ಮಂಗಳೂರಿನ ಅಂಗಡಿ ಯಲ್ಲಿ ಅಮಲೇರಿಸುವ ಚಾಕಲೇಟ್ ಮಾರಾಟ: ಮಾಲೀಕರ ಬಂಧನ
ಮಂಗಳೂರು ನಗರದ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ಬಾಂಗ್ ಚಾಕಲೇಟ್‌ನಲ್ಲಿ ಮಾದಕದ್ರವ್ಯ ಇರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಂಗಡಿಗಳ ಇಬ್ಬರು ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ ಸ್ಟ್ರೀಟ್‌ನ ಪೂಜಾ ಪ್ಯಾಲೇಸ್ ಕಟ್ಟಡದಲ್ಲಿರುವ ವೈಭವ್ ಪೂಜಾ ಸೇಲ್ಸ್ ಮಾಲಕ ಮನೋಹರ್ ಶೇಟ್(49), ಉತ್ತರ ಪ್ರದೇಶ ರಾಜ್ಯದ ಗೋಶಿ ತಹಶೀಲ್, ಮಿಶ್‌ಳಿ ವಿಲೇಜ್, ಘಪೌರಾ ಪೋಸ್ಟ್ ನಿವಾಸಿ ಬೆಚನ್ ಸೋನ್ಕರ್(45) ಬಂಧಿತ ಆರೋಪಿಗಳು.
2023ರ ಜುಲೈ 19ರಂದು ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ ನಗರದ ಕಾರ್ ಸ್ಟ್ರೀಟ್ ನಲ್ಲಿ ಪೂಜಾ ಪ್ಯಾಲೇಸ್ ಕಟ್ಟಡದಲ್ಲಿರುವ ವೈಭವ್ ಪೂಜಾ ಸೇಲ್ಸ್ ಎಂಬ ಅಂಗಡಿಯಲ್ಲಿ ಬಾಂಗ್ ಚಾಕಲೇಟ್ ದೊರಕಿತ್ತು. ಈ ವೇಳೆ ತಲಾ 40 ಬಾಂಗ್ ಚಾಕಲೇಟ್ ತುಂಬಿರುವ 300 ಪ್ಯಾಕೇಟ್ ಗಳನ್ನು ಮತ್ತು 592 ಬಿಡಿ ಚಾಕ್ಲೇಟ್ ಗಳನ್ನು ( ಒಟ್ಟು 12,592 ಬಾಂಗ್ ಚಾಕಲೇಟ್ ಗಳು) ಪೊಲೀಸರು ವಶಪಡಿಸಿಕೊಂಡಿದ್ದರು. ಇದರ ಒಟ್ಟು ಮೌಲ್ಯ 48,000 ರೂ. ಎಂದು ಅಂದಾಜಿಸಲಾಗಿದೆ.
ಅದೇ ದಿನ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಗರದ ಹೈಲ್ಯಾಂಡ್ ಬಳಿ ಗೂಡಂಗಡಿಯಲ್ಲಿ ಬಾಂಗ್ ಮಿಶ್ರಿತ ಚಾಕಲೇಟ್ ಗಳು ಪತ್ತೆಯಾಗಿತ್ತು. ಈ ವೇಳೆ ಅಂಗಡಿ ಮಾಲಕ ಆರೋಪಿ ಬೆಚನ್ ಸೋನ್ಕರ್ ಎಂಬಾತನ ವಶದಲ್ಲಿದ್ದ 5500 ರೂ. ಮೌಲ್ಯದ ಬಾಂಗ್ ಚಾಕಲೇಟ್‌ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದರು.ಹೀಗೆ ಸ್ವಾಧೀನಪಡಿಸಿಕೊಂಡ ಬಾಂಗ್ ಚಾಕಲೇಟ್‌ಗಳನ್ನು ಮಾದಕದ್ರವ್ಯದ ಅಂಶದ ಪತ್ತೆಗೆ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಬಾಂಗ್ ಚಾಕಲೇಟ್‌ಗಳಲ್ಲಿ ಗಾಂಜಾ ಅಂಶವಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದಿದೆ. ಆದ್ದರಿಂದ ಆರೋಪಿಗಳಾದ ಮನೋಹರ್ ಶೇಟ್ ಹಾಗೂ ಬೆಚನ್ ಸೋನ್ಕರ್ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿತರನ್ನು ನ್ಯಾಯಾಲಯಲಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ಯ ಆರೋಪಿಗಳು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Post a Comment