ಲಿ ನಮಗೆ ಉತ್ತರ ಸಿಗದ ನೂರಾರು ಪ್ರಶ್ನೆಗಳಿರಬಹುದು. ಆದರೆ, ಹಳೆಯ ಗಾಯವನ್ನು ಮತ್ತೆ ಮತ್ತೆ ಕೆದಕಿ ಹೊಸ ವಿವಾದಗಳಲ್ಲೇ ಖುಷಿ ಪಡುವ ವಿಕೃತರೂ ನಾವಾಗಬಾರದು. ನಕಲಿ ಕನಸುಗಳಿಂದ ಸಾಧ್ಯವಾದಷ್ಟು ದೂರ ಇರೋಣ.
ಇಂಗ್ಲಿಷ್ ನೂತನ ವರ್ಷಕ್ಕಿಂತ ಮೊದಲೇ ಬರುವ ದೀಪಾವಳಿಗೆ ನಾವೆಲ್ಲ ಕತ್ತಲೆಯಿಂದ ಬೆಳಕಿನಡೆಗೆ ಹೆಜ್ಜೆ ಇರಿಸುವ ಸಂಕಲ್ಪ ಮಾಡಿದ್ದವು. ಆ ಸಂಕಲ್ಪವನ್ನು ಮತ್ತೆ ನೆನಪಿಸಿ ಗಟ್ಟಿಗೊಳಿಸುವಂತೆ ಪ್ರೇರೇಪಿಸುವ ಈ ನೂತನ ವರ್ಷ 2023 ನಮ್ಮೆಲ್ಲ ತಪ್ಪುಗಳು ಮರುಕಳಿಸದಂತೆ ಎಚ್ಚರವನ್ನು ಮೂಡಿಸುವುದು. ಒಳ್ಳೆಯ ಜ್ಞಾನ ಪಡೆಯಲು ಪ್ರೇರೇಪಿಸುವುದು. ಇಂದು ನಮ್ಮ ದೇಶದಲ್ಲಿ ಏಕತೆಯ ಅಭಾವ, ಪ್ರಾಮಾಣಿಕತೆಯ ಅಭಾವವಿದೆ. ಪ್ರಜಾಪ್ರಭುತ್ವದ ಸರ್ಕಾರಗಳು ಪ್ರಜೆಗಳ ಅನುಕೂಲಕ್ಕಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಾಗಿರಿಸಿ ಜನರಿಗೆ ತಲುಪುವಂತೆ ಮಾಡಲು ಮುಂದಾಗುತ್ತವೆ. ಆದರೆ, ನಮ್ಮೆಲ್ಲರ ಸಹಕಾರ ನಿರೀಕ್ಷಿಸಿದಂತೆ ಸಿಗದಿರುವುದರಿಂದ ಹೊಸ ಹೊಸ ಯೋಜನೆಗಳು ಕೆಲವೊಮ್ಮೆ ವಿಫಲಗೊಳ್ಳುವ ಸಂಭವವಿದೆ. ಇದರಿಂದ ನಮಗೇ ಹೆಚ್ಚಿನ ಹಾನಿ ಎನ್ನುವುದೂ ಸತ್ಯಕ್ಕೆ ಹತ್ತಿರವಾದ ಮಾತು. ಇಂತಹ ಯಶಸ್ವಿ ಯೋಜನೆಗಳಿಗೆ ಬೆಂಬಲಿಸೋಣ. ಮುಂದಿನ ಹನ್ನೆರಡು ತಿಂಗಳುಗಳ ಜವಾಬ್ದಾರಿ, ಕರ್ತವ್ಯಗಳತ್ತ ಗಮನ ಹರಿಸೋಣ.
