".

Header Ads

ವೈಕುಂಠ ಏಕಾದಶಿಯ ವಿಶೇಷ

 

"ವೈಕುಂಠ ಏಕಾದಶಿ" ಇದನ್ನ ಮುಕ್ಕೋಟಿ  ಏಕಾದಶಿ ಎಂತಲೂ ಕರೆಯುತ್ತಾರೆ. ಇಂದು  ವೈಕುಂಠದ ದ್ವಾರ ತೆರೆದಿರುತ್ತದೆ. ಇದನ್ನ ಮುಕ್ಕೋಟಿ ಏಕಾದಶಿ ಎಂದು ಏಕೆ ಕರೆಯುತ್ತಾರೆ ಎಂದರೆ ಈ ದಿನ ಶ್ರೀಮಹಾವಿಷ್ಣುವು ಶ್ರೀದೇವಿ ಭೂದೇವಿ ಸಹಿತ ನಾಗಿ ಗರುಡವಾಹನ ರೂಢನಾಗಿ ವೈಕುಂಠದಲ್ಲಿ ಉತ್ತರ ದ್ವಾರದ ಕಡೆ ಬಂದಾಗ ಸಕಲ ದೇವಾನುದೇವತೆಗಳ ಶ್ರೀ ಮಹಾವಿಷ್ಣುವಿನ ದರ್ಶನವನ್ನು ಪಡೆಯುತ್ತಾರೆ. ಮುಕ್ಕೋಟಿ ದೇವತೆಗಳು ಒಟ್ಟಿಗೆ ಸೇರಿ ವಿಷ್ಣುವಿನ ದರ್ಶನ ಪಡೆಯುವ ವಿಶೇಷ ದಿನವೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎಂದು ಕರೆಯುತ್ತಾರೆ. ಈ ದಿನ ಯಾರು ಉಪವಾಸವನ್ನು ಮಾಡಿ ಭಗವಂತನ ನಾಮ ಸ್ಮರಣೆಯಲ್ಲಿ ಕಳೆಯುತ್ತಾರೆ ಅಂತವರಿಗೆ  ಶ್ರೀ ಮಹಾವಿಷ್ಣುವಿನ ಅನುಗ್ರಹದೊಂದಿಗೆ,  ಸಕಲ ಇಷ್ಟಾರ್ಥಗಳು ನೆರವೇರುತ್ತದೆ.  ದೈವಾನುಗ್ರಹ  ಲಭಿಸುತ್ತದೆ. ಎಂದು ಪ್ರತೀತಿ ಇದೆ.

ಏಕಾದಶಿ ಉಪವಾಸ,  ಧಾರ್ಮಿಕವಾಗಿಯೂ, ವೈಜ್ಞಾನಿಕವಾಗಿಯೂ ಅತ್ಯುತ್ತಮವಾಗಿದ್ದು.  ಇದು ಆತ್ಮವನ್ನು ಶುದ್ಧೀಕರಿಸಲು  ಹಾಗೂ ಮೋಕ್ಷವನ್ನು ಸಾಧಿಸಲು  ಸಹಾಯಕವಾಗುತ್ತದೆ.   ಹಿಂದೂ  ಪಂಚಾಂಗದ ಪ್ರಕಾರ ಏಕಾದಶಿ ಹನ್ನೊಂದನೇ ದಿನ ಬರುತ್ತದೆ. ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ 11ನೇ ದಿನವೇ ಏಕಾದಶಿ. ಹಿಂದೂ ಸಂಪ್ರದಾಯಸ್ಥರು ಇದನ್ನು ಶುಭದಿನವೆಂದು  ಪರಿಗಣಿ ಸುತ್ತಾರೆ. ಈ ದಿನ ನಿಟ್ಟುಪವಾಸ ಮಾಡುವುದರ ಹೊರತಾಗಿಯೂ ಕೆಲವರು ಲಘು ಫಲಹಾರವನ್ನು  ತೆಗೆದುಕೊಳ್ಳುತ್ತಾರೆ. ಅಂದರೆ ಹಣ್ಣು, ಹಾಲು ಮುಸುರೆಯಲ್ಲದ ಪದಾರ್ಥ ತೆಗೆದುಕೊಂಡು  ಜನಗಳ ಸಂಪರ್ಕದಿಂದ ದೂರವಿದ್ದು ಹರಿ ನಾಮ ಜಪದಲ್ಲಿ ದಿನವನ್ನು  ಕಳೆಯುತ್ತಾರೆ.  ಅಂದಾಜಿನಂತೆ  ಒಂದು ವರ್ಷದಲ್ಲಿ  24 ಏಕಾದಶಿ ಬರುತ್ತದೆ. ಇವೆಲ್ಲ ವಿಷ್ಣುವಿನ ಒಂದೊಂದು ಅವತಾರವೆಂದು ತಿಳಿಸಲಾಗಿದೆ. ಮಾನಸಿಕವಾಗಿ, ಬೌದ್ಧಿಕವಾಗಿ ,ದೃಢಚಿತ್ತ  ಹೊಂದಲು ಏಕಾದಶಿ ಉಪವಾಸ ಪೂರಕವಾಗಿದೆ.

