ಶ್ರೀ ಜಗದಂಬಾ ಮಂದಿರ, ಡೊಂಬಿವಲಿ (ಪ). : ಮಾ. 11ರಿಂದ 13ರವರೆಗೆ ಜರುಗಲಿರುವ ಎಂಟನೇ ವಾರ್ಷಿಕ ಮಹೋತ್ಸವದ ಕಾರ್ಯಕ್ರಮಗಳ ವಿವರ
ಶ್ರೀ ಜಗದಂಬಾ ಮಂದಿರದಲ್ಲಿ ವಿಜೃಂಭಣೆಯಿಂದ ಜರಗುವ ಎಂಟನೇ ವಾರ್ಷಿಕ ಮಹೋತ್ಸವವು ಇದೇ ಬರುವ ಸ್ವಸ್ತಿ ಶ್ರೀ ಶುಭಕೃತ್, ನಾಮ ಸಂವತ್ಸರದ ಕುಂಭ ಮಾಸ ದಿನ 25 ಸಲುವ ಫಾಲ್ಗುಣ ಬಹುಳ 2ಯು ದಿನಾಂಕ 11.3.2023 ನೇ ಶನಿವಾರ ಮೊದಲ್ಗೊಂಡು ದಿನಾಂಕ 13.3.2023 ನೇ ಸೋಮವಾರ ಪರ್ಯಂತ ಶ್ರೀ ಜಗದಂಬಾ ದೇವಿ ಸನ್ನಿಧಿಯಲ್ಲಿ ಎಂಟನೇ ವಾರ್ಷಿಕೋತ್ಸವವು ಹಾಗೂ ಪಲ್ಲಕಿ ಉತ್ಸವವು ಡೊಂಬಿವಲಿಯ ಶ್ರೀ ಶಂಕರ ನಾರಾಯಣ ತಂತ್ರಿ ಅವರ ನೇತೃತ್ವದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಅಲ್ಲದೆ ಆಮಂತ್ರಿತ ಪುರೋಹಿತರ ಉಪಸ್ಥಿತಿಯಲ್ಲಿ ಜರುಗಲಿರುವುದು.
ದಿನಾಂಕ 11.3.2023 ನೇ ಶನಿವಾರ ಬೆಳಿಗ್ಗೆ ಗಂಟೆ 8.00ರಿಂದ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ, ಸ್ವಸ್ತಿ ಪುಣ್ಯಾಹಾವಾಚನ, ತೋರಣ ಮುಹೂರ್ತ, 12 ತೆಂಗಿನಕಾಯಿ ಮಹಾಗಣಪತಿ ಹೋಮ, 9.00 ರಿಂದ ಭಜನೆ, 10.00 ರಿಂದ ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ, ತದನಂತರ ದೇವಸ್ಥಾನದ ಅಧ್ಯಕ್ಷರಾದ ದಿವಾಕರ ಜಿ. ರೈ ಅವರ ಘನ ಅಧ್ಯಕ್ಷತೆಯಲ್ಲಿ ಗೌರವಾಧ್ಯಕ್ಷರಾದ ಹರೀಶ್ ಡಿ. ಶೆಟ್ಟಿ ಹಾಗೂ ಇತರ ಸರ್ವ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಅಲ್ಲದೆ ಆಮಂತ್ರಿತ ಅತಿಥಿ ಗಣ್ಯರಾದ ಶಿಂಧೆ ಘಟಕದ ಡಾ. ಶ್ರೀಕಾಂತ್ ಏಕನಾಥ್ ಶಿಂಧೆಯವರು, ಅಭ್ಯಾಗತ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ದೇವಸ್ಥಾನದ ಅಧ್ಯಕ್ಷ ದಿವಾಕರ ಜಿ. ರೈ ಹಾಗೂ ಅವರ ಹಿರಿಯ ಸಹೋದರ ಸುಧಾಕರ ರೈ ಮೂಡುಶೆಡ್ಡೆ ಅಲ್ಲದೆ ದಿವಾಕರ ರೈಯವರ ಅತ್ತೆ ಶ್ರೀಮತಿ ಜಯಂತಿ ಶೆಟ್ಟಿ ಶಿರ್ವ ಮಂಚಕಲ್ ಇವರೆಲ್ಲರೂ ಶ್ರೀ ಜಗದಂಬಾ ದೇವಿಯ ಸಾನಿಧ್ಯಕ್ಕೆ ಸೇವಾ ರೂಪದಲ್ಲಿ ಅರ್ಪಿಸಲು ಮೂಲ್ಕಿಯ ಪ್ರಸಿದ್ಧ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಕ್ತಾದಿಗಳ ಹರಿಕೆಯ ಬಯಲಾಟ ಪ್ರದರ್ಶನಗೊಳ್ಳುತ್ತಿದ್ದ ಭವ್ಯವೂ ದಿವ್ಯವೂ ಆಗಿ ವಿದ್ಯುತ್ ದೀಪಾಲಂಕೃತವಾಗಿರುವ `ರಂಗಸ್ಥಳ' ಮುಂಬಯಿಗೆ ತರಿಸಿ ಅಂದು ಜರುಗಲಿರುವ ಧಾರ್ಮಿಕ ಸಭೆಯಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ.
