ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನ: ಢಕ್ಕೆ ಬಲಿ ಇಂದಿನಿಂದ ಪ್ರಾರಂಭ
ಬಯಲು ಆಲಯವೆಂದೇ ವಿಶ್ವ ಪ್ರಸಿದ್ಧಿ ಪಡೆದ ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆಬಲಿ ಸೇವೆಗಳು ಜ. 19ರಂದು (ಇಂದಿನಿಂದ)ಆರಂಭಗೊಳ್ಳಲಿವೆ. ಮಾ. 11ರಂದು ನಡೆಯುವ ಮಂಡಲ ವಿಸರ್ಜನೆ ಸೇವಾ ಢಕ್ಕೆ ಬಲಿಯೊಂದಿಗೆ ಸಂಪನ್ನಗೊಳ್ಳಲಿದೆ.
ಇಲ್ಲಿನ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ವನದುರ್ಗಾ ಟ್ರಸ್ಟ್‌ನ ಆಡಳಿತ ವ್ಯವಸ್ಥೆಯಲ್ಲಿನ ಈ ಬ್ರಹ್ಮಸ್ಥಾನದಲ್ಲಿನ ಢಕ್ಕೆಬಲಿ ಸೇವೆಯು ಜಿಲ್ಲೆಯ ಬೇರೆಲ್ಲೂ ಕಾಣಸಿಗದ ಬಲು ಅಪರೂಪದ ಸೇವಾ ವೈವಿಧ್ಯವಾಗಿ ಗುರುತಿಸಲ್ಪಟ್ಟಿದೆ. ಬ್ರಹ್ಮಸ್ಥಾನದಲ್ಲಿ ಅಲಂಕಾರಕ್ಕೆ ಕೃತಕ ಹೂಗಳನ್ನು ಬಳಸುವಂತಿಲ್ಲ. ಸಂಜೆಯ ವೇಳೆ ಹೊರೆ ಕಾಣಿಕೆ ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಆಗಮಿಸುವ ತಾಜಾ ಹೂವು, ಹಣ್ಣುಹಂಪಲು, ತಾಳೆ, ಬಾಳೆ, ಅಡಿಕೆ, ಬಿದಿರು ಮತ್ತು ಅಡಿಕೆ ಮರಗಳನ್ನು ಅಲಂಕಾರಕ್ಕೆ ಬಳಸಲಾಗುತ್ತದೆ. ದೇವತಾ ಪ್ರಾರ್ಥನೆಯಾಗಿ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಸಮಕ್ಷಮ ಹೊರೆಕಾಣಿಕೆಯನ್ನು ಶ್ರೀ ವನದುರ್ಗೆಗೆ ಒಪ್ಪಿಸಲಾಗುವುದು. ಬಳಿಕ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ಇಡೀ ಬನವನ್ನು ಹೂವು, ಹಿಂಗಾರ, ಹಣ್ಣುಹಂಪಲಿನಿಂದ ಹೂವಿನ ಅರಮನೆಯಂತೆ ಸಿಂಗರಿಸುತ್ತಾರೆ.
ಬಳಿಕ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ವೈದ್ಯ ವೃಂದದ ಢಕ್ಕೆ ನಿನಾದದೊಂದಿಗೆ ರಾತ್ರಿ ತಂಬಿಲ, ಢಕ್ಕೆಬಲಿ ಸೇವೆಗಳು ಮರುದಿನ ಮುಂಜಾವದ ವರೆಗೂ ಸಾಗುವವು. ಸಾವಿರಾರು ಭಕ್ತರು ಬ್ರಹ್ಮಸ್ಥಾನದಲ್ಲಿ ಯಾರಿಗೂ ಕುಳಿತು ಕೊಳ್ಳಲು ಎಂದು ಯಾವುದೇ ಆಸನವಿರುವುದಿಲ್ಲ. ಬಂದವರೆಲ್ಲಾ ಮರಳಿನ ಮೇಲೆಯೇ ಕುಳಿತುಕೊಳ್ಳಬೇಕು. ವಿಶೇಷವೆಂದರೆ ಇತರ ದೇವಳಗಳಂತೆ ಇಲ್ಲಿ ಪ್ರಸಾದವು ಇರುವುದಿಲ್ಲ. ಕರ್ಕಾಟಕ ಮಾಸದ ೧೬ ನೇ ದಿನ ಸಮುದ್ರದಾಳದಿಂದ ತಂದ ಶುದ್ಧ ಮರಳನ್ನು ದೇವರ ಗುಂಡದೊಳಗೆ ಹಾಕಲಾಗುತ್ತಿದ್ದು ಇದನ್ನೇ ಮೂಲಪ್ರಸಾದವಾಗಿ ನೀಡುವುದು ಪದ್ಧತಿ. ನೆಲದಲ್ಲಿರುವ ಮರಳೇ ಮಾತ್ರವೇ ಈ ಖಡ್ಗೇಶ್ವರೀ ದೇವಿಯ ಪ್ರಧಾನ ಪ್ರಸಾದವೂ ಆಗಿರುತ್ತದೆ.
ಬ್ರಹ್ಮಸ್ಥಾನದಲ್ಲಿ ಇಂದಿಗೂ ಪ್ರಾಚೀನ ಪದ್ಧತಿಯನ್ನು ಉಳಿಸಿಕೊಂಡು ಬರಲಾಗಿದೆ. ಧ್ವನಿವರ್ಧಕ, ವಿದ್ಯುತ್ ಸಂಪರ್ಕ, ಬ್ಯಾಂಡ್, ಪೋಟೋ, ಮೊಬೈಲ್ ಬಳಕೆ ಸಂಪೂರ್ಣವಾಗಿ ನಿಷಿದ್ಧವಾಗಿದೆ. ಈ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಯಾವುದೇ ಕಾಣಿಕೆ ಡಬ್ಬಿಗಳಿರುವುದಿಲ್ಲ ಅಥವಾ ದಾನ ದಕ್ಷಿಣೆಗಳ ಕ್ರಮ ಇರುವುದಿಲ್ಲ. ಹಣದ ರೂಪದ ಕಾಣಿಕೆಯನ್ನು ಇಲ್ಲಿ ಅರ್ಪಿಸಲು ಅವಕಾಶ ಇರುವುದಿಲ್ಲ.ದೇವರಿಗೆ ಇಲ್ಲಿ ಮುಖ್ಯವಾಗಿ ಹಿಂಗಾರ ಮತ್ತು ಸೀಯಾಳವನ್ನು ಕಾಣಿಕೆಯಾಗಿ ಸಮರ್ಪಿಸಲಾಗುತ್ತದೆ.

Post a Comment