".

Header Ads

ಮುಂಬಯಿ ಕಾಲ್ಚೆಂಡು ಲೋಕದ ಧ್ರುವತಾರೆ ಸುರೇಂದ್ರ ಕರ್ಕೇರ ಇನ್ನು ನೆನಪು ಮಾತ್ರ



ಮಾಯಾನಗರಿಯ ಫುಟ್ಬಾಲ್ ಕ್ಷೇತ್ರದಲ್ಲಿ ಹದಿ ಹರೆಯದ ಮಕ್ಕಳಿಗೆ ಉಚಿತ ತರಭೇತಿ ಶಿಬಿರ ನಡೆಸಿ ದೇಶದಲ್ಲಿ ಹೊಸ ಫುಟ್ಬಾಲ್ ತಾರೆಯರನ್ನು ಸೃಷ್ಟಿಸಿದ್ದ ಬಿಪಿನ್ ಫುಟ್ಬಾಲ್ ಅಕಾಡೆಮಿ ಸಂಸ್ಥಾಪಕ ದಿಗ್ಗಜ ಸುರೇಂದ್ರ ಕರ್ಕೇರ ಜ.17 ರಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.

ಮುಂಬಯಿ ಕಾಲ್ಚೆಂಡು ಲೋಕದ ಶ್ರೇಷ್ಠ ಸಂಸ್ಥೆಯೆಂದು ಬಣ್ಣಿಸಲ್ಪಟ್ಟ ಬಿಪಿನ್ ಫುಟ್ಬಾಲ್ ಅಕಾಡೆಮಿಯನ್ನು 1989 ರಲ್ಲಿ ಸ್ಥಾಪಿಸಿದ್ದ (ಈ ಮೊದಲು 'ಬಿಪಿನ್ ಮೆಮೋರಿಯಲ್ ಫುಟ್ಬಾಲ್ ಟೂರ್ನಮೆಂಟ್ ಸಮಿತಿ ಆಗಿತ್ತು) ಸುರೇಂದ್ರ ಕರ್ಕೇರ ಅವರು ಕಳೆದ 34 ವರ್ಷಗಳಿಂದ   16 ರ ಹರೆಯದ ಕೆಳಗಿನ ಬಾಲಕ- ಬಾಲಕಿಯರಿಗಾಗಿ ಮುಂಬಯಿಯ ವಿವಿಧ ನಗರಗಳಲ್ಲಿ ಉಚಿತ ತರಬೇತು ಶಿಬಿರ ನಡೆಸಿ ಸಾಧನೆ ಮೆರೆದಿದ್ದರು. ಶಿಬಿರದಲ್ಲಿ ಮಕ್ಕಳಿಗೆ ಉಚಿತ ತರಬೇತು ಜತೆಗೆ ಕಿಟ್ ಹಾಗೂ ಸಮವಸ್ತ್ರಗಳನ್ನು ಉಚಿತವಾಗಿ ನೀಡಿ ಎರಡು ದಿನಗಳ ಅಂತರ್ ಕೇಂದ್ರ ಟೂರ್ನಿಯನ್ನು ನಡೆಸಿ ಅತ್ಯುತ್ತಮ ಆಟಗಾರರನ್ನು ಆರಿಸುತ್ತಿದ್ದರು. 

ಬಡ ಮಕ್ಕಳ ಆಶಾಕಿರಣವಾಗಿತ್ತು ಬಿಪಿನ್ ಫುಟ್ಬಾಲ್ ಅಕಾಡೆಮಿ

ಬಿಪಿನ್ ಫುಟ್ಬಾಲ್ ಅಕಾಡೆಮಿಯು ನಗರದ ಕಾಲ್ಚೆಂಡಾಟದ ಆಸಕ್ತ ಮಕ್ಕಳಿಗೆ ಒಂದು ಆಶಾಕಿರಣವೇ ಆಗಿದೆ. ಇಲ್ಲಿ ಉಚಿತವಾಗಿ ತರಬೇತು ಪಡೆದ ಮಕ್ಕಳು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ನಗರದೆಲ್ಲೆಡೆಯ ಬಡ ಫುಟ್ಬಾಲ್ ಆಸಕ್ತ ಮಕ್ಕಳನ್ನು ಒಟ್ಟುಕೂಡಿಸಿ ಅವರಿಗೆ ಉಚಿತವಾಗಿ 1 ತಿಂಗಳ ಕಾಲ ತರಬೇತು ನೀಡಿ ಬಳಿಕ ಎರಡು ದಿನಗಳ ಕಾಲ ಶಿಬಿರಾರ್ಥಿಗಳಿಗೆ ಟೂರ್ನಿಯನ್ನು ಈವರೆಗೆ ಬಿಪಿನ್ ಅಕಾಡೆಮಿ ನಡೆಸುತ್ತ ಬಂದಿದೆ. 

