".

Header Ads

ಮುಂಬೈ ವಿವಿ ಕನ್ನಡ ವಿಭಾಗ ಮತ್ತು ಮೈಸೂರು ಅಸೋಸಿಯೇಷನ್ ಮುಂಬಯಿ: ಮೈಸೂರು ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ -2023


ಔಚಿತ್ಯವು ಸಂಪೂರ್ಣ ಸೌಂದರ್ಯಕ್ಕೆ ಹೇತುವಾಗುತ್ತದೆ: ಡಾ. ಟಿ. ಎಸ್. ಸತ್ಯವತಿ  

ಭಾರತದ ಭವ್ಯ ಪರಂಪರೆಯಲ್ಲಿ ಸಮೃದ್ಧವಾದ ಜ್ಞಾನವಿದೆ. ನಾದ, ಲಯಗಳೆಂಬ ಸಂಗೀತದ ಮೂಲ ಘಟಕಗಳೊಂದಿಗೆ ಸಾಹಿತ್ಯವೂ ಮಧುರವಾದ ಸಂಬಂಧವನ್ನು ಹೊಂದಿದೆ. ಮೌಲ್ಯಯುತವಾದ ಸಂಗೀತ ಸಂಸ್ಕೃತಿ ನಮ್ಮಲ್ಲಿ ಅನಾದಿಯಿಂದಲೂ ಬೆಳೆದು ಬಂದಿದೆ. ನಮ್ಮ ಪೂರ್ವ ಸೂರಿಗಳು ಬಹಳ ಹಿಂದೆಯೇ ಆಳವಾಗಿ ಎಲ್ಲವನ್ನೂ ಅರ್ಥೈಸಿದ್ದಾರೆ. ಸಂಗೀತದಲ್ಲಿ ಸಂಶೋಧನೆ ನಡೆಸಲು ಇಂದು ಯಾವುದೂ ಉಳಿದಿಲ್ಲ. ಶಾಸ್ತ್ರಕಾರರು ಯಾವುದೇ ಕಲೆಯಲ್ಲಿ ಭಾವುಕ, ರಂಜಕ, ಶಿಕ್ಷಕ ಮತ್ತು  ಕೂಟಕಾರ ಎಂಬ ನಾಲ್ಕು ವಿಧದವರನ್ನು ಗುರುತಿಸಿದ್ದಾರೆ. ಕಲೆಯಲ್ಲಿ ಈ ನಾಲ್ಕು ಗುಣಗಳೊಂದಿಗೆ  'ಕಾಕು' (ಘನ, ನಯ ಈ ಎರಡರ ಸಮ್ಮಿಶ್ರಣವನ್ನು ಹದವಾಗಿಸಬಹುದಾದ ಕೌಶಲ್ಯ)  ಔಚಿತ್ಯಪೂರ್ಣವಾಗಿ ಹೊಂದಿಕೊಂಡರೆ ಅದು ಶ್ರೇಷ್ಠವೆನಿಸಿಕೊಳ್ಳುತ್ತದೆ. ಯಾವಾಗ ಎಲ್ಲಿ ಏನು ಯಾಕೆ ಹೇಗೆ ಮತ್ತು ಎಷ್ಟು ಬಳಸಬೇಕೆಂಬುದನ್ನು ತಿಳಿದಿರುವುದೇ ಔಚಿತ್ಯ. ಇದು ಸಂಗೀತಕ್ಕೆ ಮಾತ್ರವಲ್ಲ, ಜೀವನಕ್ಕೂ ಅನ್ವಯವಾಗುತ್ತದೆ. ಔಚಿತ್ಯವು ಸಂಪೂರ್ಣ ಸೌಂದರ್ಯಕ್ಕೆ ಹೇತುವಾಗುತ್ತದೆ ಎಂದು ಸಂಗೀತ ಮತ್ತು ಸಂಸ್ಕೃತ ವಿದ್ವಾಂಸರಾದ ವಿದುಷಿ ಡಾ. ಟಿ.ಎಸ್. ಸತ್ಯವತಿ ಅವರು ಅಭಿಪ್ರಾಯ ಪಟ್ಟರು. 

