ಬಿಪರ್ಜಾಯ್ ಚಂಡಮಾರುತ – ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು ಈ ಚಂಡಮಾರುತಕ್ಕೆ ಬಿಪರ್ಜಾಯ್ ಎಂದು ಹೆಸರಿಡಲಾಗಿದೆ. ಈ ಚಂಡಮಾರುತದಿಂದಾಗಿ ಕರ್ನಾಟಕದಲ್ಲೂ ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರುಮಳೆಯ ಹಿನ್ನಡೆ ನಡುವೆ ಇದೀಗ ಕರಾವಳಿ ಜನತೆಗೆ ಒಂದು ಒಳ್ಳೆ ಸುದ್ದಿ ಬಂದಿದ್ದು, ಅರಬ್ಬಿ ಸಮುದ್ರದಲ್ಲಿ ಬಿಪರ್ಜಾಯ್ ಚಂಡಮಾರುತ ರೂಪುಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ . ರಾಜ್ಯದ ಕರಾವಳಿ ಪ್ರದೇಶದಲ್ಲಿ ಇದೇ 6ರಿಂದ 11ರವರೆಗೆ ಭಾರಿ ಮಳೆ ಯಾಗಲಿದೆ. ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ತಿಳಿಸಿದೆ.ಇದೇ 6ರಿಂದ 11ರವರೆಗೆ ಭಾರಿ ಮಳೆಯಾಗುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು.
ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಬಾರದು. ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶ ಮಾಡಿದ್ದಾರೆ.

Post a Comment