ಟೂರ್ನಿಯಲ್ಲಿ ವಿಜೇತ ತಂಡಗಳಿಗೆ ಬಿಪಿನ್ ಟ್ರೋಫಿ ಹಾಗೂ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸುವುದಲ್ಲದೆ ವಿಶೇಷ ಆಟಗಾರರನ್ನು ಆರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿಂದಲೇ ತರಬೇತಿ ಪಡೆದ ಈ ವಿಶೇಷ ಆಟಗಾರರು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟವನ್ನೂ ಪ್ರತಿನಿಧಿಸಿದ್ದಾರೆ.

ಭವಿಷ್ಯದ ಫುಟ್ಬಾಲ್ ಆಟಗಾರರನ್ನು ರೂಪಿಸುವಲ್ಲಿ ಬಿಪಿನ್ ಫುಟ್ಬಾಲ್ ಅಕಾಡೆಮಿ ಅಪಾರವಾಗಿ ಶ್ರಮಿಸುತ್ತಿದೆ. ಈ ಅಕಾಡೆಮಿಯಲ್ಲಿ ತರಬೇತು ಪಡೆದ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಹಲವು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ರೂಪಿಸುವಲ್ಲಿ ಬಿಪಿನ್ ಕೊಡುಗೆ ಅಪಾರವಿದೆ. 

ಬಿಪಿನ್ ಅಕಾಡೆಮಿ ಬಗ್ಗೆ

ಬಿಪಿನ್ ಎನ್ನುವುದು ಸುರೇಂದ್ರ ಕರ್ಕೇರ ಅವರ ಮಗನ ಹೆಸರು. ಬಿಪಿನ್ ಎಳವೆಯಲ್ಲಿಯೇ ತುಂಬಾ ಚುರುಕು. ಓದಿನ ಜತೆಗೆ ಆತನಿಗೆ ಆಟಗಳಲ್ಲೂ ಆಸಕ್ತಿ. ತಂದೆ ಸುರೇಂದ್ರ ಕರ್ಕೇರ ಅವರಿಗೆ ಫುಟ್ಬಾಲ್ ಮೇಲೆ ಇರುವ ಪ್ರೀತಿಯನ್ನು ಕಂಡ ಮಗ ತಾನು ಕಾಲ್ಚೆಂಡಾಟದಲ್ಲಿ ದಿಗ್ಗಜ ಆಟಗಾರನಾಗುವ ಕನಸು ಕಂಡಿದ್ದ. ತಂದೆಗೂ ಮಗನನ್ನು ದೊಡ್ಡ ಕ್ರೀಡಾಪಟುವನ್ನಾಗಿಸುವ ದೊಡ್ಡ ಬಯಕೆಯಿತ್ತು. ಅದಕ್ಕೆ ಎಳವೆಯಲ್ಲಿಯೇ ತರಭೇತಿ. ಆದರೆ ಮುಂದೊಂದು ದಿನ ಆತ ದೊಡ್ಡ ಫುಟ್ಬಾಲ್ ಆಟಗಾರನಾಗುತ್ತಾನೆಂಬುದಾಗಿ ತಂದೆ ಬಯಸಿದರೆ, ದೈವ ಬೇರೆಯದೇ ಬಗೆಯಿತು. 1988 ರ ಡಿಸೆಂಬರ್ 9 ರಂದು ತಿಂದ ಪಿಸ್ತಾವೊಂದು ಗಂಟಲೊಳಗೆ ಸಿಲುಕಿಕೊಂಡಿತು. ಆತ ಉಸಿರಾಟ ಮಾಡಲಾಗದೆ ಚಡಪಡಿಸಿದ. ತಕ್ಷಣವೇ ವೈದ್ಯರಲ್ಲಿಗೆ ಕರೆದುಕೊಂಡು ಹೋದರು ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಬಹು ಕನಸುಗಳನ್ನು ಕಟ್ಟಿಕೊಂಡಿದ್ದ ತಂದೆ ಆಸೆಗಳಿಗೆ ತಣ್ಣೀರು ಬಿತ್ತು.. ಆದರೆ ಮಗ ಎಳವೆಯಲ್ಲಿಯೇ ಬಿಟ್ಟು ಹೋದ ಎನ್ನುವ ದುಃಖವನ್ನು ನುಂಗಿಕೊಂಡ ಸುರೇಂದ್ರ ಕರ್ಕೇರರು ಆತನ ನೆನಪಿಗೆ ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸುವ ನಿರ್ಧಾರಕ್ಕೆ ಬಂದರು. ರೋವರ್ಸ್ ಕಪ್ ಫುಟ್ಬಾಲ್ ಆಡುವ ಬಯಕೆಯನ್ನು ಬಿಪಿನ್ ವ್ಯಕ್ತಪಡಿಸಿದ್ದ ಸಂದರ್ಭ ಎರಡು ಟಿಕೇಟುಗಳನ್ನು ಅವರು ಖರೀದಿಸಿದ್ದರು. ಉಪಯೋಗಿಸಲಾಗದ ಆ ಟಿಕೆಟ್ ಗಳನ್ನೂ ನೋಡಿದಾಗ ಬಿಪಿನ್ ನೆನಪು ಮರುಕಳಿಸುತ್ತಿತ್ತು. ಇದನ್ನು ಮರೆಯಲು ಒಂದು ನಿರ್ಧಾರಕ್ಕೆ ಬಂದ ಅವರು 1989 ರಲ್ಲಿ 'ಬಿಪಿನ್ ಮೆಮೋರಿಯಲ್ ಫುಟ್ಬಾಲ್ ಟೂರ್ನಮೆಂಟ್ ಸಮಿತಿ" ರಚನೆ ಮಾಡಿದರು. ಇದಕ್ಕೆ ಅಭಿಮಾನಿಗಳ ಪ್ರೋತ್ಸಾಹವೂ ಇತ್ತು. ಬಳಿಕ ಕರ್ಕೇರ ಹಿಂತಿರುಗಿ ನೋಡಲಿಲ್ಲ.