ಅವರು ಫೆ.4,5ರಂದು ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ಸಂಯುಕ್ತ ಆಶ್ರಯದಲ್ಲಿ, ಮೈಸೂರು ಅಸೋಸಿಯೇಷನ್ ಮಾಟುಂಗದ ಕಿರು ಸಭಾಗೃಹದಲ್ಲಿ  ನಡೆದ ಮೈಸೂರು ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ- 2023 ಕಾರ್ಯಕ್ರಮದಲ್ಲಿ ಭಾರತೀಯ ಸಂಗೀತದ ಬೇರು, ಬೆಳವಣಿಗೆ ಮತ್ತು ಮೂಲ ಗುರಿ ' ವಿಷಯದ ಕುರಿತು ಜಂಟಿ ಉಪನ್ಯಾಸ ನೀಡಿದರು.

ಭಾವುಕ ತನ್ನ ಸಂಗೀತವನ್ನು ಸ್ವತಃ ಆನಂದಿಸುತ್ತಾನೆ. ರಂಜಕನು ಅದನ್ನು ಸಹೃದಯರಿಗೆ ಹಂಚುವುದರಲ್ಲಿ ನಿಪುಣನಾಗಿರುತ್ತಾನೆ. (ರಂಜಕತ್ವ). 

ಶಿಕ್ಷಕನಾದವನು ತನ್ನ ಚಿಂತನೆಗಳ ಬಗ್ಗೆ ದೃಢತೆಯಿಂದ ಅಧಿಕಾರಯುತವಾಗಿ ಹೇಳುತ್ತಾನೆ. ಇಂತಹ ಶಿಕ್ಷಕತ್ವ ಎಲ್ಲ ಬಗೆಯ ಜ್ಞಾನ ಪಡೆಯಲು ಅವಶ್ಯವಾಗಿಬೇಕು.  

ಕೂಟಕಾರನು ಸರಿಯಾದುದನ್ನು  ಅನುಕರಣೆ ಮಾಡಬಲ್ಲವನಾಗಿರುತ್ತಾನೆ. 'ಅತಿ ಸರ್ವತ್ರ ವರ್ಜಯೇತ್' ಎಂಬ ಉಕ್ತಿಯನ್ನು ಈ ನಾಲ್ಕೂ ಬಗೆಯವರು ಪಾಲಿಸಬೇಕು ಎಂಬುದನ್ನು ಅರ್ಥೈಸಿದರು.  

 ಬದುಕನ್ನು ಅರ್ಥಪೂರ್ಣವಾಗಿ ಆನಂದಿಸುವಲ್ಲಿ ಸಂಗೀತ ಮುಖ್ಯಪಾತ್ರವನ್ನು ವಹಿಸುತ್ತದೆ. ಏಕೆಂದರೆ ಇದು ಸಾರ್ವತ್ರಿಕವಾಗಿ ಎಲ್ಲರನ್ನೂ ಬಹಳ ಬೇಗ ತಲುಪುತ್ತದೆ. ಭಾರತೀಯ ಸಂಸ್ಕೃತಿಯೆಂಬ ಸಂಪದ್ಭರಿತವಾದ ಮಣ್ಣಿನಲ್ಲಿ ಒಂದು ಬೃಹತ್ ವೃಕ್ಷವಾಗಿ ಸಂಗೀತ ಬೆಳೆದು ನಿಂತಿದೆ. ಭಾರತದಲ್ಲಿ ಸಂಸ್ಕೃತಿಯ ಬೇರುಗಳು ಭದ್ರವಾಗಿ ನೆಲೆಯೂರಿ ಅದರ ಶಾಖೆಗಳು ವಿಶಾಲವಾಗಿ ಹರಡಿವೆ. 