ಕಳೆದ ಎರಡೂವರೆ ವರ್ಷಗಳಿಂದ ಕೋವಿಡ್ ನಮ್ಮ ಎಲ್ಲಾ ಚಟುವಟಿಕೆಗಳನ್ನು ಗಂಟುಮೂಟೆ ಕಟ್ಟಿಸಿ ಮೂಲೆಯಲ್ಲಿರಿಸಿತ್ತು. ಡಿಸೆಂಬರ್ 2022 ರ ವೇಳೆಗೆ, ಅನೇಕ ನಿಷೇಧಗಳು ರದ್ದುಗೊಂಡು ಪೂರ್ವ ಕೋವಿಡ್ ರಸ್ತೆಗಳು, ಮಾರುಕಟ್ಟೆಗಳು, ದೇವಾಲಯಗಳು, ಮಸೀದಿಗಳು , ಪ್ರವಾಸಿ ಸ್ಥಳಗಳಲ್ಲಿ ಮತ್ತೆ ಜನಸಂದಣಿ ಕಾಣಿಸಿಕೊಳ್ಳಲಾರಂಭಿಸಿದವು.ಗ್ರಾಹಕರು 2019 ರ ಹಿಂದಿನ ಸಮಯ ಮರಳುತ್ತಿದೆ ಎಂದು ಹೇಳುತ್ತಿದ್ದಂತೆ.ವರ್ಷಾಂತ್ಯದ ವೇಳೆಗೆ, ಚೀನಾದಿಂದ ಬರುತ್ತಿರುವ ಕೊರೊನಾ ಹೊಸ ತಳಿಯ ಸುದ್ದಿಗಳು ಕೊರೊನಾದ ಹೊಸ ರೂಪದೊಂದಿಗೆ ಹೆದರಿಸಲಾರಂಭಿಸಿವೆ. 2023 ರ ಮುಂದಿನ ನಲುವತ್ತು ದಿನಗಳು ನಿರ್ಣಾಯಕ ಕಾಲ ಎಂದಿದ್ದಾರೆ ತಜ್ಞರು.
ಇಂದು ಭಾರತೀಯ ಭಾಷೆಗಳು ರಾಷ್ಟ್ರೀಯ ಚರ್ಚೆಗೆ ಹೊಸ ಪದವನ್ನು ಪಡೆದುಕೊಂಡಿವೆ . ವಿಭಜಿತ ಸಮಾಜದಲ್ಲಿ ನಿರೀಕ್ಷಿಸಬಹುದಾದಂತೆ ಎಲ್ಲಾ ಭಾಷಾ ಮಿತಿಗಳನ್ನು ಮುರಿದು ಅದರ ಚರ್ಚೆ ನಡೆಯುತ್ತಿದೆ. ವಿಶೇಷವಾಗಿ ತುಲನಾತ್ಮಕವಾಗಿ ಹೆಚ್ಚು ಪರಿಣಾಮಕಾರಿ ಸಂವಹನ ಮಾಧ್ಯಮದಲ್ಲಿ, ಸಾಮಾಜಿಕ ಮಾಧ್ಯಮವು ಮುಕ್ತ ಆಟವಾಗುತ್ತಿದೆ. ಬಹುತೇಕ ಕಡೆ ಸಂಪಾದಕರಂತಹ ವ್ಯಕ್ತಿ ಗಟ್ಟಿಯಾಗಿಲ್ಲದಿದ್ದಾಗ ನಿರೀಕ್ಷಿತ ಸ್ವಯಂ ಶಿಸ್ತು ಸಂಪೂರ್ಣ ಕಮ್ಮಿಯಾಗಿ ಟ್ವಿಟರ್, ಫೇಸ್ ಬುಕ್ ನಲ್ಲಿ ದುರುಪಯೋಗವಾಗುತ್ತಿದೆ.
ವರ್ಷದ ಅಂತ್ಯದ ವೇಳೆಗೆ, ರಾಜಧಾನಿ ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಇತ್ತೀಚಿನ ಹಿಂಸಾಚಾರದ ಉದಾಹರಣೆಗಳು ಕಂಡುಬಂದಿವೆ. ಮುಂಬೈನ ಹುಡುಗಿಯೊಬ್ಬಳ ಮೇಲೆ ವಿಧ್ವಂಸಕ ಕೃತ್ಯ ಸಂಭವಿಸಿದೆ. ಮತ್ತೊಂದೆಡೆ ಭಾರತ್ ಜೋಡೋ ಯಾತ್ರೆಯು ಚರ್ಚೆಯ ಬಿಸಿಯನ್ನು ಏರಿಸುತ್ತಿದೆ.
