ವಿಧಾನ ಪರಿಷತ್ ನೂತನ ಸದಸ್ಯರಾಗಿ ಉಮಾಶ್ರೀ, ಸೀತಾರಾಂ
ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಮಾಜಿ ಸಚಿವರಾದ ಎಂ.ಆರ್. ಸೀತಾರಾಂ, ಉಮಾಶ್ರೀ ಹಾಗೂ ಪಕ್ಷದ ಮುಖಂಡ ಎಚ್ ಪಿ ಸುದಾಮ್ ದಾಸ್ ಕರ್ನಾಟಕ ವಿಧಾನ ಪರಿಷತ್ ನ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ವಿಧಾನಸೌಧ ಬಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಭಾಪತಿ ಅವರು ನೂತನ ಸದಸ್ಯರಿಗೆ ಸಂಪ್ರದಾಯದಂತೆ ವಿಧಾನ ಪರಿಷತ್ತಿನ ನಡಾವಳಿ ಪುಸ್ತಕ ಒಳಗೊಂಡ ಸೂಟ್ ಕೇಸ್ ನೀಡಿ ಶುಭ ಹಾರೈಸಿದರು.
ಮಾಜಿ ಸಚಿವರಾದ ಎಂ.ಆರ್. ಸೀತಾರಾಂ, ಉಮಾಶ್ರೀ ಹಾಗೂ ಮಾಜಿ ಐಆರ್ಎಸ್ ಅಧಿಕಾರಿ ಎಚ್.ಪಿ. ಸುಧಾಮ್ ದಾಸ್ ಅವರನ್ನು ಸರ್ಕಾರದ ಶಿಫಾರಸ್ಸಿನ ಮೇರೆಗೆ ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಲು ರಾಜ್ಯಪಾಲರು ಅಂಕಿತ ಹಾಕಿದ್ದರು. ಇದರಲ್ಲಿ ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಪಕ್ಷದೊಳಗೇ ಬಹಳ ವಿರೋಧವಿತ್ತು. ಆದರೆ ಕೊನೆಗೂ ಪಕ್ಷದ ಮನವೊಲಿಕೆಯಲ್ಲಿ ಹಿರಿ ತಲೆಗಳು ಯಶಸ್ವಿಯಾಗಿದ್ದವು.
ಏತನ್ಮಧ್ಯೆ ಪಟ್ಟಿಯಲ್ಲಿ ಮನ್ಸೂರ್ ಅಲಿ ಖಾನ್ ಅವರ ಹೆಸರಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿಅವರ ಬದಲಿಗೆ ಮಾಜಿ ಸಚಿವೆ ಉಮಾಶ್ರೀ ಅವರನ್ನು ಪರಿಗಣಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರಿಷ್ಠರಿಗೆ ಮನವಿ ಮಾಡಿದ್ದರು.

Post a Comment