'ಆನೋ ಭದ್ರಾಃ ಕೃತವೋ ಯಂತು  ವಿಶ್ವತಃ' - ವಿಶ್ವದೆಲ್ಲೆಡೆಯಿಂದ ಜ್ಞಾನದ ಬೆಳಕು ಹರಿದು ಬರಲಿ ಎಂಬ ನಮ್ಮ ಋಷಿ ಮುನಿಗಳ ಮಾತಿನಂತೇ ನಮ್ಮ ಸ್ವಂತಿಕೆಯನ್ನು ಕಾಪಾಡಿಕೊಂಡು ನಾವು ಎಲ್ಲವನ್ನೂ ಸ್ವೀಕರಿಸಿದ್ದೇವೆ. ಪ್ರಪಂಚದ ಎಲ್ಲ ಬಗೆಯ ಸಂಗೀತಗಳಲ್ಲಿ ಅತ್ಯಂತ ಪರಿಷ್ಕೃತ ರೂಪವಾಗಿರುವುದು ಭಾರತೀಯ ಶಾಸ್ತ್ರೀಯ ಸಂಗೀತ. ಜನಜೀವನದಲ್ಲಿ ಹಾಸು ಹೊಕ್ಕಾಗಿ ವೈವಿಧ್ಯಮಯವಾದ ಸಂಗೀತ ಸಿಗುವುದು ಭಾರತದಲ್ಲಿ ಮಾತ್ರ.  ಈಗ ಸಂಗೀತದಲ್ಲಿ ಬದಲಾವಣೆಗಳಾಗಿವೆಯೇ ವಿನಃ ಹೊಚ್ಚ ಹೊಸತೆನ್ನುವುದು ಏನೂ ಇಲ್ಲ. ನಾವು ಮೂಲದಲ್ಲಿರುವ ಯಾವುದನ್ನು ಮರೆಯುವ ಹಾಗಿಲ್ಲ. ಏಕೆಂದರೆ ಅವೆಲ್ಲಕ್ಕೂ ನಿಖರವಾದ ಅರ್ಥಗಳಿವೆ. ಇದನ್ನು ತಿಳಿಯುವುದು ಮುಖ್ಯ. ಬಹಳ ಹಿಂದೆಯೇ ಭಾರತೀಯ ಸಂಗೀತದಲ್ಲಿ ಗರಿಷ್ಠ ಮಟ್ಟದ ಕೃಷಿಯನ್ನು ಮಾಡಲಾಗಿದೆ. ನಾವು ಅದನ್ನು ಮನವರಿಕೆ ಮಾಡಿಕೊಳ್ಳಲು ಮತ್ತೆ ಮತ್ತೆ ಹಿಂದೆ ಹೋಗಬೇಕು. ಏಕೆಂದರೆ ಒಂದು ಗಾನದ ಮೂಲಕ ಸಾಹಿತ್ಯವನ್ನು ವಿಸ್ತರಿಸುವಾಗ ಪುನಃಪುನಃ ಆ ಸಾಹಿತ್ಯದ ಪಲ್ಲವಿಗೆ ಬರಬೇಕಾಗುತ್ತದೆ. ಏಕೆಂದರೆ ಸಾಹಿತ್ಯದ ಸಾರವಿರುವುದು ಪಲ್ಲವಿಯಲ್ಲೇ. ಮುಂದಿನ ಭಾಗ ಅದರದ್ದೇ ವಿವರಣೆಯಾಗಿರುತ್ತದೆ. 

ಕೈಲಾಸ ನಗವನ್ನು ಕಾಣಿಸುವ ಒಂದೇ ಒಂದು ಕಲೆಯೆಂದರೆ ಅದು ಗಾನ ಸರಸ್ವತಿ.
