".

Header Ads

ತರಕಾರಿ ವ್ಯಾಪಾರಿಯ ಖಾತೆಗೆ ಬರೊಬ್ಬರಿ 172 ಕೋಟಿ ಹಣ ಜಮೆ..!

 


ತರಕಾರಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಗೆ ಬರೋಬ್ಬರಿ 172 ಕೋಟಿ ರೂ. ವರ್ಗಾವಣೆಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಕುರಿತಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತರಕಾರಿ ವ್ಯಾಪಾರಿಯನ್ನು ಗಾಜಿಪುರ ಜಿಲ್ಲೆಯ ವಿಜಯ್‌ ರಸ್ತೋಗಿ ಎಂದು ಗುರುತಿಸಲಾಗಿದ್ದು, ತಮ್ಮ ಖಾತೆಯಲ್ಲಿ  ಇಷ್ಟೊಂದು ಪ್ರಮಾಣದ ಹಣ  ನೋಡಿ ಅವರು ಗಾಬರಿಗೊಂಡಿದ್ದಾರೆ. ಅಲ್ಲದೇ ತಮ್ಮ ಪಾನ್‌  ನಂಬರ್‌ ಹಾಗೂ ಇತರ ಮಾಹಿತಿಯನ್ನು ಬಳಸಿಕೊಂಡು ಬೇರೆಯವರು ಖಾತೆ ತೆರೆದಿರಬಹುದು ಎಂದು ಆರೋಪಿಸಿದ್ದಾರೆ.

ಇಷ್ಟೊಂದು ಪ್ರಮಾಣದ ಹಣ ವಿಜಯ್‌ ರಸ್ತೋಗಿ ಅವರ ಖಾತೆಗೆ ಹೇಗೆ ಜಮೆಯಾಯಿತು ಎಂಬುದರ ಕುರಿತಾಗಿ ಆದಾಯ ತೆರಿಗೆ ಇಲಾಖೆ  ಡಿಜಿಟಲ್‌ ಹಣ ವರ್ಗಾವಣೆ ಏಜೆನ್ಸಿಯನ್ನು ಪ್ರಶ್ನಿಸಿದ್ದು, ಅವರು ಸಹ ಈ ಖಾತೆ ವಿಜಯ್‌ ರಸ್ತೋಗಿಯದ್ದಲ್ಲ ಎಂದು ಹೇಳಿದ್ದಾರೆ. ಡಿಜಿಟಲ್‌ ವರ್ಗಾವಣೆಯಿಂದಾಗಿ ಈ ಪ್ರಮಾಣದ ಹಣ ವರ್ಗಾವಣೆಯಾಗಿರುವ ಸಾಧ್ಯತೆ ಇದೆ. ಹಾಗಾಗಿ ಈ ಕುರಿತು ಸೈಬರ್‌ ಸೆಲ್‌ನಿಂದಲೂ   ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

 ಈ ಕುಟುಂಬವನ್ನು ಆದಾಯ ತೆರಿಗೆ ಇಲಾಖೆ ಹಾಗೂ ಪೊಲೀಸರು ಆಗಾಗ್ಗೆ ಭೇಟಿ ನೀಡುತ್ತಲೇ ಇದ್ದು, ಪ್ರಶ್ನೆ ಮಾಡ್ತಿದ್ದಾರೆ ಎಂದೂ ಹೇಳಲಾಗಿದೆ.

ಒಂದು ತಿಂಗಳ ಹಿಂದೆ ಐಟಿ ಅಧಿಕಾರಿಗಳು ವಿಜಯ್‌ ರಸ್ತೋಗಿ ಅವರ ಹೆಸರು ಸೇರಿದಂತೆ ಅಕ್ರಮ ಹಣ ವರ್ಗಾವಣೆಯ ಪಟ್ಟಿಯನ್ನು ಸ್ವೀಕರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ನಂತರ, ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಸೈಬರ್ ಕ್ರೈಂ ಸೆಲ್‌ಗೆ ವರ್ಗಾಯಿಸಲಾಗಿದೆ. ವಿಜಯ್‌ ರಸ್ತೋಗಿ ಹೆಸರಿನಲ್ಲಿ 172.81 ಕೋಟಿ ರೂಪಾಯಿ ಬ್ಯಾಂಕ್ ಖಾತೆಗೆ ಜಮಾ ಆಗಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ಗಹ್ಮಾರ್ ಪವನ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.

ಘಟನೆಯ ಸುದ್ದಿ ಬಹಿರಂಗವಾದ ನಂತರ ಸ್ಥಳೀಯ ಮಾಧ್ಯಮಗಳು ಸಹ ವಿಜಯ್‌ ರಸ್ತೋಗಿ ಅವರ ಮನೆಗೆ ಭೇಟಿ ನೀಡಿವೆ. 172 ಕೋಟಿ ರೂ. ಜಮಾ ಆಗಿರುವ ಬ್ಯಾಂಕ್ ಖಾತೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ವಿಜಯ್‌ ರಸ್ತೋಗಿ ಹೇಳಿದರು, ಖಾತೆಯನ್ನು ತೆರೆಯಲು ಯಾರೋ ತನ್ನ ಪ್ಯಾನ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. 

Powered by Blogger.