ಮಧ್ಯಾಹ್ನ ಗಂಟೆ 12.00ರಿಂದ ಇದೇ ರಂಗಸ್ಥಳದಲ್ಲಿ ಶನೀಶ್ವರ ಮಹಾಪೂಜೆ ಹಾಗೂ ಗ್ರಂಥ ಪಾರಾಯಣ ಯಕ್ಷಗಾನ ರೂಪದಲ್ಲಿ ಶ್ರೀ ಜಗದಂಬಾ ಮಂದಿರದ ಸದಸ್ಯರಿಂದ ಜರುಗಲಿದೆ. ಮಂಡಳಿಯ ಸದಸ್ಯರಾದ ಸುರೇಶ್ ಟಿ. ಅಂಚನ್ ಅವರು ಶ್ರೀ ಶನಿದೇವರ ಕಲಶ ಪ್ರತಿಷ್ಠೆ ಮಾಡಲಿರುವರು. ಬಳಿಕ ಮಧ್ಯಾಹ್ನ ಗಂಟೆ 1ರಿಂದ ಪಲ್ಲಪೂಜೆ ಮತ್ತು ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 5ರಿಂದ ದುರ್ಗಾನಮಸ್ಕಾರ, ಲಲಿತ ಸಹಸ್ರ ನಾಮಾರ್ಚನೆ, ಕುಂಕುಮಾರ್ಚನೆ, ಮಹಾಪೂಜೆ, ಸಾಯಂಕಾಲ ಗಂಟೆ 8ರಿಂದ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ
ದಿ. 12.3.2023ನೇ ರವಿವಾರ ಬೆಳಿಗ್ಗೆ ಗಂಟೆ 8.00ರಿಂದ ಶ್ರೀ ದೇವಿ ಸನ್ನಿಧಿಯಲ್ಲಿ 25 ಕಲಶಾರಾಧನೆ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಮಧ್ಯಾಹ್ನ ಗಂಟೆ 11ರಿಂದ ಉತ್ಸವ ಬಲಿ, ಪಲ್ಲಕಿ ಉತ್ಸವ, ಕಟ್ಟೆಪೂಜೆ, ಶೋಭಾ ಯಾತ್ರೆ, ಪಲ್ಲಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಸಾಯಂಕಾಲ ಗಂಟೆ 4ರಿಂದ ಶ್ರೀ ಜಗದಂಬಾ ಮಂದಿರದ ಎದುರು ಕಾಂಕ್ರೀಟ್‌ಕರಣಗೊಂಡು ನೂತನವಾಗಿ ನಿರ್ಮಿಸಲಾದ ರಸ್ತೆ ಹಾಗೂ ಉತ್ತಮ ರೀತಿಯಲ್ಲಿ ನಿರ್ಮಿಸಲಾದ ಶೌಚಾಲಯವನ್ನು ಉದ್ಘಾಟಿಸಲಿದ್ದಾರೆ. ಶಿವಸೇನಾ ಸೆಲ್‌ನ ಪದಾಧಿಕಾರಿಗಳಾದ ಅನುಪಮ ಶೆಟ್ಟಿ ಹಾಗೂ ಸುಭಾಷ್ ಶೆಟ್ಟಿ ಅಲ್ಲದೆ ಜಯಪೂಜಾರಿ ಇವರೆಲ್ಲರ ಜೊತೆಯಲ್ಲಿ ಈ ಉದ್ಘಾಟನಾ ಸಮಾರಂಭದಲ್ಲಿ ಶಿಂಧೆ ಘಟಕದ ಡಾ. ಶ್ರೀಕಾಂತ್ ಏಕನಾಥ್ ಶಿಂಧೆಯವರು ಹಾಗೂ ದೇವಸ್ಥಾನದ ಅಧ್ಯಕ್ಷರು, ಗೌರವಾಧ್ಯಕ್ಷರು, ಸರ್ವ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಮಹಿಳಾ ವಿಭಾಗದ ಸರ್ವ ಸದಸ್ಯೆಯರು ಉಪಸ್ಥಿತರಿರುವರು.
ಸಾಯಂಕಾಲ 5 ರಿಂದ ನೂತನವಾಗಿ ಉದ್ಘಾಟಿಸಲ್ಪಟ್ಟಿರುವ ರಂಗಸ್ಥಳದಲ್ಲಿ ಪ್ರಥಮ ಸೇವೆಯಾಟವಾಗಿ ಯಕ್ಷ ಗುರು ಮನೋಜ್ ಕುಮಾರ್ ಹೆಜಮಾಡಿ ಇವರ ನೇತೃತ್ವದಲ್ಲಿ ಸ್ಥಳೀಯ ಕಲಾವಿದರಿಂದ `ಶಾಂಭವಿ ವಿಜಯ' ಯಕ್ಷಗಾನ ಬಯಲಾಟ ಪ್ರದರ್ಶನವಿದೆ.
ದಿ. 13.3.2023ನೇ ಸೋಮವಾರ ಬೆಳಿಗ್ಗೆ ಗಂಟೆ 9.00ರಿಂದ ನವಕಲಶಾರಾಧನೆ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ ಜರುಗಲಿದ್ದು ಶ್ರೀಕ್ಷೇತ್ರದ 8ನೇ ವಾರ್ಷಿಕೋತ್ಸವದಲ್ಲಿ ಭಕ್ತರೆಲ್ಲರೂ ತನು ಮನ ಧನಗಳಿಂದ ಸಹಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಗೌ. ಪ್ರ. ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಪತ್ರಿಕಾ ಪ್ರಕಣೆಯಲ್ಲಿ ವಿನಂತಿಸಿದ್ದಾರೆ.
.jpg)
Post a Comment