ತಥಾ ನಯತಿ ಕೈಲಾಸಂ ನ ಗಂಗಾ ನ ಸರಸ್ವತಿ
ಯಥಾ ನಯತಿ ಕೈಲಾಸಂ ನಗಂ ಗಾನ ಸರಸ್ವತಿ. ಇದು ಗಾನದ ಸ್ವಾರಸ್ಯವನ್ನು ಹೇಳುವ ಚಮತ್ಕಾರ ಶ್ಲೋಕ.  ಕೈಲಾಸದಲ್ಲೇ ಹುಟ್ಟಿದ ಗಂಗೆಯಾಗಲಿ ಸರಸ್ವತಿಯಾಗಲಿ ನಮ್ಮನ್ನು ಕೈಲಾಸಕ್ಕೆ ಒಯ್ಯಲಾರರು. ಆದರೆ ಆ ಕೈಲಾಸ ನಗ(ಪರ್ವತ)ವನ್ನು ಕಾಣಿಸುವ ಒಂದೇ ಒಂದು ಕಲೆಯೆಂದರೆ ಅದು ಗಾನ ಸರಸ್ವತಿ. ಸಂಗೀತ ಸಾಗರದಲ್ಲಿ ಧುಮಕಿದ ಸ್ವತಃ ಸರಸ್ವತಿಯೂ ಅದರ ಇನ್ನೊಂದು ತುದಿಯನ್ನು ತಲುಪಲಾಗದೇ ಇನ್ನೇನು ಮುಳುಗಬಾರದೆಂದು ವೀಣೆಯನ್ನೇ ಎದದೆಗವಚಿಕೊಂಡಳಂತೆ. ಇಲ್ಲಿ ವೀಣೆ ಅರ್ಥಾತ್ ಸಂಗೀತ ನಮಗೆ ಅರಿವಿಲ್ಲದಷ್ಟು ಅಪಾರವಾದದ್ದು. ಎಂಬುದಾಗಿ ಸಂಗೀತದ ಮಹತ್ವವನ್ನು ಅವರು ಅರ್ಥೈಸಿದರು. ಇಂದಿನ ಸಂಗೀತ ಅನಾದಿಯಾಗಿದೆ. ಪಂಚಭೂತಗಳಲ್ಲಿನ ಅಂತಿಮ ತತ್ವವಾದ  ಆಕಾಶದಲ್ಲಿ ಇರುವ ಶಬ್ಧ ಧ್ವನಿಯಾಗಿ ಹುಟ್ಟಿಕೊಂಡಿದೆ. ಖಂಡವಾದ ಶಬ್ಧವು ಅಖಂಡವಾದಾಗ ಹಾಗೂ ಮಧುರವಾದಾಗ ಅದು ನಾದ. ಇಲ್ಲವಾದರೆ ಅದು ಶಬ್ಧವಾಗಿ ಮಾತ್ರ ಉಳಿಯುವಂತದ್ದು. ಎಲ್ಲವೂ ಧ್ವನಿಯಿಂದಲೇ ಆವರಿಸಲ್ಪಟ್ಟಿದೆ ಎನ್ನುವುದನ್ನು ಋಷಿ "ಧ್ವನಿರ್ಯೋನಿಃ ಪರಾಜ್ಞೇಯ ಧ್ವನಿಃ ಸರ್ವಸ್ಯಕಾರಣಂ; ಆಕ್ರಾಂತಂ ಧ್ವನಿನಾ ಸರ್ವಂ ಜಗತ್ ಸ್ಥಾವರ ಜಂಗಮಮ್" ಎಂದಿದ್ದಾನೆ. ಈ ಒಂದು ಅವ್ಯಕ್ತವಾದ ಅಮೂರ್ತವಾದ ಧ್ವನಿ ಮೂರ್ತವಾಗಬೇಕು. ವೇದ ಮಂತ್ರಗಳು 'ದೃಷ್ಟಾರರು' ಎಂದು ಕರೆಯಲ್ಪಡುವ ಮನುಷ್ಯರಿಗೆ ಹೊಳೆದದ್ದೇ ಹೊರತು ಅವರಿಂದ ಪ್ರಯತ್ನ ಪೂರ್ವಕವಾಗಿ ರಚನೆಯಾದದ್ದಲ್ಲ. ಅವರು ಅದನ್ನು ತಮ್ಮ ಅಂತಃಪ್ರ ಜ್ಞೆಯಿಂದ ಹಿಡಿದುಕೊಂಡು ನಮಗೆ ಕೊಟ್ಟಿರುವಂಥದ್ದು. "ತಥೋ ಬಿಂದುಃ ಸ್ತಥೋ ನಾದಃಸ್ಥತೋ ಮಾತ್ರಾಃ ಸ್ವನುಕ್ರಮಾತ್". ಬಿಂದು, ನಾದ, ಮಾತ್ರೆಗಳು, ನಂತರ ಪದಗಳು, ವಾಕ್ಯಗಳು, ಮಹಾ ವಾಕ್ಯ. ಹೀಗೆ ಅದರ ಅರ್ಥ ವ್ಯಾಪ್ತಿಯೂ ಅಷ್ಟೇ ದೊಡ್ಡದು. ನಾದದ ವ್ಯಾಪ್ತಿಯೂ ಅಷ್ಟೇ ದೊಡ್ಡದು. "ಯೋನಾದಃ ಸರ್ವ ಭೂತನಾಂ ಸರ್ವ ವರ್ಣಸ್ಯಚ ಅಂಕುರಃ ಯೋ ಬೀಜಂ ಮಂತ್ರಕೋಟಿನಾಂ ತಂ ನಿತ್ಯಂ ಪ್ರಣಮಾಮ್ಯಹಂ". ಈ ನಾದಕ್ಕೆ ಸಾವಿಲ್ಲ. ಇದೇ ನಿತ್ಯ ಇದೇ ಓಂಕಾರ ಇದೇ ಪ್ರಣವ ಇದೇ ಆದಿ. ಇದರಿಂದಲೇ ಇಡೀ ಜಗತ್ತು. ಇದರಿಂದಲೇ ಮಾತು. ಅದಕ್ಕಾಗಿ "ಸಂಗೀತಾಮಪಿ ಸಾಹಿತ್ಯಂ ಸರಸ್ವತ್ಯಂ ಸ್ತನದ್ವಯಂ" ಎಂದಿದ್ದಾರೆ. ಎಲ್ಲದಕ್ಕೂ ಒಂದೇ ಒಂದು ಮೂಲ ಆಕರ. ಸಂಗೀತದ ಮೂಲ ವೇದ ಎನ್ನಬಹುದು. ಅದರ ಬೆಳವಣಿಗೆ ಎಂದರೆ ಸಹಸ್ರ ಮುಖವಾಗಿ ಒಂದೊಂದು ಅಂಶವನ್ನು ತೆಗೆದುಕೊಂಡು ಬೆಳೆಸಿರುವಂಥದ್ದು. ಅದರ ಮೂಲ ಗುರಿ ಆರಂಭದಲ್ಲಿ ವಿನೋದ, ನಂತರ ವಿಕಾಸ- ಆತ್ಮ ವಿಕಾಸ, ಮನೋವಿಕಾಸ, ಚಿತ್ತ ವಿಕಾಸ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಅವರು ಸಂಗೀತದಲ್ಲಿ ಸರಿ ಗಮ ಪಧ ನಿ ಸ್ವರಗಳನ್ನೇ ಆಯ್ಕೆ ಮಾಡಿಕೊಂಡು ಅದೇ ಕ್ರಮದಲ್ಲಿ ಜೋಡಿಸಿರುವುದರ ಹಿಂದೆ ಒಂದು ಚಲನೆಯಿದೆ ಎಂಬುದರ ಬಗ್ಗೆ ತನ್ನದೇ ಆದ ಕೆಲವು ವಿಚಾರಗಳನ್ನು ಹಂಚಿಕೊಂಡರು. 

