ಸದ್ದಿಲ್ಲದೆ ಸುದ್ದಿಯಲ್ಲಿರುವ ಸಂಘಟನಾ ಚತುರ - "ಶ್ರೀ ರವಿ ಸನಿಲ್ "
"ದುರ್ಲಭಂ ಮನುಷ ದೇಹೋ ದೇಹಂ ಚ ಕ್ಷಣ ಬಂಗುರಂ" ಎಂದಿದ್ದಾರೆ ಪ್ರಾಜ್ಞರು ಅನೇಕ ಜನ್ಮದ ಸುಕೃತ ಫಲದಿಂದ ಮನುಷ್ಯ ಜನ್ಮವು ಪ್ರಾಪ್ತಿಯಾಗುತ್ತದೆ ಎಂದೂ ಹಾಗೇ ಪ್ರಾಪ್ತಿಯಾದ ಈ ಮನುಷ್ಯ ದೇಹವು ಕ್ಷಣಿಕವಾದದ್ದು. ಲೋಕ ಜೀವರಾಶಿಗಳಿಗೆ ಹುಟ್ಟು ಆಕಸ್ಮಿಕ, ಬದುಕು ಅನಿವಾರ್ಯ, ಸಾವು ನಿಶ್ಚಯ, ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಅನಿವಾರ್ಯದ ಬದುಕು ಪ್ರಾಣಿ ಪಕ್ಷಿಗಳಿಗಿಂತ ವಿಭಿನ್ನವಾಗಿರುತ್ತದೆ. ಮನುಷ್ಯನಂತೆಯೇ ಹಸಿವು, ಬಾಯಾರಿಕೆ, ನಿದ್ರೆ, ಎಚ್ಚರಿಕೆ, ಸಂತಾನಾಪೇಕ್ಷೆಗಳು ಪ್ರಾಣಿ ಪಕ್ಷಿಗಳಿಗಿದ್ದರೂ ಅದರ ಸಹಜತೆಗಿಂತ ಮಾನವನ ಧರ್ಮ ಎಷ್ಟೋ ವ್ಯತ್ಯಾಸವಿದೆ. ಆತನ ಬದುಕಿನಲ್ಲಿ ನೀತಿ ನಿಯಮವಿದೆ, ಚಿಂತನೆಯಿದೆ. ಮಾನವ ತನ್ನ ಜೀವನದ ಸತ್ಪಥದಲ್ಲಿ ಮುನ್ನಡೆದಾಗ ಅದು ಸುಸಂಸ್ಕೃತಿ ಎನಿಸುತ್ತದೆ. ಧರ್ಮಾಧರ್ಮಗಳನ್ನು ತಿಳಿದು ನಾಲ್ಕು ಜನರಿಗೆ ಬೇಕಾದವನಾಗಿ ಜೀವನ ಸಾಗಿಸಿದಾಗ ಅವನಲ್ಲಿ ಆತ್ಮ ತೃಪ್ತಿಯು ಮೂಡುತ್ತದೆ. ಅದು ಅವನ ಸುಸಂಸ್ಕೃತ ಜೀವನವೆನಿಸುತ್ತದೆ. ಇಂತಹ ಸಜ್ಜನರ ಸಂಪರ್ಕ ವಿಶೇಷತೆಯಿಂದ ಕೆಲವರು ತಮ್ಮ ಸಾಧನೆಯಿಂದಲೇ ಕೀರ್ತಿಯ ಶಿಖರವನ್ನೇರಿ ಜನಾನುರಾಗಿ ಯೋಗ್ಯ ಜನರಿಂದ ಗುರುತಿಸಲ್ಪಡುವ ವ್ಯಕ್ತಿಗಳಾಗಿ ಸಮಾಜದಲ್ಲಿ ಮನ್ನಣೆ ಪಡೆದು ತಮ್ಮ ಮನೆತನದ ವರಪುತ್ರರೆನಿಸಿಕೊಳ್ಳುತ್ತಾರೆ. ಇಂತಹ ವರ ಪುತ್ರರ ಸಾಲಿನಲ್ಲಿ ಸೇರಿರುವವರೇ "ಸದ್ದಿಲ್ಲದೆ ಸುದ್ದಿಯಲ್ಲಿರುವ ಸಂಘಟನಾ ಚತುರ" ಡೊಂಬಿವಲಿ ತುಳು ಕನ್ನಡಿಗರ ಮುದ್ದಿನ ಕಣ್ಮಣಿ, ನಮ್ಮೆಲ್ಲರ ಪ್ರೀತಿಯ "ಶ್ರೀ ರವಿ ಸನಿಲ್" ಮಿನಿ ತುಳುನಾಡು ಎಂದೆ ಖ್ಯಾತಿವೆತ್ತು ಹಲವಾರು