ಹಿಂದಿನ ಎರಡೂವರೆ ವರ್ಷಗಳಲ್ಲಿ ಕೊರೊನಾ ಕಾಲದ ಲಾಕ್ಡೌನ್ ನಲ್ಲಿ ಬದುಕಿನ ವಾಸ್ತವಿಕ ಅಗತ್ಯಗಳೇನು ಮತ್ತು ಯಾವ ವಸ್ತು ಎಷ್ಟು ನಮಗೆ ಬೇಕಾಗಿದೆ....? ಎನ್ನುವ ಮಹತ್ವದ ಪಾಠವನ್ನು ಕಲಿತಿದ್ದೇವೆ. ಬದಲಾವಣೆಯನ್ನು ನಾವು ಸ್ವೀಕರಿಸಲೇಬೇಕು. ಈ ಸ್ವೀಕರಿಸುವ ಸಂಕಲ್ಪವೇ ನಮ್ಮನ್ನು ಹೊಸ ಬದುಕಿನತ್ತ ಒಯ್ಯುತ್ತದೆ. ಯಾವುದೇ ರೋಗ ಶರೀರದ ಮೊದಲು ಮನಸ್ಸನ್ನು ಬೇಗನೆ ಆಕ್ರಮಿಸುತ್ತದೆ ಎನ್ನುವುದು ಕೊರೊನಾ ಕಾಲವು ಸಾಬೀತುಪಡಿಸಿದೆ.ಅದೇ ಸಂದರ್ಭದಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಸ್ವಚ್ಛತೆ ಮತ್ತು ಸಂಯಮವನ್ನೂ ಸಮಾಜಕ್ಕೆ ಕಲಿಸಿತು.
ಕೆಟ್ಟ ಸಮಯವು ಮತ್ತೆ ಎಂದೂ ಬಾರದಿರಲಿ ಎನ್ನುವುದು ಬರಲಿರುವ ಹೊಸ ವರ್ಷದಲ್ಲಿ ಎಲ್ಲರ ಪ್ರಾರ್ಥನೆ. ಆದರೆ ಪ್ರಕೃತಿಯ ನಿಯಮಗಳಲ್ಲಿ ಇದು ಎಂದಿಗೂ ಸಾಧ್ಯವಿಲ್ಲ. ಪ್ರಕೃತಿಯ ಜೊತೆ ನಮ್ಮ ಕೀಟಲೆಗೂ ಕಡಿವಾಣ ಇರಬೇಕಾಗಿದೆ. ಅತ್ತ ವೈರಸ್ಸು ಪ್ರಾಕೃತಿಕ ರೂಪದಿಂದ ಸೃಷ್ಟಿಯಾಗುತ್ತದೆಯೋ ಅಥವಾ ಲ್ಯಾಬ್ ನಲ್ಲಿ ವಿಕಸಿತಗೊಳಿಸಲಾಗುತ್ತದೆಯೋ? ಈ ರಹಸ್ಯದ ಹುಡುಕಾಟದಲ್ಲೂ ಈಗಲೂ ಕೆಲವರು ಮಗ್ನರಾಗಿದ್ದಾರೆ. ಟೆಕ್ನಾಲಜಿ ನಮ್ಮನ್ನು ಬದುಕಿಸುತ್ತದೆ ಎಂಬ ಭ್ರಮೆಯಿಂದ ಈ ಕೊರೊನಾ ದೃಶ್ಯಗಳ ನಂತರ ದೂರವಾಗಿದ್ದೇವೆ.