12ನೆಯ ಶತಮಾನದಲ್ಲಿ ಸೋಮೇಶ್ವರನಿಂದ ರಚಿತವಾದ ವಿಶ್ವಕೋಶ 'ಮಾನಸೋಲ್ಲಾಸ'ವು 100 ಅಧ್ಯಾಯಗಳನ್ನು ಒಳಗೊಂಡಿದ್ದು ಐದು ವಿಭಾಗ ಹಾಗೂ 20 ಉಪ ವಿಭಾಗಗಳಲ್ಲಿ ವಿಂಶತಿ ಎಂದು ಕರೆಯಲ್ಪಡುತ್ತದೆ. ಈ ಐದು ವಿಂಶತಿಗಳಲ್ಲಿ ಉಪಾಂತ್ಯ ವಿಂಶತಿಯಾದ ವಿನೋದ ವಿಂಶತಿಯು ಹೇಗೆ ವಿನೋದದಿಂದ ವಿಕಾಸದತ್ತ ಸಾಗಿದೆ ಎನ್ನುತ್ತಾ ಅದರ ಪ್ರಸ್ತುತತೆಯ  ಕುರಿತು ಮಾತನಾಡಿದರು. ಮಾನಸೋಲ್ಲಾಸದಲ್ಲಿ ಜಗತ್ತಿನ ಒಳಿತು ಕೆಡುಕುಗಳಿಗೆ ಹೊಣೆಗಾರನಾದ ರಾಜ (ನಾಯಕ)ನನ್ನು ಉದ್ದೇಶಿಸಿ ಹೇಳಲಾಗಿದೆ.  ವಿನೋದವನ್ನು ನೀಡುವ ನಾಯಕನಿಗೆ ಇರಬೇಕಾದ ಅರ್ಹತೆಗಳು, ಸಂಗೀತ ಸಭೆಯ ವರ್ಣನೆ, ಅರ್ಹ, ಸಭ್ಯ, ಮುಕ್ತ ಮನಸ್ಸಿನ ಶೋತೃಗಳು, ಗಾಯಕ ಲಕ್ಷಣಗಳು, ಸಂಗೀತ ರತ್ನಾಕರದಲ್ಲಿ ಹೇಳಿದ 25 ಗಾಯಕ ದೋಷಗಳು, ಗಾಯಕ, ವಾದಕರು ಆಸೀನವಾಗುವ ಕ್ರಮ, ಭಾವ ಬುದ್ಧಿಗಳ ಬೆರೆಯುವಿಕೆ, ಇವೆಲ್ಲವನ್ನೂ ಭಾರತೀಯ ಸಂಗೀತದ ಪರಿಕಲ್ಪನೆಯ ಅಡಿಯಲ್ಲಿ ವಿಷದವಾಗಿ ಚರ್ಚಿಸಿದರು. ಜನಪ್ರಿಯ ಸಂಗೀತ, ಕಲಾ ಸಂಗೀತದಲ್ಲಿ ಕಲ್ಪಿತ, ಕಲ್ಪನಾ ಸಂಗೀತಗಳ ಸರಿಯಾದ ರಚನೆಯನ್ನು ಒಳಗೊಂಡ ಸೃಜನಶೀಲ ಸಂಗೀತ, ಆಧ್ಯಾತ್ಮ ಸಂಗೀತ, ಭಕ್ತಿ ಸಂಗೀತ, ಎಂಬಿತ್ಯಾದಿ ಪರಿಕಲ್ಪನೆಗಳ ಲಕ್ಷಣಗಳನ್ನು ಸೋದಾಹರಣವಾಗಿ ವಿವರಿಸಿದರು. ಮಾನಸೋಲ್ಲಾಸಕಾರ ಸೋಮೇಶ್ವರ ಸಂಗೀತದ ಮನಃಶಾಸ್ತ್ರೀಯ ಒಳನೋಟಗಳನ್ನು ಕೊಟ್ಟ ಏಕೈಕ ಕವಿ. ಆತ ಅದರಲ್ಲಿ ಚರ್ಚಿಸಿದ ಅನಾಹತ ನಾದ, ಸ್ವರಗಳು, ಭಾವ, ರಸೋತ್ಪತ್ತಿ ಇವೆಲ್ಲ ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿದರು. ಯಾವ ರೀತಿಯ ವ್ಯಕ್ತಿಗೆ ಯಾವ ರೀತಿಯ ಸಂಗೀತ ಅಪೇಕ್ಷಣೀಯ ಮತ್ತು ಆಪ್ತವಾದುದು,ಒಳ್ಳೆಯ ಗೀತೆ ಎಂದರೆ ಯಾವುದು, ಸಂಗೀತವು ಹೇಗೆ ಮನಸ್ಸನ್ನು ಶುದ್ಧೀಕರಿಸುವ ಕೆಲಸವನ್ನು  ಮಾಡುತ್ತದೆ ಇಂತಹ ಕೆಲವು ಅಂಶಗಳ ಮೇಲೆ ಬೆಳಕು ಚೆಲ್ಲಿದರು. ಗಾಯಕ, ವಾದಕರು ಬಿಂದುವಿನಿಂದ ಸಿಂಧು ಆಗಬೇಕು.  