ಸಂಘ-ಸಂಸ್ಥೆಗಳಿಗೆ ಆಶ್ರಯ ತಾಣವಾಗಿರುವ ಡೊಂಬಿವಲಿ, ಕಲ್ಯಾಣ್ ಪರಿಸರದ ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ರಂಗದಲ್ಲಿ ಅಪಾರ ಜನಪ್ರಿಯರಾದ ರವಿ ಸನಿಲ್ ಅವರು ಮೂಲತಃ ಮೂಲ್ಕಿ ಸಮೀಪದ ಕಾರ್ನಾಡಿನವರು. ಸಪ್ತ ಜಲದುರ್ಗೆಯರಲ್ಲಿ ಕಿರಿಯವಳಾದ "ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ" ಅಮ್ಮನವರು ನೆಲೆಸಿರುವ ಪುಣ್ಯಕ್ಷೇತ್ರವೇ ಶ್ರೀಯುತರ ತವರೂರು.
ಕಿನ್ನಿಗೋಳಿ ಶ್ರೀಯುತ ಸೋಮಯ್ಯ ಪೂಜಾರಿ ಹಾಗೂ ಮೂಲ್ಕಿ ಕಾರ್ನಾಡ್ ಶ್ರೀಮತಿ ಲಕ್ಷ್ಮೀ ಪೂಜಾರಿ ದಂಪತಿಗಳಿಗೆ ಮಗನಾಗಿ ಜನಿಸಿರುವ ಶ್ರೀಯುತರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೇಲೂರು ತಾಲೂಕಿನ ಬಾಸೂರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಿಕ ಮಾಧ್ಯಮಿಕ ವಿದ್ಯಾಭ್ಯಾಸವನ್ನು ಪಲಿಮಾರ್ ಇಲ್ಲಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಂದುವರಿಸಿ, ಪ್ರೌಢ ಶಿಕ್ಷಣವನ್ನು ಮೂಲ್ಕಿಯ ವಿಜಯ ಕಾಲೇಜಿನಲ್ಲಿ ಬಿಕಾಂ ಪದವಿ ಪೂರೈಸಿರುವ ಅವರು ವಾಣಿಜ್ಯ ಪದವೀಧರರು.
ತಾನೋರ್ವ ನಿಷ್ಠಾವಂತರಾಗಿ ತುಳುನಾಡಿನ ಗ್ರಾಮ ಜೀವನದ ಸಂಸ್ಕೃತಿ ಕಲೆಯ ಬಗ್ಗೆ ವಿಶೇಷ ಆಸಕ್ತಿಯುಳ್ಳ ಅವರು ಬದುಕಿನ ಭವಿಷ್ಯವನ್ನರಸುತ್ತಾ ಉದರಂಭರಣಕ್ಕಾಗಿ 1983ರಲ್ಲಿ ಮಹಾರಾಷ್ಟ್ರದ ವಾಣಿಜ್ಯ ನಗರಿ ಮುಂಬೈಗೆ ಪಾದರ್ಪಣೆಗೈದು ಆರಂಭದಲ್ಲಿ "ಸೀತಾ ಲಿಪ್ಟರ್ಸ್" ಎಂಬ ಕಂಪನಿಯಲ್ಲಿ ಉದ್ಯೋಗಿಯಾಗಿ ದುಡಿಮೆಗೆ ಆರಂಭಿಸಿದರು. ಕೆಲವು ಸಮಯದ ಬಳಿಕ ಮುಂಬೈಯ ಪ್ರತಿಷ್ಠಿತ ಕಂಪನಿ "ರಂಗರ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್" ಇಲ್ಲಿ 27 ವರ್ಷ ದುಡಿದು ಪ್ರಸ್ತುತ ಕೆ ಜಿ ಎನ್ ಮೂವರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಸಿ ಈ ಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಾಲಾ ದಿನಗಳಲ್ಲಿಯೇ ಪಠ್ಯೇತರ ಚಟುವಟಿಕೆಗಳೊಂದಿಗೆ ಶಾಲೆಯಲ್ಲಿ ಜರುಗುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ ಕಥೆ, ಕವನ, ಪ್ರಬಂಧ, ಲೇಖನ, ಭಾಷಣ, ಜನಪದ, ನಾಟಕ, ಯಕ್ಷಗಾನ, ಭಜನೆ ಮುಂತಾದವುಗಳಲ್ಲಿ ಭಾಗವಹಿಸಿ ತಮ್ಮ ಗುರುಗಳ ಹಾಗೂ ಸಹಪಾಠಿಗಳ ಹೃದಯ ಗೆದ್ದು ಅನೇಕ ಬಹುಮಾನಗಳಿಗೆ ಬಾಜನರಾಗಿ ಅತ್ಯುತ್ತಮ ನಾಟಕ ಯಕ್ಷಗಾನ ಕಲಾವಿದನಾಗಿ ಗುರುಗಳ ಮೆಚ್ಚಿನ ಶಿಷ್ಯರೆಂಬ ಹೆಗ್ಗಳಿಕೆ ಇವರದ್ದು. ಸುಸಂಸ್ಕೃತ ಜೀವನ ಶೈಲಿ, ಮಾತೃ ಭಾಷಾಭಿಮಾನಿಯಾದ ಶ್ರೀಯುತರಿಗೆ ವಿವಿಧ ಕ್ಷೇತ್ರದ ದಿಗ್ಗಜರ ಸಂಪರ್ಕ, ಯೋಗ್ಯ ಗುರುಗಳ ಮಾರ್ಗದರ್ಶನ ಇವೆಲ್ಲವೂ ಅವರ ನಾನಾ ರೀತಿಯ ಕಾರ್ಯ ಚಟುವಟಿಕೆಗಳಿಗೆ ಪ್ರೇರಣಾ ಶಕ್ತಿ ಎಂದು ಹೇಳಬಹುದು.
ಕಳೆದ ಮೂರುವರೆ ದಶಕಗಳ ಹಿಂದೆ ಡೊಂಬಿವಲಿ ಪೂರ್ವದಲ್ಲಿ ಸ್ಥಾಪನೆ ಗೊಂಡಿರುವ ಬಿಲ್ಲವರ ಅಸೋಸಿಯೇಶನಿನ ಡೊಂಬಿವಲಿ ಸ್ಥಳೀಯ ಕಚೇರಿಯ ಸ್ಥಾಪಕ ಸದಸ್ಯರಾಗಿ, ಬಳಿಕ ವಿವಿಧ ಪದಾಧಿಕಾರಿಯಾಗಿ ಜನತಾ ಸೇವೆಯೇ ಜನಾರ್ಧನ ಸೇವೆಯಂದರಿತು ಅತ್ಯುತ್ತಮ ಸಂಘಟಕರಾಗಿ ನಗರದಾದ್ಯಂತ ವಿವಿಧ ಸಂಘ ಸಂಸ್ಥೆಗಳೊಂದಿಗೆ ಕ್ರಿಯಾಶೀಲರಾಗಿ, ತೆರೆಮರೆಯಲ್ಲಿ ಎಲ್ಲರೊಂದಿಗೆ ಅವಿನಾಭಾವ ಸಂಬಂಧ ವಿರಿಸಿ ಬಿಲ್ಲವ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಅಪಾರ ಜನಪ್ರಿಯರಾದ ಶ್ರೀಯುತರು ಕಾರ್ಯಧ್ಯಕ್ಷರಾಗಿದ್ದ ಅವರ ಕಾಲಾವಧಿಯಲ್ಲಿ ಸಂಘವು ತನ್ನ ರಜತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿರುವುದು ಅವರ ಕಾರ್ಯದಕ್ಷತೆಗೆ ನಿದರ್ಶನವಾಗಿದೆ.
ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿಯ ಸ್ಥಾಪನಾರಂಭದಿಂದ ಇಂದಿನವರೆಗೂ ಸಂಘದಲ್ಲಿ ವರ್ಷಾವದಿ ಜರಗುವ ಪ್ರತಿಯೊಂದು ಕಾರ್ಯಚಟುವಟಿಕೆಗಳಿಗೂ ಚಾಲನೆ ನೀಡುವುದರ ಹೊರತು ಸಾಮೂದಾಯಿಕ ಸಂಸ್ಕೃತಿಗಳ ಸಾಧನೆ ಯೋಜನೆಗಳಿಗೆ ಬೆಂಬಲ ನೀಡುತ್ತಿರುವುದು ಸ್ತುತ್ಯರ್ಹವಾಗಿದೆ.
ಸಾಧಿಸುವ ಛಲ ನಿರಂತರ ಪ್ರಯತ್ನ ಇವೆರಡೂ ಪರಸ್ಪರ ಮೇಳೈಸಿದಾಗ ಒಬ್ಬ ಸಾಮಾನ್ಯನೂ ಉತ್ತುಂಗ ಶಿಖರವೇರುವ ಸಾಹಸಕ್ಕೆ ಮುಂದಾಗಬಲ್ಲ ಎಂಬುದಕ್ಕೆ ರವಿ ಸನಿಲ್ ಪ್ರಸ್ತುತ ಬಿಲ್ಲವ ಭವನದ ಪ್ರಧಾನ ಕಛೇರಿಯಲ್ಲಿ 2021 ರಿಂದ 2024 ರ ಕಾಲಾವಧಿಗೆ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವುದೇ ಜ್ವಲಂತ ಸಾಕ್ಷಿಯಾಗಿದೆ.
"ಪರೋಪಕಾರಾರ್ಥಾಯ ಫಲಾಂತಿ ವೃಕ್ಷ, ಪರೋಪಕಾರಾರ್ಥಾ ವಹಾಂತಿ ನದ್ಯಾ, ಪರೋಪಕಾರಾರ್ಥ ಗುಹಾಂತಿ ಗೌವಾ, ಪರೋಪಕಾರಾರ್ಥಾಯ ಇದಂ ಶರೀರಂ" ವೃಕ್ಷಗಳು ಫಲ ಬಿಡುವುದು ಪರರಿಗಾಗಿ, ನದಿಗಳು ಹರಿಯುತ್ತಿರುವುದು ಪರೋಪಕಾರಕ್ಕಾಗಿ, ಆಕಳು ಹಾಲು ಗರೆಯುವುದು ಅನ್ಯರಿಗಾಗಿ, ಹಾಗೆಯೇ ಪ್ರಕೃತಿ ಧರ್ಮದಲ್ಲಿ ಶ್ರೇಷ್ಠ ಜೀವಿ ಎಂದೆನಿಸಿರುವ ಮನುಷ್ಯ ಜನ್ಮದ ಬುದ್ದಿಜೀವಿಗಳಾದ ನಮ್ಮ ಶರೀರವು ಪರೋಪಕಾರಕ್ಕಾಗಿ ಉಪಯೋಗಿಸಲ್ಪಟ್ಟಾಗ ಮಾತ್ರ ನಮ್ಮ ಮನುಷ್ಯ ಜನ್ಮವು ಸಾರ್ಥಕವೆನಿಸುವುದು. "ಈಶಾ ವಾಸ್ಯ ಮಿದಂ ಶರೀರಂ" ಎಂಬ ಸುಭಾಷಿತ ವ್ಯಾಖನವನ್ನು ತ್ರಿಕರಣ ಪೂರ್ವಕ ಸ್ವೀಕರಿಸಿ ಪರೋಪಕಾರಕ್ಕಾಗಿ ಸ್ಥಾಪನೆಗೊಂಡು ಸಮಾಜೋನ್ನತಿಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಾಗಿರುವ ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಸ್ಥಾಪಕ ಸದಸ್ಯರಾಗಿ ವಿವಿಧ ಪದಾಧಿಕಾರಿಯಾಗಿಯೂ 34 ವರ್ಷಗಳ ದೀರ್ಘಕಾಲ ನಿಸ್ವಾರ್ಥವಾದ ಸೇವೆಗೈದಿರುವುದಲ್ಲದೆ ಬಿಲ್ಲವರ ಅಸೋಷಿಯೇಷನ್ ನ ಜೊತೆ ಕಾರ್ಯದರ್ಶಿಯಾಗಿ ಪ್ರಸ್ತುತ ಆಯ್ಕೆಗೊಂಡಿರುವುದು ಶ್ಲಾಘನೀಯ. ತುಳು ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ, ಶ್ರೀ ರಾಧಾಕೃಷ್ಣ ಶ್ರೀ ಶನೇಶ್ವರ ಮಂದಿರದ ಉಪಾಧ್ಯಕ್ಷರಾಗಿ, ತುಳುಕೂಟ ಡೊಂಬಿವಲಿಯ ಉಪಾಧ್ಯಕ್ಷರಾಗಿ, ಕರ್ನಾಟಕ ಸಂಘ ಡೊಂಬಿವಲಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಅಲ್ಲದೆ ಪರಿಸರದ ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ ಸಮಾಜೋನ್ನತಿಯ ಕಾರ್ಯ ಚಟುವಟಿಕೆಗಳಲ್ಲಿ ತಮ್ಮ ವಿಶಿಷ್ಟ ಸಾಧನೆಯಿಂದ ಸಿದ್ದಿ ಪ್ರಸಿದ್ಧಿಯನ್ನು ಗಳಿಸಿರುವ ಶ್ರೀಯುತರು ಶುದ್ಧ ತುಳು, ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಹೇಗೆ ಪಂಚ ಬಾಷಾ ವಾಗ್ಮಿಯಾಗಿ ಸರಳವಾಗಿ ನಿರರ್ಗಳವಾಗಿ ಮಾತನಾಡಬಲ್ಲರು, ಅವರು ಅತ್ಯುತ್ತಮ ಕಾರ್ಯಕ್ರಮ ನಿರೂಪಕರು ಹೌದು.
"ಕೆರೆಯ ನೀರನ್ನು ಕೆರೆಗೆ ಚೆಲ್ಲಿ" ಎಂಬಂತೆ ಯಾವ ಸಮಾಜದಿಂದ ಬದುಕಿನ ಸುಖವನ್ನು ಕಂಡೆನೋ ಆ ಸಮಾಜಕ್ಕೆ ತನ್ನ ದುಡಿಮೆಯ ಮೂರನೇ ಒಂದಂಶವನ್ನು ವಿನಿಯೋಗಿಸಿ ಸಮಾಜದ ಋಣ ತೀರಿಸಿಕೊಳ್ಳಬೇಕೆಂದು ಅರಿತು ಕಳೆದ ಮೂರುವರೆ ದಶಕ ಗಳಿಂದ ಡೊಂಬಿವಲಿ, ಕಲ್ಯಾಣ್ ಪರಿಸರದ ಅನೇಕ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ, ವೈದ್ಯಕೀಯ ಹಾಗೂ ನಿರಾಶ್ರಿತರಿಗಾಗಿ ಆರ್ಥಿಕ ಸಹಾಯ ನೀಡಲೆಂದು ವಾಟ್ಸಪ್ ಗ್ರೂಪ್ ರಚಿಸಿ ಮಾನವೀಯ ವಾತ್ಸಲ್ಯವನ್ನರಿತು ಸಮಾಜದ ಸೇವೆಯಲ್ಲಿ ಕಾರ್ಯ ಪ್ರವೃತ್ತರಾಗಿ ಬಾಳಿನ ತೃಪ್ತಿಯನ್ನುಂಡವರು.