2020 ಮತ್ತು 2021 ರ ಕಹಿ ನೆನಪುಗಳನ್ನು ಮರೆತು 2022 ರಲ್ಲಿ ನಾವು ಮತ್ತೆ ಹೊಸ ಬದುಕಿನತ್ತ ಸಾಗಿದೆವು. ಕೆಟ್ಟ ಜಂತುವನ್ನು ಓಡಿಸಲು ಆಗದಿದ್ದರೆ ಕೊನೆಗೆ ಅದರಿಂದ ದೂರನಿಂತು ಪಾರಾಗುವುದು ಹೇಗೆ ಎನ್ನುವುದನ್ನಾದರೂ ಕಲಿಯಬೇಕು. ಹಾಗಾಗಿ ಸಕಾರಾತ್ಮಕ ವಿಚಾರಗಳಿಂದ ನಾವು ಭವಿಷ್ಯದತ್ತ ದಾಪುಗಾಲು ಇಡಬೇಕಾಗಿದೆ.
ಮನದ ಶಕ್ತಿಯಿಂದ ಮತ್ತು ಪರಿವಾರದ ಸಂಬಂಧಗಳ ಗಟ್ಟಿತನದಿಂದ ಮಾತ್ರ ನಾವು ಮುಂದಿನ ದಿನಗಳ ಕಷ್ಟಗಳನ್ನು ದೂರ ಗೊಳಿಸಲು ಪ್ರಯತ್ನಿಸಬಹುದಾಗಿದೆ.
ಹಾಗೆ ನೋಡಿದರೆ ಇತಿಹಾಸದ ಪುಟಗಳಲ್ಲಿ ಕೆಟ್ಟ ವರ್ಷಗಳು ಹಿಂದೆಯೂ ಬಹಳಷ್ಟು ಬಂದಿವೆ . ಭೀಕರ ಯುದ್ಧ, ಪ್ರಕೃತಿ ವಿಕೋಪ , ಮಹಾಮಾರಿ.... ಹೀಗೆ ಸಂಪೂರ್ಣ ಮಾನವ ಜಾತಿಯ ಅಸ್ತಿತ್ವವೇ ಸಂಕಷ್ಟಕ್ಕೆ ಬಿದ್ದಿರುವ ವರ್ಷಗಳು ವಿಶ್ವದಲ್ಲಿ ಹಿಂದೆಯೂ ಆಗಿಹೋಗಿವೆ. ಅಂತಹ ವರ್ಷಗಳಲ್ಲಿ ಈಗ 2020 - 2021 ಸೇರಿಕೊಂಡಿದ್ದು 2022 ಅದರಿಂದ ಹೊರಬಂದಿತ್ತು.ಆದರೆ 2023 ರ ಭವಿಷ್ಯ......? ಕಾದು ನೋಡಬೇಕಾಗಿದೆ.
ಇನ್ನು ಮುಂದೆ ಪ್ರತೀದಿನವೂ ನಾವು ಗೆಲ್ಲಬೇಕಾಗಿದೆ. ಕಾಲಚಕ್ರದಲ್ಲಿ ಹೊಸವರ್ಷ 2023 ಎಂತೆಂಥ ಸವಾಲುಗಳನ್ನು ಮುಂದೊಡ್ಡಬಹುದು...?ಅದನ್ನೆಲ್ಲ ಎದುರಿಸಲು ಸಮರ್ಥ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕಾಗಿದೆ.
ಪ್ರತೀ ಸಂಕಟವು ಯಾವುದಾದರೊಂದು ಹೊಸ ಪರ್ಯಾಯವನ್ನು ನಮಗೆ ಕಾಣಿಸುತ್ತಾ ಬಂದಿದೆ. ಕೋವಿಡ್-19 ಉದ್ಯೋಗ ಜಗತ್ತಿನಲ್ಲಿ ಡಿಜಿಟಲ್ ಮಹತ್ವವನ್ನು ಪ್ರೇರೇಪಿಸಿತು.ಮನೆಗಳಲ್ಲಿ ತಮ್ಮ ಪರಿವಾರದ ಜೊತೆ ಎಷ್ಟೋ ದಶಕಗಳಲ್ಲಿ ಮೊದಲ ಬಾರಿಗೆ ಜೊತೆಯಾಗಿ ಒಂದಷ್ಟು ಸಮಯ ಕಾಲಕಳೆಯುವಂತೆ ಮಾಡಿತ್ತು.ಸಮಯದ ಜೊತೆ ಬದುಕಿನಲ್ಲಿ ಖುಷಿಯ ಹುಡುಕಾಟವೂ ಇದೆ ಎಂಬುದು ನಮಗೂ ಒಂದಿಷ್ಟು ಅರ್ಥ ಮಾಡಿಸಿದೆ .ಪರಸ್ಪರ ಸಾಮಾಜಿಕ ಸಂಬಂಧ ,ಸ್ವಚ್ಛತೆ ,ಮತ್ತು
ಲೇಬರ್ ಕ್ಲಾಸಿನ ಮಹತ್ವವನ್ನು ಸಮಾಜಕ್ಕೆ ಮನದಟ್ಟು ಪಡಿಸಿದ್ದು, ಹಿಂದೆಂದಿಗಿಂತ ಇವುಗಳಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ.