ಆತನಿಗೆ  ಅಹಂಕಾರವಿರಬಾರದು, ಅಹಂಭಾವವಿರಬೇಕು. ಆಗ ಅದು 'ವಯಂ' ಭಾವವನ್ನು ಉಂಟುಮಾಡುತ್ತದೆ. ಅದಕ್ಕೆ  ಪೂರಕವಾಗಿ ಡಿ. ವಿ ಗುಂಡಪ್ಪನವರು ಕಲೆಯ ಕಾರ್ಯದ  ಕುರಿತಾಗಿ ಹೇಳಿರುವುದನ್ನು ಈ ಸಂದರ್ಭದಲ್ಲಿ ಅವರು ಉಲ್ಲೇಖಿಸಿದರು. ಸಂಗೀತ ಪರಿಕಲ್ಪನೆಗಳ ಸೌಂದರ್ಯವನ್ನು ಅರ್ಥವತ್ತಾಗಿ ತಿಳಿಯಪಡಿಸಿದರು. ಉಪನ್ಯಾಸದ ನಂತರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಜಿಜ್ಞಾಸುಗಳ ಪ್ರಶ್ನೆಗಳಿಗೆ ಸಮಂಜಸವಾಗಿ ನಿಖರವಾಗಿ ಉತ್ತರಿಸಿದರು. ಇದೇ ಸಂದರ್ಭದಲ್ಲಿ ಜಂಟಿ ಸಂಸ್ಥೆಗಳ ಪರವಾಗಿ ಡಾ ಟಿ. ಎಸ್. ಸತ್ಯವತಿ ಅವರನ್ನು ಗೌರವಿಸಲಾಯಿತು.
ಆರಂಭಿಕ ಉಪನ್ಯಾಸದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾ ಡಿದ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರು ಆದ ಡಾ. ಜಿ.ಎನ್ ಉಪಾಧ್ಯ ಅವರು ಡಾ. ಸತ್ಯವತಿ ಅವರು ಸಂಗೀತ ಸಂಸ್ಕೃತ ಸರಸ್ವತಿ. ಇಂತಹ ಒಂದು ಘನ ವಿದ್ವಾಂಸರು ಆಗಮಿಸಿ ಉಪನ್ಯಾಸ ನೀಡುತ್ತಿರುವುದು ಸಂತೋಷವನ್ನು ನೀಡಿದೆ ಎಂದರು. ಮೈಸೂರು ಅಸೋಸಿಯೇಷನ್ ಇದು ಮುಂಬಯಿಯ ಪ್ರಮುಖ ಸಂಘ ಸಂಸ್ಥೆಗಳಲ್ಲಿ ಒಂದು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಹೀಗೆ ವಿಭಿನ್ನ ನಲೆಗಳಲ್ಲಿ ಕನ್ನಡದ ಬಲವರ್ಧನೆಗೆ ಅದು ಶ್ರಮಿಸುತ್ತಿದೆ. ಈಗ ಅದು ಶತಮಾನೋತ್ಸವದ ಹೊಸ್ತಿಲಲ್ಲಿದೆ. ಈ ಮಾಲಿಕೆಯ ಅಡಿಯಲ್ಲಿ ಹಲವು ಉಪನ್ಯಾಸಕರು ನೀಡಿದ ಉಪನ್ಯಾಸಗಳನ್ನು ಕೃತಿರೂಪದಲ್ಲಿ ತರುವ ಯೋಚನೆ ಇದ್ದು ಶತಮಾನೋತ್ಸವದ ಸಂದರ್ಭದಲ್ಲಿ ಅದನ್ನು ಪ್ರಕಟಿಸುವ ಯೋಜನೆ ಇದೆ ಎಂದು ನುಡಿದರು.
