ಆದಿತ್ಯನ ಆತ್ಮ
--------
ಶ್ರೀನಿವಾಸ ಜೋಕಟ್ಟೆ
---------
ಆದಿತ್ಯನಿಗೆ ತಾನು 'ಸತ್ತು' ಎಷ್ಟು ದಿನಗಳಾಗಿರಬಹುದೆಂದು ತಿಳಿಯಲಿಲ್ಲ. ಹೀಗಾಗಿ ಮತ್ತೆ ಮನೆಗೆ ಕಾಲಿಟ್ಟ, ದಿನಗಳು ಸ್ಪಷ್ಟವಾಯಿತು.ಅಪ್ಪ ಹದಿಮೂರನೇ ದಿನದ ಕ್ರಿಯೆಗಳನ್ನು ಮಾಡುತ್ತಿದ್ದರು.
ಆದಿತ್ಯ ತನ್ನ ಕೋಣೆಗೆ ಬಂದ.
ಕೋಣೆಯಲ್ಲಿ ಇವನ ದೊಡ್ಡ ಫೋಟೋ ಒಂದಕ್ಕೆ ಹಾರ ಹಾಕಿಟ್ಟಿದ್ದರು. ಮನೆಯಲ್ಲಿ ಅವರಿವರು ಹಲವಾರು ನೆಂಟರು, ಪುರೋಹಿತರ ಅಸ್ಪಷ್ಟ ಮಂತ್ರಗಳು.
ಆದಿತ್ಯ ಒಳಗೆ ಬಂದ. ಯಾರಿಗೂ ತಿಳಿಯದೇ ಹೋಯಿತು. ತನ್ನನ್ನು
ಯಾರೂ ಗಮನಿಸುತ್ತಿಲ್ಲವೆಂದು ತಿಳಿದ ಆದಿತ್ಯ, ಕಿರುಚಬೇಕೆಂದು ಎಣಿಸಿದ.
"ಅಪ್ಪಾ, ನಾನು ಸಾಯಲಿಲ್ಲ. ಇಲ್ಲಿಯೇ, ನಿಮ್ಮೆದುರೇ ಇದ್ದೇನೆ."
ಇಲ್ಲ, ಆದಿತ್ಯ ಕಿರುಚಲಿಲ್ಲ, ಸುಮ್ಮನಾದ.
ಪುರೋಹಿತರಿಗೆ ಸಿಗುವ ದಕ್ಷಿಣೆಗೆ ತಾನ್ಯಾಕೆ ಅಡ್ಡ ಬರಬೇಕು? ತನ್ನ ಸ್ವರ ಕೇಳಿ ಮತ್ತೆ ಪ್ರೇತ ಆಗಿ ಬಂದನೋ.... ಅಂತ ಅಪ್ಪ ಇನ್ನಷ್ಟು ಭಯಪಡಬಹುದು. ಪ್ರೇತಶಾಂತಿಗಾಗಿ ಆಮೇಲೆ ಮತ್ತಷ್ಟು ಖರ್ಚು ಮಾಡಲೂ ಅಪ್ಪ ಹೆದರಲಾರರು. ಬೇಡ, ಕೂಗುವುದು ಬೇಡ.
ತಾನು ಸತ್ತಿರುವುದು ಆದಿತ್ಯನಿಗೆ ಖಚಿತವಾಯಿತು. ಮನೆಯಲ್ಲಿ ನಿಂತುಕೊಳ್ಳಲು ಬೇಸರವಾಗಿ ಹೊರಗೆ ಬಂದು ರಸ್ತೆಯತ್ತ ಹೆಜ್ಜೆ ಇಟ್ಟ. ತನ್ನ ವೈಕುಂಠ ಸಮಾರಾಧನೆಯ ಊಟಕ್ಕಾಗಿ ಊರವರು ಮನೆಯತ್ತ ಹೋಗುತ್ತಿರುವುದನ್ನು ರಸ್ತೆಯಲ್ಲಿ ಗಮನಿಸಿದ. ಅವರಲ್ಲಿ ತಾನು ಪ್ರೀತಿಸಿದ ಹುಡುಗಿ ರೇಖಾ ಕೂಡಾ ಇರುವುದನ್ನು ಕಂಡಾಗ ಬಹಳ ಸಿಟ್ಟು ಬಂತು. ನಗು ನಗುತ್ತಾ ಬರುತ್ತಿದ್ದಾಳೆ!
