".

Header Ads

ತಂಬಾಕಿನ ಧೂಳು ಆರೋಗ್ಯಕ್ಕೆ ಹಾನಿಕರವೆಂದು ತಿಳಿದೂ ,ಕಾರ್ಮಿಕರ ಮೇಲೆ ಕರುಣೆ ಇಲ್ಲ ? ಎಐಟಿಯುಸಿ ಪ್ರಶ್ನೆ..!

 


ತನ್ನ ವಾಸ್ತವ್ಯ ಮನೆಯನ್ನೇ ಬೀಡಿ ಕಾರ್ಖಾನೆಯಾಗಿ ಬಳಸಿ, ಸಮಯದ ಮಿತಿಯಿಲ್ಲದೆ ಹಗಲಿರುಳೆನ್ನದೆ ದುಡಿದು, ತಂಬಾಕಿನ ಧೂಳು ಆರೋಗ್ಯಕ್ಕೆ ಹಾನಿಕರವೆಂದು ತಿಳಿದೂ, ತನ್ನನ್ನೇ ಅವಲಂಬಿಸಿರುವ ತನ್ನ ಕುಟುಂಬವನ್ನು ಪೋಷಿಸಲಾಗದೇ, ಕನಿಷ್ಟ ಮಜೂರಿಯಿಂದ ತನ್ನ ಆರ್ಥಿಕ ಆವಶ್ಯಕತೆಗಳನ್ನೂ ಪೂರೈಸಲಾಗದೆ, ಬೀಡಿ ಕಾರ್ಮಿಕರ ಮೇಲೆ ಮಾಲಕರಿಗೆ ಯಾಕೆ ಕರುಣೆ ಇಲ್ಲ.

ಅವರ ಹಕ್ಕಿನ ಮಜೂರಿಯನ್ನು ಯಾಕೆ ವಂಚಿಸುತ್ತೀರಿ ಎಂದು ಎಐಟಿಯುಸಿ ನೇತೃತ್ವದ ಎಸ್.ಕೆ ಬೀಡಿ ವರ್ಕರ್ಸ್ ಫೆಡರೇಶನ್‌ನ ಅಧ್ಯಕ್ಷರೂ ಎಐಟಿಯುಸಿಯ ಜಿಲ್ಲಾ ಕಾರ್ಯದರ್ಶಿಯೂ ಆಗಿರುವ ವಿ.ಎಸ್.ಬೇರಿಂಜ  ಅವರು ಇಂದು ಮಂಗಳೂರಿನ ಮಿನಿ ವಿಧಾನಸೌಧದೆದುರು ನಡೆದ ಹಕ್ಕೊತ್ತಾಯ ಚಳವಳಿಯಲ್ಲಿ  ಬೀಡಿ ಮಾಲಕರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.

ರಾಜ್ಯ ಉಚ್ಛನ್ಯಾಯಾಲಯದ ತೀರ್ಪು ಇದ್ದರೂ ರೂ.12.75 ತುಟ್ಟಿಭತ್ತೆ ಯನ್ನು ಪಾವತಿಸದ, ರೂ.210 ಕನಿಷ್ಟಕೂಲಿಯನ್ನು ಜಾರಿಗೊಳಿಸದ ಬೀಡಿ ಮಾಲೀಕರುಗಳ ನೀತಿಯ ವಿರುದ್ಧ ಮಾತನಾಡಿದ್ದರು.


ದಿನವಿಡೀ ದುಡಿದರೂ ಸಿಗುವ ಮಜೂರಿ ಸುಮಾರು ರೂ.200 ಮಾತ್ರ. ಅದರಲ್ಲೂ ಕೆಲಸವಿರುವುದು ವಾರಕ್ಕೆ ಮೂರ್ನಾಲ್ಕು ದಿವಸಗಳು ಮಾತ್ರ.

ಮಾಲಕರು ನೀಡುವ ಕಳಪೆ ಕಚ್ಛಾವಸ್ತುಗಳಿಗೆ ಕಾರ್ಮಿಕರೇ ದಂಡ ಪಾವತಿಸುವ ಪದ್ದತಿ ಬೀಡಿ ಕೈಗಾರಿಕೆಯಲ್ಲಿರುವುದಲ್ಲದೆ ಬೇರೆಲ್ಲೂ ಇಲ್ಲ.