"ವಿದ್ಯಾ ದದಾತಿ ವಿನಯಂ" ಎಂಬ ಶುಭಾಷಿತವು ರವಿ ಸನಿಲ್ ಅವರಿಗೆ ಅನ್ವಯಿಸುತ್ತದೆ. ವಿದ್ಯೆಯು ವಿನಯ ಗುಣದಿಂದ ಶೋಭಿಸುತ್ತದೆ, ಐಶ್ವರ್ಯವೂ ದಾನ ಗುಣದಿಂದ ಶೋಭಿಸುತ್ತದೆ, ಶೌರ್ಯವೂ ಕ್ಷಮಗುಣ ದಿಂದ ಶೋಭಿಸುತ್ತದೆ. ಹೀಗೆ ವಿನಯಾದಿ ಸದ್ಗುಣಗಳಿಂದ ಪರಿಪೂರ್ಣರಾಗಿ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಅವರ ನಿಸ್ವಾರ್ಥ ಸೇವಾ ಮನೋಭಾವನೆ ಅಭಿನಂದನೀಯ.
ವಿದ್ಯೆಯನ್ನು ನೀಡಿದವರು ಮಾತ್ರ ಗುರುಗಳಲ್ಲ, ಬದಲಾಗಿ ಪ್ರತಿಯೊಂದು ರಂಗದಲ್ಲಿಯೂ ನ್ಯೂನ್ಯತೆಗಳನ್ನು ತಿದ್ದಿ ಬುದ್ದಿ ಹೇಳಿ ಸಮಾಜದ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಕಾರಣರಾದವರೂ ಗುರು ಸ್ಥಾನದಲ್ಲಿ ಅರ್ಹರಾಗಿರುತ್ತಾರೆ. ಗುರು ಹಿರಿಯರ ಆಶೀರ್ವಾದವಿದ್ದರೆ ದೇವರು ಎಲ್ಲರನ್ನೂ ಕಾಯುತ್ತಾನೆ ಎಂಬುದಕ್ಕೆ ನಾನೇ ಉದಾಹರಣೆ ಯಾಗಿದ್ದೇನೆ. ಹಾಗೂ ಬದುಕಿನ ಸಾರ್ಥಕ್ಯವನ್ನು ಕಂಡಿದ್ದೇನೆ ಎನ್ನುವ ಅವರು ವೃತ್ತಿ ಹಾಗೂ ಪ್ರವೃತ್ತಿಯಲ್ಲಿ ಎಲ್ಲರೊಂದಿಗೊ ಬೆರೆಯುವ ಸರಳ ಸಜ್ಜನಿಕೆಯ ಮಿತ ಭಾಷಿ.
ತನ್ನ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯ ಚಟುವಟಿಕೆಗಳನ್ನು ಸದಾ ಪ್ರೋತ್ಸಾಹಿಸುತ್ತಿರುವ ಧರ್ಮಪತ್ನಿ ಶ್ರೀಮತಿ ಕುಶಾ ಅವರೊಂದಿಗೆ 1990 ರಲ್ಲಿ ವೈವಾಹಿಕ ಜೀವನದ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಪಾದರ್ಪಣೆಗೈದು, ಹೆಣ್ಣು ಸಂಸಾರದ ಕಣ್ಣು ಎಂಬಂತೆ ಒರ್ವಳೇ ಮಗಳು ರಿಕಿತಾ ಈ ದಂಪತಿಗಳ ಮುದ್ದಿನ ಕಣ್ಮಣಿ. ವಿದ್ಯಾವಂತೆಯಾದ ಮಗಳು ರಿಕಿತಾ ವಿವಾಹ ಸಂಪನ್ನೆಯಾಗಿದ್ದು, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಅಳಿಯ ಜಿತೇಶ್ ಎಕ್ಸಿಸ್ ಬ್ಯಾಂಕ್ ನಲ್ಲಿ ಪ್ರಬಂಧಕರಾಗಿದ್ದಾರೆ.