ತಾನು ಸತ್ತ ದುಃಖ ಅವಳಲ್ಲಿ ಯಾಕಿಲ್ಲ..? ಬೇರೆ ಯಾರನ್ನೋ ಪ್ರೀತಿಸುತ್ತಿರಬಹುದೋ....? ಹೌದು, ಅದುಅವಳ ತಪ್ಪಲ್ಲ,ಐದು ವರ್ಷ ಯಾರು ಕಾಯುತ್ತಾರೆ. ..?ಸಹಜವಾಗಿಯೇ ಇನ್ನೊಬ್ಬನನ್ನು ಪ್ರೀತಿಸುವುದು ಅನಿವಾರ್ಯವಾಗಿರಬಹುದು ಅಂತ ಸಮಾಧಾನ ಪಟ್ಟ.
ಇವತ್ತಿಗೆ ತಾನು ಸತ್ತು ಹದಿಮೂರು ದಿನಗಳಾಗಿವೆಯೋ!. ತಾನು ಸತ್ತಿರುವುದನ್ನು ಈ ಜನ ಒಪ್ಪಿಕೊಂಡೇ ವೈಕುಂಠಸಮಾರಾಧನೆಯ ಊಟಕ್ಕೆ ಬರುತ್ತಿದ್ದಾರೆಯೋ?
ಹೌದು. ತನ್ನನ್ನು ಇದೇ ಜನಗಳು ಹೊತ್ತುಕೊಂಡು ಸುಟ್ಟು ಬಿಟ್ಟಿದ್ದರು. ಆದರೂ ತಾನಿನ್ನೂ ಜೀವಂತವಾಗಿದ್ದೇನಲ್ಲ! ಹೇಗೆ ಎದ್ದು ಬಂದೆ...? ತನ್ನಲ್ಲೇ ಆದಿತ್ಯ ಪ್ರಶ್ನಿಸಿಕೊಳ್ಳಲು ಶುರು ಮಾಡಿದ. ಆದರೆ, ಉತ್ತರ ಸಿಗದ ಪ್ರಶ್ನೆಗಳು. ಯಾರಲ್ಲಿ ಕೇಳಬೇಕು........?
ಆದಿತ್ಯ.
ಐದು ವರ್ಷದ ನಂತರ ಮತ್ತೆ ಊರಿಗೆ ಬಂದಿದ್ದ. ತಾನು ಗಟ್ಟಿ ನಿರ್ಧಾರಕ್ಕೆ ಬರುವ ತನಕ ಯಾರಲ್ಲೂ ಮಾತಾಡಬಾರದೆಂದು ನಿಶ್ಚಯಿಸಿದ್ದ. ಐದು ವರ್ಷದಲ್ಲಿ ಏನು ಮಾಡಿದೆ ಎನ್ನುವುದಕ್ಕೆ ಅವನಲ್ಲಿ ಉತ್ತರವಿರಲಿಲ್ಲ.
ಅಪ್ಪ, ಅಮ್ಮ, ತಮ್ಮ... ಎಲ್ಲರೂ ವಿಚಾರಿಸಿದರು. "ಆದಿತ್ಯ, ಈ ಐದು ವರ್ಷ ಎಲ್ಲಿದ್ದೆ? ಏನು ಮಾಡುತ್ತಿದ್ದಿ ಇಷ್ಟು ಸಮಯ?"
ಯಾರಿಗೂ ಉತ್ತರಿಸಲಿಲ್ಲ ಆದಿತ್ಯ. ಊಟಕ್ಕೂ ಏಳಲಿಲ್ಲ. ಈ ಪ್ರಶ್ನೆಗಳನ್ನು ಕೇಳಿ ಹಸಿವು ಮಾಯವಾಗಿತ್ತು. ಕಣ್ಣು ಮುಚ್ಚಿ ಮಲಗಿದವ ಏನನ್ನೋ ಚರ್ಚಿಸುತ್ತಿದ್ದ.
