ಕಂದಮ್ಮಗಳಿಗೆ ಹಾಲಿನಲ್ಲಿ ಇಲಿ ಪಾಷಾಣ ಬೆರಸಿ ಕುಡಿಸಿ ತಾಯಿ ಆತ್ಮಹತ್ಯೆ ಯತ್ನ !!
ಹಾಸನದ ಚಿಪ್ಪಿನಕಟ್ಟೆ ಬಡಾವಣೆಯಲ್ಲಿ ತಾಯಿ ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಮಕ್ಕಳಿಗೆ ಕುಡಿಸಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಹಿರಂಗಗೊಂಡಿದೆ. ವಿಷ ಕುಡಿದಿದ್ದ ಆರಾನ್ (7) ಅಸು ನೀಗಿದ್ದು, ಸುನೈನಾ (6) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ, ಜೀನತ್‌ಬಾನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ವರ್ಷಗಳ ಹಿಂದೆ ಹಾಸನದ ಚಿಪ್ಪಿನಕಟ್ಟೆಯ ದಿಲ್‌ದಾರ್ ಜೊತೆ ಮಂಗಳೂರಿನ ಉಪ್ಪಿನಂಗಡಿ ಬಳಿಯ ಸತ್ತಿಗಲ್ ಮೂಲದ ಜೀನತ್‌ಬಾನು ವಿವಾಹವಾಗಿತ್ತು. ಮದುವೆಯಾದಗಿನಿಂದಲೂ ಆಕೆಯ ಪೋಷಕರು ಜೀನತ್‌ಬಾನುಳನ್ನು ನೋಡಲು ಬಂದಿರಲಿಲ್ಲ. ಮನನೊಂದಿದ್ದ ಜೀನತ್‌ಬಾನು ಹಾಲಿನಲ್ಲಿ ಇಲಿ ಪಾಷಾಣ ಬೆರಸಿ ತಾನು ಕುಡಿದು ಮಕ್ಕಳಿಗೆ ಕುಡಿಸಿದ್ದಾಳೆ. ವಿಷ ಉಣಿಸಿರುವ ಬಗ್ಗೆ ಪತಿ, ಅತ್ತೆ, ಮಾವನಿಗೆ ಜೀನತ್‌ಬಾನು ತಿಳಿಸಿರಲಿಲ್ಲ. ಜ. 8 ರಂದು ಬೆಳಿಗ್ಗೆ ಆರಾನ್‌ಗೆ ವಾಂತಿ ಭೇದಿಯಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆರಾನ್ ಸಾವನ್ನಪ್ಪಿದ್ದಾನೆ. ಆದರೂ ವಿಷ ಉಣಿಸಿರುವ ಬಗ್ಗೆ ತಾಯಿ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಫುಡ್ ಪಾಯ್ಸನ್‌ನಿಂದ ಮಗು ಮೃತಪಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು.
ಇದಾದ ಬಳಿಕ ಸುನೈನಾ ಹಾಗೂ ಜೀನತ್‌ಬಾನುಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ವಿಷ ಉಣಿಸಿರುವ ಬಗ್ಗೆ ಜೀನತ್‌ಬಾನು ಪತಿ ಬಳಿ ಹೇಳಿದ್ದಾಳೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀನತ್‌ಬಾನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಸುನೈನಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಾಸನ ತಹಸೀಲ್ದಾರ್ ಸಂತೋಷ್ ಸಮ್ಮುಖದಲ್ಲಿ ಹೂತಿದ್ದ ಆರಾನ್ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೀನತ್‌ಬಾನು ವಿರುದ್ಧ ಪ್ರಕರಣ ದಾಖಲಾಗಿದೆ.
Post a Comment