ಈ ನೂತನ ವರ್ಷದಲ್ಲಿ ಪ್ರತಿದಿನವೂ ಹೊಸದಿನವೆಂದು ಭಾವಿಸಿ ನಮ್ಮ ಜೀವನವನ್ನು ಉಪಯುಕ್ತವಾಗಿಸುತ್ತಾ ಸಮಾಜದ ಏಳಿಗೆಯಲ್ಲೂ ನಮ್ಮ ನಮ್ಮ ಕೊಡುಗೆಯನ್ನು ಸಾಧ್ಯವಾದಷ್ಟು ನೀಡುತ್ತಾ, ದೇಶವನ್ನು ಇನ್ನಷ್ಟು ಪ್ರಗತಿಪಥದತ್ತ ಸಾಗಿಸಲು ಅಳಿಲ ಸೇವೆ ಮಾಡುತ್ತಿರೋಣ ಎಂದು ಆಶಿಸೋಣ.
ಕೊನೆಗೂ ಹೊಸ ವರ್ಷ ಎಂದರೆ ಬದುಕಲು ಸಹಕಾರಿ ಆಗುವ ನಿಟ್ಟಿನಲ್ಲಿ ಒಂದು ಗುರಿ ನಿಗದಿ ಮಾಡಲು ಮತ್ತೆ ನಮಗೆ ಸಿಗುವ ಅವಕಾಶ. ನಮ್ಮ ಇತಿ ಮಿತಿ ಅರಿತು ನಾವು ನೂತನ ವರ್ಷದಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಈ ಹಿಂದಿನ ವರ್ಷದ ನಮ್ಮ ಕೆಲವು ಸೋಲುಗಳಿಗೆ ಕಾರಣವಾದ ತಪ್ಪುಗಳನ್ನು ಮತ್ತೆ ಮಾಡದಿರುವಂತೆ ನೆನಪಿಸುವ ದಿನಗಳು ನಮ್ಮೆದುರು ಇರುವಂಥದ್ದು. ಮುಂದಿನ ಗುರಿಯನ್ನು ಹೇಗೆ ತಲುಪಬೇಕೆಂದು ನಾವೇ ಪ್ರಶ್ನೆಗಳನ್ನು ಹಾಕಿಕೊಂಡು ವಿಮರ್ಶೆ ಮಾಡಿ ಮುಂದಡಿ ಇಡುವ. ಈ ನೂತನ ವರ್ಷದಲ್ಲೂ ಜಿಜ್ಞಾಸೆಗಳು ಮುಂದುವರಿಯಲಿ. ಸ್ವಚ್ಛವಾಗುವ ಮನಸ್ಸುಗಳನ್ನು ಮತ್ತೆ ಮತ್ತೆ ಬೆಳೆಸೋಣ ಎನ್ನುತ್ತಾ ಎಲ್ಲರಿಗೂ ಹೊಸ ವರುಷ ಹರುಷ ತರಲಿ ಎಂದು ಹಾರೈಸುವೆ.
✍ಶ್ರೀನಿವಾಸ ಜೋಕಟ್ಟೆ, ಮುಂಬಯಿ
























Post a Comment