ಮನೆಯವರಿಗೆ ಗಾಬರಿಯಾಯಿತು. ಸುತ್ತುಮುತ್ತಲಿನ ಜನರನ್ನು ಕರೆದರು. 'ನೋಡಿ, ಇವನು ಕಣ್ಣು ಮುಚ್ಚಿದ್ದಾನೆ.' ಆದರೂ ಆದಿತ್ಯ ಕಣ್ಣು ತೆರೆದು ಯಾರನ್ನೂ ನೋಡಲಿಲ್ಲ.ಬಂದ ಜನಗಳೂ ಸುಮ್ಮನಿರಲಿಲ್ಲ.
“ಸೂಳೇ ಮಗ ಹೇಳದೆ ಕೇಳದೆ ಓಡಿದ್ದ. ಇವನು ಇದ್ದರೇನು? ಸತ್ತರೇನು...?"
ಬೇಕಷ್ಟು ಬೈಯ್ದರು. ನಂತರ. 'ಸತ್ತಿದ್ದಾನೆ' ಅಂತ ತೀರ್ಪು ಕೊಟ್ಟರು. ಸರಿ, ಸತ್ತವನನ್ನು ಎಲ್ಲರೂ ಸೇರಿ ಸುಟ್ಟು ಬಿಟ್ಟರು. ಧಗಧಗಿಸುವ ಬೆಂಕಿಯ
ಜ್ವಾಲೆಗಳು...
"ಅಯ್ಯೋ, ಈ ಜನಗಳು ಸುಮ್ಮನಿರಲೂ ಬಿಡುವುದಿಲ್ಲವಲ್ಲ?" ಆದಿತ್ಯ
ನಡೆಯುತ್ತಾ ಕಿರುಚಿದ. ಯಾರೂ ಉತ್ತರಿಸಲಿಲ್ಲ.
ಎದುರು ಕಂಡದ್ದು ರಸ್ತೆ. ಪ್ರಶ್ನೆಯನ್ನು ರಸ್ತೆಗೇ ಹಾಕಿದ. ಯಾಕೆ...?
ಈ ರಸ್ತೆ ಬಹಳ ಚಿರಪರಿಚಿತ ರಸ್ತೆ. ಈ ರಸ್ತೆಯಲ್ಲೇ ಬದುಕಿನ ವಿಸ್ಮಯಗಳನ್ನು ಆದಿತ್ಯ ಕಲಿತುಕೊಂಡವ, ನೋಡುತ್ತಾ ನೋಡುತ್ತಾ ಬೆಳೆದವ.....
ಐದು ವರ್ಷಗಳ ಹಿಂದೆ-
ಊರು ಬಿಟ್ಟಾಗಲೇ ಈ ರಸ್ತೆ ಬಹಳ ಪ್ರಸಿದ್ದಿ ಪಡೆದಿತ್ತು.
ಕಪಟ ರಾಜಕಾರಣಿಗಳನ್ನು ಹೊತ್ತ ವಾಹನಗಳನ್ನು ಪೊಳ್ಳು ಭರವಸೆಯ ಭಾಷಣಕ್ಕಾಗಿ ಕುಗ್ರಾಮದತ್ತ ದಾಟಿಸಿದ ಈ ರಸ್ತೆ !
ಲಾಟೀ ಚಾರ್ಜ್‌ಗೆ ಹೊರಟ ಪೊಲೀಸ್ ವ್ಯಾನುಗಳನ್ನು ದಾಕ್ಷಿಣ್ಯ ಇಲ್ಲದೆ
ನಿರಪರಾಧಿಗಳತ್ತ ಕಳುಹಿಸಿದ ಈ ರಸ್ತೆ !
ಯಾವುದೋ ಹುಡುಗಿಯನ್ನು ಅತ್ಯಾಚಾರಕ್ಕೆ ಕೊಂಡೊಯ್ದಂತಹ ಯುವಕರ ಹೆಜ್ಜೆಗಳನ್ನು ನೋಡಿ, ಗಹಗಹಿಸಿ ನಕ್ಕ ಈ ರಸ್ತೆ.....
ಆದಿತ್ಯ ರಸ್ತೆಯ ಮೇಲೆ ಥೂ ಎಂದು ಉಗುಳಿದ. ಮ.ಗಾ.ರಸ್ತೆ ನಾಮಫಲಕ ಗಾಳಿಯ ಹೊಡೆತಕ್ಕೆ ಕೆಳಗೆ ಬಿತ್ತು.
ಆದಿತ್ಯನ ಮನೆಯನ್ನು ವಿಚಾರಿಸುತ್ತಾ ಮತ್ತೆ ನೆಂಟರ ಗುಂಪೊಂದು ಊಟಕ್ಕಾಗಿ ಹೋಗುತ್ತಿರುವುದನ್ನು ಗಮನಿಸಿದ.ಇನ್ನೊಮ್ಮೆ ಮನೆಯ ನೆನಪಾಯ್ತು.ಈಗ ಅಮ್ಮ ನೆನಪಾದಳು.
ಅಮ್ಮನ ಕುರಿತು ತೀವ್ರವಾಗಿ ಯೋಚಿಸುತ್ತಾನೆ ಆದಿತ್ಯ. ಮನೆ ಬಿಟ್ಟು ಐದು ವರ್ಷಗಳಾದರೂ ಮನೆಗೆ ಕಾಗದ ಬರೆಯಲೇ ಇಲ್ಲ. ಆ ಸಲ ಕೆಮ್ಮು ವಿಪರೀತವಾದಾಗ ಅಮ್ಮನ ನೆನಪಾಗಿತ್ತು. ಅಮ್ಮ ಅಪ್ಪನನ್ನು ನೋಡಬೇಕು ಅಂತ ಆಸೆಯಾಗಿತ್ತು. ಅಂದು-ಉಗುಳಿದವ ನೋಡಿದ್ದ-ಎಲ್ಲಾದರೂ ರಕ್ತ ಬಂದಿದೆಯೋ ಅಂತ. ಇಲ್ಲ, ರಕ್ತ ಕಾಣಲಿಲ್ಲ. ಸ್ವಲ್ಪ ಧೈರ್ಯ ಪಟ್ಟಿದ್ದ. ಅಮ್ಮನನ್ನು ಕಾಣಬೇಕೆನ್ನುವ ಆಸೆಯನ್ನು ಮುಂದೂಡಿದ ಪೂರ್ತಿ ಐದು ವರ್ಷದ ತನಕ.
ಅಮ್ಮನ ಬಗ್ಗೆ ಅಸಡ್ಡೆಯೇ....? ಪ್ರಶ್ನೆ ತೀವ್ರವಾಗಿ ಕಾಡಿತ್ತು. ಸೌಖ್ಯವಿಲ್ಲದಿದ್ದಾಗ ಮಾತ್ರ ಅಮ್ಮನ ನೆನಪು ಯಾಕೆ ? ಐದು ವರ್ಷದ ಹಿಂದೆ, ಊರು ಬಿಟ್ಟಾಗ ತೀವ್ರವಾಗಿ ಅಮ್ಮನ ಬಗ್ಗೆ ಸಿಟ್ಟು ಬಂದಿತ್ತು. ಆದಿತ್ಯ ಮತ್ತೆ ಹಿಂದಕ್ಕೆ ಹೋದ. ಐಸ್ ಕ್ಯಾಂಡಿ ತಿನ್ನುವ ಪ್ರಾಯಕ್ಕೆ.
"ನೀವು ಇನ್ನೂ ಜಗಳ ಮಾಡಿಕೊಂಡರೆ ನಾನು ಬಾವಿಗೆ ಹಾರುತ್ತೇನೆ." ಅಂತ ಅಮ್ಮ ಬಾವಿಕಟ್ಟೆಯತ್ತ ಓಡುತ್ತಿದ್ದುದು. ಆಗ ತಮ್ಮ ಮತ್ತು ತಾನು "ಬೇಡ ಬೇಡ ಇನ್ನು ಜಗಳ ಮಾಡುವುದಿಲ್ಲ" ಅಂತ ಅಮ್ಮನ ಹಿಂದೆಯೇ ಬಂದು ಸೀರೆ ಗಟ್ಟಿಯಾಗಿ ಹಿಡಿಯುತ್ತಿದ್ದುದು....
