ಮುಂಬೈ: ಮೂವರ ಕೃತಿಗಳಿಗೆ 'ವಿಕಾಸ ಪುಸ್ತಕ ಬಹುಮಾನ' ಪ್ರದಾನ
ಮುಂಬಯಿ: ಮುಂಬೈ ವಿಶ್ವವಿದ್ಯಾಲಯದ ಜೆ. ಪಿ. ನಾಯಕ್ ಭವನ, ವಿದ್ಯಾನಗರಿ, ಸಾಂತಾಕ್ರೂಜ್ (ಪ) ಇಲ್ಲಿ ಫೆ.11ರಂದು ಮುಂಬಯಿಯ ಮೂವರು ಸಾಹಿತಿಗಳಿಗೆ 'ವಿಕಾಸ ಪುಸ್ತಕ ಬಹುಮಾನ' ವನ್ನು ಪ್ರದಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ವಿಶ್ವನಾಥ ಕಾರ್ನಾಡ್ ಅವರು ಸಾಹಿತ್ಯವನ್ನು ಪುರಸ್ಕರಿಸುವುದು, ಸಾಹಿತಿಗಳನ್ನು ಪ್ರೋತ್ಸಾಹಿಸುವುದು ಪ್ರತಿಷ್ಠಾನದ ಉದ್ದೇಶ ಎಂದು ಈ ಸಂದರ್ಭದಲ್ಲಿ ವಿವರಿಸಿದರು.
ಕಾರ್ಯಕ್ರಮದಲ್ಲಿ ರಾಜೀವ್ ನಾರಾಯಣ ನಾಯಕ ಅವರ 'ಪ್ರೀತ್ಸು' ಕಾದಂಬರಿ, ಶ್ರೀನಿವಾಸ ಜೋಕಟ್ಟೆ, ಅವರ 'ಮುಂಬಯಿ ಮಿಂಚು' ಲೇಖನಗಳ ಸಂಕಲನ ಹಾಗೂ ಕಲಾ ಭಾಗ್ವತ್ ಅವರ 'ಜೀವಸ್ವರ' ಕೃತಿಗಳಿಗೆ ವಿಕಾಸ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವವಾಣಿ ಪತ್ರಿಕೆಯ ಹಿರಿಯ ಪತ್ರಕರ್ತರು, ಪುರವಣಿ ಸಂಪಾದಕರಾಗಿರುವ ಶಶಿಧರ ಹಾಲಾಡಿ ಅವರು ವಿಕಾಸ ಪುಸ್ತಕ ಬಹುಮಾನಗಳನ್ನು ವಿತರಿಸಿದರು. ಬಹುಮಾನ ವಿಜೇತರಿಗೆ ಶಾಲು ಹೊದಿಸಿ, ಫಲಕ ಮತ್ತು ಗ್ರಂಥ ಗೌರವದೊಂದಿಗೆ ನಗದು ಬಹುಮಾನಗಳನ್ನು ನೀಡಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆದ ಡಾ. ಜಿ. ಎನ್ ಉಪಾಧ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶರತ್ ಕಾರ್ನಾಡ್ ಅವರು ಭಾಗವಹಿಸಿದ್ದರು.
ವಿಕಾಸ ಪುಸ್ತಕ ಬಹುಮಾನ ಸ್ವೀಕರಿಸಿದ ರಾಜೀವ ನಾಯಕ, ಶ್ರೀನಿವಾಸ ಜೋಕಟ್ಟೆ ಕಲಾ ಭಾಗ್ವತ್ ತಮ್ಮ ಅನಿಸಿಕೆ ತಿಳಿಸಿದರು.
ಕೃತಿಗಳ ಮೂಲಕ ಸಾಹಿತ್ಯ ಶಾಶ್ವತವಾಗಿ ಉಳಿಯುತ್ತದೆ ಎಂದು ಡಾ. ಜಿ.ಎನ್ ಉಪಾಧ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ನುಡಿದರು. ಮುಂಬೈ ವಿವಿ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿಯವರು ಕಾರ್ಯಕ್ರಮವನ್ನು ಸಂಯೋಜಿಸಿ, ನಿರೂಪಿಸಿದರು.



Post a Comment