ಮೂಲತಃ ಉಡುಪಿ ಜಿಲ್ಲೆಯ ಕಾಪುವಿನ ಪೊಲಿಪುವಿನವರಾದ ಸುರೇಂದ್ರ ಕರ್ಕೇರರಿಗೆ ಮಹಾರಾಷ್ಟ್ರ ಫುಟ್ಬಾಲ್ ಕ್ಷೇತ್ರದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ ಖ್ಯಾತಿ ಇದೆ.

ಬಿಪಿನ್ ಫುಟ್ಬಾಲ್ ಅಕಾಡೆಮಿ ಸಂಸ್ಥಾಪಕರಾಗಿರುವ ಕರ್ಕೇರ ಅವರು, ಮಹಾರಾಷ್ಟ್ರ ರಾಜ್ಯ ಫುಟ್ಬಾಲ್ ನ ಮಾಜಿ ಆಯ್ಕೆಗಾರ ಮತ್ತು ಮ್ಯಾನೇಜರ್, ಮುಂಬಯಿ ಫುಟ್ಬಾಲ್ ಅಸೋಸಿಯೇಷನ್ ನ ಮಾಜಿ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯ ಹಾಗೂ ಮಾಜಿ ಮಹಾರಾಷ್ಟ್ರ ವುಮೆನ್ಸ್ ಫುಟ್ಬಾಲ್ ಕನ್ವೇನರ್ ಕೂಡ ಆಗಿದ್ದವರು.

1989 ರಲ್ಲಿ ಪ್ರಥಮ ಕಾಲ್ಚೆಂಡು ತರಬೇತಿ ಶಿಬರವನ್ನು ಆರಂಭಿಸಿದ ಕರ್ಕೇರರು ಇದರ ಯಶಸ್ಸಿನ ಬಳಿಕ ಪ್ರತಿ ವರ್ಷವೂ ಶಿಬಿರ ನಡೆಸುತ್ತ ಬಂದರು. ಆದ್ರೆ ಕಳೆದೆರಡು ವರ್ಷಗಳಲ್ಲಿ 'ಕೊರೊನ ಮಹಾಮಾರಿ' ಯಿಂದಾಗಿ ಶಿಬಿರ ನಡೆಸಲು ಕರ್ಕೇರರಿಗೆ ಸಾಧ್ಯವಾಗಲಿಲ್ಲ. ಇದೀಗ 34 ನೇ ವರ್ಷದ ಉಚಿತ ತರಬೇತಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿ  ಮತ್ತೊಂದು ಟೂರ್ನಿಯನ್ನು ನಡೆಸಲು ಯೋಜನೆ ರೂಪಿಸಿದ್ದ ಕರ್ಕೇರ ಇನ್ನೀಗ ನೆನಪು ಮಾತ್ರ.

Powered by Blogger.