ಈ  ದಿನವೇ   ಏಕೆ  ಉಪವಾಸ  ಮಾಡಬೇಕೆಂದರೆ, ಹನ್ನೊಂದನೇ ದಿನ ಅಂದರೆ  ಏಕಾದಶಿ  ಬರುವ  ದಿನದಲ್ಲಿ,  ಹುಣ್ಣಿಮೆ ಅಥವಾ ಅಮಾವಾಸ್ಯೆ  ಹತ್ತಿರವೇ ಇರುವುದರಿಂದ, ವಾತಾವರಣದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ.  ಅಂದರೆ ರಜಸ- ತಾಮಸ ಗುಣಗಳೇ ಜಾಸ್ತಿ ಇರುತ್ತದೆ.  ಇದು ದೇಹ ಮತ್ತು ಮನಸ್ಸಿನ ಮೇಲೆ ಅಹಿತಕರ ಪ್ರಭಾವವನ್ನು ಬೀರುತ್ತದೆ. ಆದುದರಿಂದ ಏಕಾದಶಿ ದಿನದಂದು ಉಪವಾಸ ಮಾಡಿ ಭಗವಂತನ  ಸ್ಮರಣೆ, ಮಾಡಿದರೆ ಸಾತ್ವಿಕ ಗುಣ ಹೆಚ್ಚಾಗುತ್ತದೆ.  ಸಾತ್ವಿಕ ಗುಣ ಹೆಚ್ಚಾದರೆ,  ಶರೀರ ಮತ್ತು ಮನಸ್ಸು ಸದೃಢವಾಗಿರುತ್ತದೆ. ‌ ಆಹಾರಕ್ಕೂ -ದೇಹಕ್ಕೂ- ಮನಸ್ಸಿಗೂ, ಒಂದಕ್ಕೊಂದು ಸಂಬಂಧವಿರುವುದರಿಂದ ಏಕಾದಶಿಯಂದು ಉಪವಾಸ ಅಥವಾ ಅಲ್ಪ ಆಹಾರ ಸೇವನೆ ಮಾಡಿ ದೇವರ ಸ್ಮರಣೆ ಮಾಡುವುದರಿಂದ ಸಾತ್ವಿಕ ಗುಣ ಹೆಚ್ಚಾಗಿ  ದೇಹ ಮತ್ತು ಮನಸ್ಸು ಸ್ವಸ್ಥವಾಗಿ ಇರುತ್ತದೆ.