ಎರಡನೆಯ ಉಪನ್ಯಾಸದಲ್ಲಿ ಮೈಸೂರು ಅಸೋಸಿಯೇಷನ್ ನ ಡಾ. ಮಂಜುನಾಥ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸರಸ್ವತಿ ಎಂದರೆ ಜ್ಞಾನ. ಇಂದಿನ ದಿನಗಳಲ್ಲಿ ಒಂದಿಷ್ಟು ಪುಸ್ತಕಗಳನ್ನು ಜೋಡಿಸಿಟ್ಟು ಸರಸ್ವತಿಯನ್ನು ಪೂಜಿಸುತ್ತಾರೆ. ಅದರೊಂದಿಗೆ ಅದರಲ್ಲಿರುವ ವಿಷಯವನ್ನು ಅರಿತು ಪೂಜಿಸಿದರೆ ಅದಕ್ಕೆ ಅರ್ಥವಿದೆ. ಇಂದಿನ ದಿನಗಳಲ್ಲಿ ಸರ್ಕಸ್ ಸಂಗೀತ ಹಾಗೂ ಲಾಲಿತ್ಯವಿಲ್ಲದ ಶುಷ್ಕ ಸಾಹಿತ್ಯ ಬರುತ್ತಿರುವುದು ವಿಷಾದನೀಯ ಎಂದರು.

ಜಂಟಿ ಉಪನ್ಯಾಸ ಕಾರ್ಯಕ್ರವನ್ನು ಕ್ರಮವಾಗಿ ಶ್ರೀಮತಿ ಕಲಾ ಭಾಗ್ವತ್ ಹಾಗೂ ಶ್ರೀಮತಿ ಜ್ಯೋತಿ ಉಡುಪ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಸಂಗೀತ ವಿದುಷಿ  ಶ್ಯಾಮಲಾ ರಾಧೇಶ್ ಅವರು ಡಾ. ಸತ್ಯವತಿ ಅವರನ್ನು ಪರಿಚಯಿಸಿದರು. ಮುಂಬೈ ವಿವಿ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಶೆಟ್ಟಿ ಹಾಗೂ ಮೈಸೂರು ಅಸೋಸಿಯೇಷನ್ ನ ಟ್ರಸ್ಟಿಗಳಾದ   ಡಾ. ಮಂಜುನಾಥ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಜಿ. ಎಸ್. ಶಂಕರಲಿಂಗ ಹಾಗೂ ಡಾ. ಜಿ. ಎನ್ ಉಪಾಧ್ಯ ಅವರು ವಂದನಾರ್ಪಣೆಗೈದರು. ವೇದಿಕೆಯಲ್ಲಿ ಡಾ. ಸತ್ಯವತಿ, ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷರಾದ ಕೆ. ಕಮಲಾ,ಡಾ. ಉಪಾಧ್ಯ, ಕಾರ್ಯದರ್ಶಿ ಡಾ.ಜಿ.ಎಸ್. ಶಂಕರಲಿಂಗ ಉಪಸ್ಥಿತರಿದ್ದರು. ಮೈಸೂರು ಅಸೋಸಿಯೇಷನ್ ನ  ಮಂಜುನಾಥಯ್ಯ, ಸಾಹಿತ್ಯ, ಸಂಗೀತಾಸಕ್ತರನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Powered by Blogger.