ಪರಿಸ್ಥಿತಿ ಹೀಗಿದ್ದರೂ ಸರಕಾರ ನಿಗದಿಗೊಳಿಸಿದ ಮಜೂರಿಯನ್ನು ಪಾವತಿಸದೆ, ನ್ಯಾಯಲಯದ ತೀರ್ಪನ್ನೂ ಜ್ಯಾರಿ ಮಾಡದೆ ಕೋರ್ಟ್ – ಕಛೇರಿ – ಸಂಧಾನ ಮಾತುಕತೆ ಎಂದು ಕಾಲ ಹರಣ ಮಾಡಿ ನಿಜವಾದ ಕಾರ್ಮಿಕರಿಗೆ ಸಿಗದಂತೆ ಮಾಡುವ ಬೀಡಿ ಮಾಲಕರ ನೀತಿ ಖಂಡನೀಯ.

ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್ ರವರು ಮಾತನಾಡಿ ಹೈಕೋರ್ಟ್ ತೀರ್ಪನ್ನು ಮನ್ನಿಸಿ ಮಾಲಕರುಗಳು ಕಾರ್ಮಿಕರಿಗೆ ಮಜೂರಿ ಪಾವತಿಸಬೇಕೆಂದು ನಾವು ಎಐಟಿಯುಸಿ ವತಿಯಿಂದ ಈಗಾಗಲೇ ಎಲ್ಲಾ ಬೀಡಿ ಮಾಲಕರುಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದೇವೆ ಎಂದರು.

ಫೆಡರೇಶನ್‌ನ ಉಪಾಧ್ಯಕ್ಷರಾದ ಹಸೈನಾರ್ ವಿಟ್ಲ ಮಾತನಾಡಿ ನಮ್ಮ ಈ ಹಕ್ಕೊತ್ತಾಯವನ್ನು ಬೀಡಿ ಮಾಲಕರು ಮತ್ತು ಸರಕಾರ ಕೇವಲವಾಗಿ ಪರಿಗಣಿಸಿದರೆ ಮುಂದಿನ ದಿವಸಗಳಲ್ಲಿ ಬೀಡಿ ಕೈಗಾರಿಕೆಯ ಅವಲಂಬಿತರು ಹಾಗೂ ಸಾರ್ವಜನಿಕರನ್ನು ಸೇರಿಕೊಂಡು ನಿಮ್ಮ ವಿರುದ್ಧ ಜನಾಭಿಪ್ರಾಯ ರೂಪಿಸಲಾಗುವುದು ಎಂದರು.

ಫೆಡರೇಶನ್‌ನ ಪ್ರ.ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್, ಫೆಡರೇಶನ್‌ನ ಜೊತೆ ಕಾರ್ಯದರ್ಶಿ ಕರುಣಾಕರ್ ಮಾರಿಪಲ್ಲ, ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ವಿ ರಾವ್, ಕೋಶಾಧಿಕಾರಿ ಎ. ಪ್ರಭಾಕರ್ ರಾವ್, ಸಿಪಿಐ ಮಾಜಿ ಕಾರ್ಯದರ್ಶಿ ವಿ. ಕುಕ್ಯಾನ್, ಎಐಟಿಯುಸಿ ನಾಯಕರುಗಳಾದ ಸುಲೋಚನಾ ಕವತ್ತಾರು, ತಿಮ್ಮಪ್ಪ ಕಾವೂರು, ಬಾಬು ಭಂಡಾರಿ, ರಾಮ ಮುಗೇರ, ಸೀತಾರಾಮ ವಿಟ್ಲ, ಒ.ಕೃಷ್ಣ, ಶಮಿತಾ, ಮಮತ, ಶಿವಾನಂದ ಉಡುಪಿ, ಶಶಿಕಲಾ ಗಿರೀಶ್, ಸುಚಿತ್ರಾ, ಸರೋಜಿನಿ ಕುರಿಯಾಳ, ಕೇಶವತಿ, ಮೋಹನ ಅರಳ, ಹರ್ಷಿತ್ ಮುಂತಾದವರು ನಾಯಕತ್ವ ನೀಡಿದರು.





Powered by Blogger.