ಪುರಾಣದ ಪ್ರಕಾರ ಏಕಾದಶಿ ಮಹತ್ವವುಳ್ಳದ್ದಾಗಿದೆ ಎಂಬುದಕ್ಕೆ ಇದಕ್ಕೊಂದು ಕಥೆ ಇದೆ:-   ಒಮ್ಮೆ ದೇವತೆಗಳ ರಾಜನಾದ ಇಂದ್ರನು ತನ್ನ ಐರಾವತದ ಮೇಲೇರಿ ಸವಾರಿ ಮಾಡುತ್ತಿದ್ದನು. ಅದೇ  ಸಮಯಕ್ಕೆ ಎದುರಿಗೆ ದೂರ್ವಾಸ ಮಹರ್ಷಿಗಳು ಬಂದರು.  ರಾಜನಿಗೆ ಗೌರವ ಸಲ್ಲಿಸುವುದು ಕರ್ತವ್ಯ ಅಂದುಕೊಂಡು  ಎಲ್ಲಕ್ಕೂ ಶೋಭಾಯಮಾನವಾಗಿ, ಸುವಾಸನೆಯುಳ್ಳ ಹೂವಿನ ಮಾಲೆಯನ್ನು ಇಂದ್ರನಿಗೆ ಗೌರವದಿಂದ ಕೊಟ್ಟರು.  ಇಂದ್ರನು ಒಂದು ತರಹ ತಿರಸ್ಕಾರ ಹಾಗೂ ದುರಹಂಕಾರದಿಂದ ಆ ಹೂವಿನ ಮಾಲೆಯನ್ನು ಆನೆಯ ಕುತ್ತಿಗೆಗೆ  ಎಸೆದನು. ಆನೆಗೆ ಆ ಹೂವಿನ ಸುಗಂಧ ಸಹ್ಯವಾಗದೇ ರೊಚ್ಚಿಗೆದ್ದು ಅದನ್ನು ನೆಲದ ಮೇಲೆ ಹಾಕಿ ತನ್ನ ಕಾಲಿನಿಂದ ತುಳಿದು ಹೊಸಕಿ ಹಾಕುತ್ತದೆ.  ಇದನ್ನು ನೋಡಿದ ದುರ್ವಾಸ ಮುನಿಗಳಿಗೆ  ಕೋಪ  ನೆತ್ತಿಗೇರುತ್ತದೆ.  ಋಷಿಮುನಿಗಳು   ಆಶೀರ್ವಾದ ರೂಪದಲ್ಲಿ ಕೊಟ್ಟ ಹೂವಿನ ಮಾಲೆಯನ್ನು ಇಂದ್ರನು  ತಿರಸ್ಕಾರದಿಂದ ಆನೆಗೆ ಹಾಕಿ ಅದರ  ಕಾಲಲ್ಲಿ ತುಳಿಸಿ ಅವಮರ್ಯಾದೆ ಮಾಡಿದನಲ್ಲ ಎಂದುಕೊಂಡ
ಅವರು  ತಮ್ಮ ಕಮಂಡಲದಿಂದ ನೀರನ್ನು ತೆಗೆದು "ಇಂದ್ರನ ಸಮೇತ ದೇವಾನು-ದೇವತೆಗಳ ಶಕ್ತಿ ಹೋಗಲಿ ಐಶ್ವರ್ಯ ನಶಿಸಿ ಹೋಗಲಿ" ಎಂದು ಶಾಪ ಕೊಟ್ಟರು.  ಕೆಟ್ಟ ಮೇಲೆ ಬುದ್ಧಿ ಬಂತು ಅಟ್ಟ ಮೇಲೆ ಒಲೆ ಉರಿಯಿತು ಎಂಬಂತೆ ಇಂದ್ರನಿಗೆ ಬುದ್ಧಿ ಬಂತು,  ಅಂಬಾರಿ ಯಿಂದ ಕೆಳಗಿಳಿದು ದುರ್ವಾಸ ಮುನಿಗಳ ಪಾದಕ್ಕೆ ನಮಸ್ಕರಿಸಿ ಕ್ಷಮೆ ಕೇಳುತ್ತಾನೆ. ಆದರೆ ಫಲಿಸಲಿಲ್ಲ.