ಪ್ರತಿಯೊಬ್ಬ ಪುರುಷನ ಯಶಸ್ವಿ ಬದುಕಿಗೆ ಮಹಿಳೆಯೊಬ್ಬಳ ಪಾತ್ರ ಮಹತ್ವದ್ದಾಗಿರುತ್ತದೆ. ಅಂತೆಯೇ ರವಿ ಸನಿಲ್ ಅವರ ಧರ್ಮಪತ್ನಿ ಶ್ರೀಮತಿ ಕುಶಾ ಅವರೂ ಸಹ ನಾಲ್ಕು ದಶಕಗಳ ಕಾಲ 'ಟಾಟಾ ಹಾಸ್ಪಿಟಲ್' ಇಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ. ಪತಿಗೆ ತಕ್ಕ ಸಹ ಧರ್ಮಿಣಿಯಾಗಿ, ಸದ್ಗುಣ ಸಂಪನ್ನೆಯಾಗಿ, ಗ್ರಹಿಣಿಯಾಗಿ, ಮಮತೆಯ ಮಾತೆಯಾಗಿ, ರವಿ ಸನಿಲ್ ಅವರ ಯಶಸ್ವಿನ ಹಾದಿಯಲ್ಲಿ ದೇದೀಪ್ಯಮಾನವಾದ ಬೆಳಕಾಗಿ ಅವರ ಪ್ರತಿಯೊಂದು ಕಾರ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾ ಸಮಾಜ ಸೇವೆಗೆ ಬೆನ್ನೆಲುಬಾಗಿರುವರು.
ತುಳುನಾಡಿನ ಮೌಲ್ಯಯುತ ಕುಟುಂಬದಲ್ಲಿ ಬೆಳೆದು ಬಂದ ಶ್ರೀಯುತರು ತನ್ನ ಯಶಸ್ವಿ ಬದುಕಿಗೆ ತನ್ನ ಹಿರಿಯರ ಹಾಗೂ ಪರಿಸರದ ಹಿರಿಯ ಕಿರಿಯರನೇಕರ ಸತ್ ಸಂಸ್ಕಾರದ ವಾತಾವರಣವೇ ಕಾರಣವೆಂದು ತಿಳಿದು ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸುತ್ತಿರುವ ಅಪಾರ ಮಿತ್ರರನ್ನು ಸದಾ ಸ್ಮರಿಸುತ್ತಾರೆ. ಕರೋನ ಸಂಕಷ್ಟದ ಸಮಯದಲ್ಲೂ ನಿರಾಶ್ರಿತರಿಗೆ ಆರ್ಥಿಕ ಸಹಾಯ ನೀಡಿರುವ ಅವರು ಯಾವುದೇ ಪ್ರಚಾರ ಬಯಸದೆ ತೆರೆಮರೆಯಲ್ಲಿ ಗೈದಿರುವ ಸೇವೆಯು ಆವಿಸ್ಮರಣೆಯ. ವೃತ್ತಿ ಪ್ರವೃತ್ತಿಯಲ್ಲಿ ಪ್ರಾಮಾಣಿಕತೆಯಿಂದ ಸಮಾಜ ಸೇವಕರೇನಿಸಿರುವ ಅವರನ್ನು ನಗರದಾದ್ಯಂತ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿರುವುದು ಪ್ರಸಂಶನೀಯ. ಜನತಾ ಸೇವೆಯೇ ಜನಾರ್ಧನ ಸೇವೆಯೆಂದರಿತು ಸಮಾಜೋನ್ನತಿಯಲ್ಲಿ ಸಕ್ರೀಯರಾಗಿರುವ ಶ್ರೀಯುತರ ಧಾರ್ಮಿಕ ಪ್ರಜ್ಞೆಯು ಜಾಗೃತವಾಗಿರಲಿ, ವಿನಯಾದಿ ಸದ್ಗುಣಗಳಿಂದ ಪರಿಪೂರ್ಣರಾಗಿರುವ ಅವರ ನಿಸ್ವಾರ್ಥ ಸೇವೆಯು ನಿರಂತರ ನಡೆಯುತ್ತಿರಲಿ, ಯುವ ಜನತೆಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಮನೋಗತವು ಈಡೇರಲಿ. ಶತಾಯುಷ್ಯದ ಉಜ್ವಲ ಭವಿಷ್ಯದೊಂದಿಗೆ ವಿಜೃಂಬಿಸುವಂತೆ ಆರಾಧ್ಯ ದೇವರು ಹಾಗೂ ನಾರಾಯಣ ಗುರುಗಳ ಪೂರ್ಣಾನುಗ್ರಹವಿರಲೆಂದು ಶುಭ ಹಾರೈಸುವ..
ತೆಂಕ ಎರ್ಮಾಳು ನಾಗೇಶ್ ಎಸ್ ಸುವರ್ಣ ಡೊಂಬಿವಲಿ.





Post a Comment