ಮುಂಬೈ:- 24 ಗಂಟೆಯಲ್ಲಿ 12 ಶಿಶುಗಳು ಸೇರಿ 24 ರೋಗಿಗಳ ಸಾಲು ಸಾಲು ಸಾವು
ಮಹಾರಾಷ್ಟ್ರದ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಮೃತಪಟ್ಟಿದ್ದು, ಈ ಘಟನೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಾಂದೇಡ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರದಿಂದ ಸೋಮವಾರದೊಳಗೆ (24 ಗಂಟೆಯಲ್ಲಿ) ಸೂಕ್ತ ಚಿಕಿತ್ಸೆ ಸಿಗದೆ ಹನ್ನೆರಡು ಹಸುಗೂಸುಗಳು ಸೇರಿದಂತೆ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ವೈದ್ಯರು ಮತ್ತು ಆಸ್ಪತ್ರೆಯ ಕೊರತೆಯಿಂದಾಗಿ ಈ ದುರಂತ ಸಂಭವಿಸಿದೆ. 12 ರೋಗಿಗಳು ವಿವಿಧ ಕಾಯಿಲೆ ಮತ್ತು ಹಾವು ಕಡಿತದಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಸ್ಪತ್ರೆಯ ಡೀನ್ ಶ್ಯಾಮ್ ರಾವ್ ವಾಕೋಡೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಹಲವು ಸಿಬ್ಬಂದಿಯನ್ನು ವರ್ಗಾವಣೆ ಮಾಡಿರುವುದರಿಂದ ರೋಗಿಗಳಿಗೆ ಸೇವೆ ನೀಡಲು ತೀವ್ರ ತೊಂದರೆಯಾಗುತ್ತಿದೆ. ಬಜೆಟ್ ನಲ್ಲಿ ಸಾಕಷ್ಟು ಹಣ ಮೀಸಲಿಡದ ಕಾರಣ ಔಷಧ ಖರೀದಿಸಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ಸೇವಾ ವೈದ್ಯರು ಮತ್ತು ಔಷಧಿಯ ಕೊರತೆ ಉಂಟಾಗಿದೆ. ನಾಂದೇಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ದೊಡ್ಡ ಆಸ್ಪತ್ರೆ ಇದಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಇರುವ ಸೌಲಭ್ಯಗಳು ಸಾಕಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್ (Congress) ಮುಖಂಡ ಅಶೋಕ್ ಚವ್ಹಾಣ (Ashok chawhan), ಸರ್ಕಾರ ಕೂಡಲೇ ರೋಗಿಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಆಸ್ಪತ್ರೆಯಲ್ಲಿ ಇನ್ನೂ 70 ರೋಗಿಗಳ ಸ್ಥಿತಿ ಗಂಭೀರವಾಗಿದೆ. ಸರ್ಕಾರ ಇತ್ತ ಗಮನ ಹರಿಸಿ ಮುಂದಾಗುವ ಅನಾಹುತವನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಥಾಣೆಯ ಸರ್ಕಾರಿ ಆಸ್ಪತ್ರೆಯಲ್ಲಿ 12 ತಾಸಿನಲ್ಲಿ 17 ಮಂದಿ ಸಾವಿಗೀಡಾದ ಘಟನೆ ಸಂಚಲನ ಉಂಟು ಮಾಡಿತ್ತು. ಇದೀಗ ಅಂಥದ್ದೇ ಮತ್ತೊಂದು ದುರ್ಘಟನೆ ಮರುಕಳಿಸಿದೆ.
ಆರೋಗ್ಯ ಸಚಿವ ರಾಜೀನಾಮೆ ಆಗ್ರಹ:
ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿದಂತೆ 24 ಮಂದಿ ಸಾವನ್ನಪ್ಪಿರುವ ಘಟನೆಯನ್ನು ಎನ್‌ಸಿಪಿ (NCP) ಸಂಸದೆ ಸುಪ್ರಿಯಾ ಸುಳೆ (Supriya sule) ತೀವ್ರವಾಗಿ ಖಂಡಿಸಿದ್ದಾರೆ. ಈ ಸಾವುಗಳು ಖಂಡಿತವಾಗಿಯೂ ಕಾಕತಾಳೀಯವಲ್ಲ. ಈ ಬಗ್ಗೆ ಸಮಗ್ರ ತನಿಖೆಗೆ ನಡೆಯಬೇಕು. ಈ ಹಿಂದೆ ಥಾಣೆ ಸರ್ಕಾರಿ ಆಸ್ಪತ್ರೆಯಲ್ಲಿ ತೋರಿದ ನಿರ್ಲಕ್ಷ್ಯದಿಂದಾಗಿ 17 ಜೀವಗಳು ಬಲಿಯಾಗಿದ್ದವು. ಈ ಬಾರಿ 24 ಜನರು ಸಾವಿಗೀಡಾಗಿದ್ದಾರೆ. ಸರ್ಕಾರ ತನ್ನ ದೋಷಗಳನ್ನು ಮುಚ್ಚಿಡಲು ಕಣ್ಣಾಮುಚ್ಚಾಲೆ ಆಡುತ್ತಿದೆ. ಆರೋಗ್ಯ ಸಚಿವರ ಘಟನೆಯ ಹೊಣೆ ಹೊತ್ತು ರಾಜೀನಾಮೆ ನೀಡಿ, ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

Post a Comment