ಶಾಪದ ಕಾರಣದಿಂದ ಸ್ವಲ್ಪ ಸಮಯದಲ್ಲೇ ರಾಕ್ಷಸರು ದೇವತೆಗಳ ಮೇಲೆ ಯುದ್ಧ ಸಾರಿದರು. ಎಷ್ಟು ಸಾರಿ ಯುದ್ಧಮಾಡಿದರು, ದೇವತೆಗಳೆಲ್ಲ ಶಕ್ತಿಹೀನ ರಾದ  ಕಾರಣ ರಾಕ್ಷಸರೇ ಗೆಲ್ಲುತ್ತಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ರಾಕ್ಷಸರ ರಾಜ ಬಲಿಚಕ್ರವರ್ತಿ ಮೂರು ಲೋಕಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕು ಎಂಬ ಯೋಚನೆ ಹಾಕಿಕೊಂಡನು.  ದೇವತೆಗಳು ಹೆದರಿ ವಿಷ್ಣುವಿನ ಹತ್ತಿರ ಬಂದು ತಮ್ಮ ಸಂಕಟವನ್ನು ಹೇಳಿಕೊಂಡು, ದೇವಾ, ಬಲಿಚಕ್ರವರ್ತಿ ಮೂರು ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡರೆ ಲೋಕಕ್ಕೆ ಅವನು  ಕಂಟಕ ನಾಗುತ್ತಾನೆ.  ಅವನನ್ನು ಈಗಲೇ ನಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.  ದೇವತೆಗಳ ಮಾತನ್ನು ಆಲಿಸಿದ ವಿಷ್ಣು ಕಾರ್ಯ ಪ್ರವೃತ್ತನಾಗಿ,  ವಾಮನಾವತಾರ  ಧರಿಸಿ, ಮೂರು ಹೆಜ್ಜೆ ಮೂಲಕ ಬಲಿಚಕ್ರವರ್ತಿಯ ಎಲ್ಲಾ ಸಂಪತ್ತುನ್ನು  ಪಡೆದು ಗೌರವಯುತವಾಗಿ ಪಾತಾಳಲೋಕಕ್ಕೆ ಕಳಿಸುತ್ತಾನೆ.

ವಿಷ್ಣು ಪಾತಾಳಲೋಕಕ್ಕೆನೂ  ಬಲಿಯನ್ನು  ತಳ್ಳಿದ. ಆದರೆ ದೇವತೆಗಳ ಶಕ್ತಿ ಮಾತ್ರ  ದೀನೇ ದೀನೇ  ಕ್ಷೀಣಿಸುತ್ತಿತ್ತು. ಮತ್ತೆ ದೇವತೆಗಳು  ವಿಷ್ಣುವಿನ ಹತ್ತಿರ ಹೋಗಿ ಪರಿಹಾರ ಕೇಳಿದರು.  ಕ್ಷೀರ ಸಾಗರವನ್ನು ಕಡೆದು ಅಲ್ಲಿ ದೊರೆಯುವ ಅಮೃತವನ್ನು ದೇವತೆಗಳು ಸೇವಿಸಿದರೆ ಕಳೆದುಹೋದ ಶಕ್ತಿ  ಮರಳಿ ದೊರೆಯುತ್ತದೆ  ಎಂದು ವಿಷ್ಣು  ಸಲಹೆ ಕೊಟ್ಟನು. ಭಗವಂತ ನೀನು ಹೇಳಿದ್ದೇನೋ ಸರಿ.  ಆದರೆ ನಾವು ಅಮೃತಕ್ಕಾಗಿ ಸಮುದ್ರಮಥನ  ಮಾಡಲು ಹೋದರೆ  ರಾಕ್ಷಸರು ಬರುತ್ತಾರೆ‌  ಏನು ಮಾಡುವುದು ಎಂದು ಕೇಳಿದರು.  ಮತ್ತೆ ವಿಷ್ಣು ಇನ್ನೊಂದು ಉಪಾಯ ಹೇಳಿದ. ರಾಕ್ಷಸರು  ಕೇಳಿದರೆ ಅವರಿಗೆ ಸಮುದ್ರಮಥನ ಕಾರ್ಯದಲ್ಲಿ  ನೀವು ನಮಗೆ  ಸಹಾಯ ಮಾಡಿ ಬರುವ ಅಮೃತದಲ್ಲಿ  ಇಬ್ಬರು ಸಮಪಾಲು  ಹಂಚಿಕೊಳ್ಳೋಣ ಎಂದು ಹೇಳಿ ಇದೇ ಸಲಹೆಯನ್ನು  ರಾಕ್ಷಸರಿಗೆ  ತಿಳಿಸಿದರು.  ಈ ರೀತಿ ರಾಕ್ಷಸರನ್ನು  ದೇವತೆಗಳು
ಸಮಾಧಾನಪಡಿಸಿದರು.   ಸಮುದ್ರಮಥನ  ಮಾಡಲು  ಮಂದರ ಪರ್ವತವನ್ನು ಕಡಗೋಲಾಗಿಯೂ, ವಾಸುಕಿ ಯನ್ನು‌ ಹಗ್ಗವಾಗಿಯೊ  ಮಾಡಿಕೊಂಡು  ದೇವ- ದಾನವರು   ಜೊತೆಯಾಗಿ ಕ್ಷೀರ ಸಮುದ್ರವನ್ನು ಕಡೆ
ಯುತ್ತಾರೆ. ಅದೇ ಸಮಯದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ದೇವತೆಗಳಿಗೆ ಶಕ್ತಿ ಬರಲಿ, ಮತ್ತು ಅಧಿಕಾರ , ಸಂಪತ್ತು ,ಸೌಭಾಗ್ಯ ಸಿದ್ಧಿಸಲಿ  ಎಲ್ಲರಿಗೂ ಸನ್ಮಂಗಳವಾಗಲಿ ಎಂದು, ಋಷಿಮುನಿಗಳು ಇಡೀ ದಿನ  ಉಪವಾಸವಿದ್ದು ಭಗವಂತನನ್ನು ಪ್ರಾರ್ಥಿಸುತ್ತಾ ಯಾಗ ಮಾಡುತ್ತಾರೆ.
ಶ್ರೀ ಸೂಕ್ತ ,ಪುರುಷುಕ್ತ ವನ್ನು  ದಿನವಿಡೀ ಪಟಿಸುತ್ತಾರೆ, ದೇವತೆಗಳ ಒಳತಿಗಾಗಿ
ಋಷಿ ಮುನಿಗಳೆಲ್ಲ ಇಡೀ ದಿನ ಉಪವಾಸವಿದ್ದು ,  ಶ್ರದ್ಧಾ ಭಕ್ತಿಯಿಂದ  ಯಜ್ಞ ಯಾಗಾದಿ ಗಳನ್ನು ಮಾಡಿ, ದೇವತೆಗಳಿಗೆ ಹವಿಸ್ಸನ್ನು ಕೊಟ್ಟು, ಭಗವನ್ನಾಮ ಸ್ಮರಣೆ  ಮಾಡುತ್ತಾ ಪ್ರಾರ್ಥಿಸಿದರು.

