ವಿಮಾನ ನಿಲ್ದಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಸನ್ಮಾನ
ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರ ಗುರುವಾರ ಅಧಿಕೃತವಾಗಿ ಆರಂಭಗೊಂಡಿತು. ಸೋಗಾನೆಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಆಗಮಿಸಿದ ಮೊದಲ ವಿಮಾನ 11 ಗಂಟೆಗೆ ಬಂದಿಳಿಯಿತು. ವಾಟರ್ ಸೆಲ್ಯೂಟ್ ಮೂಲಕ ವಿಮಾನಕ್ಕೆ ಸ್ವಾಗತ ಕೋರಲಾಯಿತು.
ಮಲೆನಾಡಿನ ಜನರ ಬಹುವರ್ಷಗಳ ಕನಸು ನನಸಾಯಿತು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 9.50ಕ್ಕೆ ಹೊರಟ ಮೊದಲ ವಿಮಾನ 11.05ಕ್ಕೆ ಶಿವಮೊಗ್ಗಕ್ಕೆ ಬಂದಿಳಿಯಿತು. ಈ ಮೂಲಕ ಮಲೆನಾಡ ಭಾಗದಲ್ಲಿ ವಿಮಾನಯಾನ ಸೇವೆಯ ಹೊಸ ಅಧ್ಯಾಯ ಆರಂಭವಾಯಿತು. ಎಲ್ಲಾ ಪ್ರಯಾಣಿಕರಿಗೂ ವಿಮಾನ ನಿಲ್ದಾಣದ ಸಿಬ್ಬಂದಿ ಗುಲಾಬಿ ಹೂ, ಸಿಹಿ ನೀಡಿ ಬರಮಾಡಿಕೊಂಡರು.ಮೊದಲ ವಿಮಾನದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ದಿ ಸಚಿವ ಎಂ. ಬಿ. ಪಾಟೀಲ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಶಾಸಕ ಆರಗ ಜ್ಞಾನೇಂದ್ರ ಮುಂತಾದವರು ಶಿವಮೊಗ್ಗಕ್ಕೆ ಆಗಮಿಸಿದರು.ನಂತರ ನಡೆದ ಕಾರ್ಯಕ್ರಮದಲ್ಲಿ ಸೋಗಾನೆಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಯಾನ ಕಾರ್ಯಾಚರಣೆ ಮತ್ತು ಅಧಿಕೃತ ಜಾಲತಾಣವನ್ನು ಸಚಿವ ಎಂ. ಬಿ. ಪಾಟೀಲ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ನೀಡಿದ ರೈತರ ಪರವಾಗಿ ಇಬ್ಬರು ರೈತರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಮಾತನಾಡಿ, "ಶಿವಮೊಗ್ಗ ಜಿಲ್ಲೆಯ ಬಹು ವರ್ಷಗಳ ವಿಮಾನ ನಿಲ್ದಾಣದ ಕನಸು ನಿಮ್ಮೆಲ್ಲರ ಬೆಂಬಲದಿಂದ ನನಸಾಗಿದೆ. ಕೈಗಾರಿಕೆ ಬೆಳವಣಿಗೆ, ಉದ್ಯೋಗ ಸೃಷ್ಟಿಗೆ ಉತ್ತಮ ಅವಕಾಶಗಳು ತೆರೆದುಕೊಳ್ಳಲಿವೆ. ನಿಲ್ದಾಣದಲ್ಲಿ ರಾತ್ರಿ ವಿಮಾನ ಇಳಿಯುವ ವ್ಯವಸ್ಥೆ ಆಗುತ್ತಿದ್ದು ಕೆಲವೇ ವರ್ಷಗಳಲ್ಲಿ ಈ ನಿಲ್ದಾಣ ಅಂತರಾಷ್ಟ್ರೀಯ ನಿಲ್ದಾಣ ಆಗುವುದರಲ್ಲಿ ಅನುಮಾನವಿಲ್ಲ" ಎಂದು ಹೇಳಿದರು.

Post a Comment