ಹೇಯ್ಲಿ ಮ್ಯಾಥ್ಯೂಸ್ ಅಬ್ಬರ; ಮುಂಬಯಿಗೆ ಸತತ ಎರಡನೇ ಜಯ
ಕೆರೇಬಿಯನ್ ಸ್ಟಾರ್ ಹೇಯ್ಲಿ ಮ್ಯಾಥ್ಯೂಸ್ ಅವರ ಭರ್ಜರಿ ಆಲ್ ರೌಂಡರ್ ಆಟದ ನೆರವಿನಿಂದ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಮುಂಬೈ ತಂಡವು ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು.
ಇದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿತು.
ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿಯನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿತು. ಮುಂಬೈಗೆ ಇದು ಎರಡನೇ ಗೆಲುವು.
ಆರ್‌ಸಿಬಿ ನೀಡಿದ 156 ರನ್‌ಗಳ ಗುರಿ ಬೆನ್ನತ್ತಿದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಮುಂಬೈ, 34 ಎಸೆತಗಳು ಬಾಕಿ ಇರುವಂತೆಯೇ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಆಲ್‌ರೌಂಡ್ ಆಟವಾಡಿದ ಹೇಯ್ಲಿ ಮ್ಯಾಥ್ಯೂಸ್ (ಔಟಾಗದೆ 77 ರನ್,13 ಬೌಂಡರಿ ಒಂದು ಸಿಕ್ಸರ್ - 28ಕ್ಕೆ 3 ವಿಕೆಟ್) ಮತ್ತು ನತಾಲಿ ಸಿವೆರ್ ಬ್ರಂಟ್ (ಔಟಾಗದೆ 55 ರನ್, 29ಎ, ಒಂಬತ್ತು ಬೌಂಡರಿ 1 ಸಿಕ್ಸರ್) ಮುಂಬೈ ಗೆಲುವನ್ನು ಸುಲಭಗೊಳಿಸಿದರು. ಆರಂಭಿಕ ಬ್ಯಾಟರ್ ಯಷ್ಟಿಕಾ ಭಾಟಿಯಾ (23) ಔಟಾದ ಬಳಿಕ ಎರಡನೇ ವಿಕೆಟ್ ಜೊತೆಯಾಟದಲ್ಲಿ ಹೇಯ್ಲಿ ಮತ್ತು ನತಾಲಿ 114 ರನ್ ಸೇರಿಸಿದರು. ತಂಡವು 14.2 ಓವರ್‌ಗಳಲ್ಲಿ 159 ರನ್ ಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸ್ಮೃತಿ ಮಂದಾನ ಬಳಗ 18.4 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟಾಯಿತು. ಹೇಯ್ಲಿ ಮ್ಯಾಥ್ಯೂಸ್ ಮತ್ತು ತಲಾ ಎರಡು ವಿಕೆಟ್ ಪಡೆದ ಸಾಯಿಕಾ ಇಶಾಕ್ ಹಾಗೂ ಅಮೇಲಿ ಕೆರ್ ಆರ್‌ಸಿಬಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ನಾಯಕಿ ಸ್ಮೃತಿ (23 ರನ್, 17 ಎ., 4X5) ಮತ್ತು ಸೋಫಿ ಡಿವೈನ್ (16 ರನ್) ಮೊದಲ ವಿಕೆಟ್‌ಗೆ 4.1 ಓವರ್‌ಗಳಲ್ಲಿ 39 ರನ್ ಸೇರಿಸಿ ಉತ್ತಮ ಮೊತ್ತದ ಸೂಚನೆ ನೀಡಿದ್ದರು. ಆದರೆ ಮುಂದಿನ ಎಂಟು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಬೆಂಗಳೂರಿನ ತಂಡ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 60 ರನ್‌ಗಳಿಂದ ಪರಾಭವಗೊಂಡಿತ್ತು.


Post a Comment