ಅಂತಹ ಶುಭದಿನವೆ  'ಏಕಾದಶಿ' ಯಾಗಿದ್ದು , ಅಂದಿನಿಂದಲೇ ಇಂತಹ ಪವಿತ್ರವಾದ  'ಏಕಾದಶಿ ವ್ರತ' ಆಚರಣೆಗೆ  ಬಂದಿತು. ಈ ರೀತಿಯಾಗಿ ಏಕಾದಶಿಯಂದು ಉಪವಾಸ ಮಾಡಿ ಭಗವಂತನ ಧ್ಯಾನ ಮಾಡಿದರೆ ಆಯುರಾರೋಗ್ಯ ಐಶ್ವರ್ಯಾದಿಗಳು ಅಭಿವೃದ್ಧಿಯಾಗುತ್ತದೆ ಎಂದು ಶ್ರೀಕೃಷ್ಣನು ಏಕಾದಶಿ ವ್ರತದ ಮಹತ್ವವನ್ನು ಧರ್ಮರಾಯನಿಗೆ ತಿಳಿಸುತ್ತಾನೆ.

ಅಚ್ಯುತಂ ಕೇಶವಂ ರಾಮ ನಾರಾಯಣಂ
ಕೃಷ್ಣ ದಾಮೋದರಂ ವಾಸುದೇವಂ ಹರಿಂ!
ಶ್ರೀಧರಂ  ಮಾಧವಂ ಗೋಪಿಕಾವಲ್ಲಭಂ
ಜಾನಕಿ ನಾಯಕಂ ರಾಮಚಂದ್ರಂ ಭಜೆ!!

 
ಬರಹ:- ಆಶಾ ನಾಗಭೂಷಣ.



























Powered by Blogger.