'ಆತ್ಮಹತ್ಯೆ'ಅಂದರೆ ಅಷ್ಟು ಹೆದರಿಕೆಯೇ ತನಗೆ? ಅದರೆ 'ನಾನು ಬಾವಿಗೆ ಹಾರುತ್ತೇನೆ' ಅಂತ ಅಮ್ಮ ಹೆದರಿಸಲು ಮಾತ್ರ ಹೇಳುತ್ತಿದ್ದುದು ಅಂತ ಆದಿತ್ಯನಿಗೆ ಸ್ವಲ್ಪ ಸಮಯದಲ್ಲಿಯೇ ತಿಳಿಯಲು ತಡವಾಗಲಿಲ್ಲ.
ಅದು- ಕುಟುಂಬದ ಹಿರಿಯರ ಮನೆಯಲ್ಲೊಮ್ಮೆ ದೈವಕ್ಕೆ ನಡೆದ ಕೋಲ ಸಮಾರಾಧನೆಯ ಘಟನೆಯೊಂದರಿಂದ. ಆದಿತ್ಯನೂ ಅಲ್ಲಿಗೆ ಅಮ್ಮನ ಜೊತೆ ಬಂದಿದ್ದ. ಅಂದು ಮನೆಯ ಹಿರಿಯರೊಬ್ಬರಿಗೂ, ರಾತ್ರಿ ವೇಷ ಹಾಕುವ ನಲಿಕೆಯವನಿಗೂ ಸಾಯಂಕಾಲ ಏನೋ ಒಂದು ವಿಷಯದಲ್ಲಿ ಗಲಾಟೆಯಾಯ್ತು. ಗಲಾಟೆ ಶಾಂತವಾಗಬೇಕಾದರೆ ಎಲ್ಲರಿಗೂ ಸಾಕು ಸಾಕಾಯ್ತು.
ಇದು ಇಷ್ಟಕ್ಕೇ ಮುಗಿಯಲಿಲ್ಲ.
ಆ ರಾತ್ರಿ-
ವೇಷ ಹಾಕಿದ ನಲಿಕೆಯವ, ಗಗ್ಗರ ಕಟ್ಟಿದ ನಂತರ ಸ್ವಲ್ಪ ಹೊತ್ತು ಕಳೆದು, ಸಾಯಂಕಾಲದ ಗಲಾಟೆಯನ್ನು ಮತ್ತೆ ಮುಂದುವರಿಸುವ ಇಚ್ಛೆಯಿಂದ 'ತಾನು ಆಹಾರ ತೆಗೆದು ಕೊಳ್ಳುವುದಿಲ್ಲ' ಅಂತ ಪಟ್ಟು ಹಿಡಿದು ಕೂತ. ಎಲ್ಲರಿಗೂ ತಲೆಬಿಸಿ. ಸಮಾಧಾನ ಪಡಿಸಲು ಪ್ರಯತ್ನಿಸಿದ್ದಂತೆ ಮತ್ತೆ ಆ ಹಿರಿಯರು ಹತ್ತಿರ ಬಂದು- "ಇಲ್ಲ, ಇಲ್ಲ. ಇವನು ಬೇಕೆಂದೇ ಹಟ ಮಾಡುತ್ತಿದ್ದಾನೆ. ಇನ್ನು ಮುಂದೆ ಕೋಲ ಸಮಾರಾಧನೆ ಮಾಡುವುದೇ ಬೇಡ ,ಬಿಡ್ರೋ ಅವನನ್ನು. ತಿನ್ನದಿದ್ದರೆ ಅಷ್ಟೇ ಹೋದ. ಯಾರೂ ಒತ್ತಾಯ ಮಾಡಬೇಡಿ." ಎಂದಾಗ, ಮತ್ತೆ ನಲಿಕೆಯವನಿಗೆ ಸಿಟ್ಟು ಬಂದು ದೂರದ ಬಾವಿಕಟ್ಟೆಯತ್ತ (ತಾನು ನೀರಿಗೆ ಹಾರುತ್ತೇನೆ ಎಂದಲ್ಲವೇ?) ಕಿರುಚುತ್ತಾ ಓಡಿದ್ದು, ಕೂಡಲೇ ಅವನ ಹೆಂಡತಿ ಮತ್ತು ಸಹಾಯಕ ಓಡಿದವನನ್ನು ಹಿಡಿದು ವಾಪಸ್ ಕರೆತಂದದ್ದು........ ಈ ಎಲ್ಲ ಸಂಗತಿಗಳು ನಡೆಯುತ್ತಿದ್ದಾಗ-ಚಾವಡಿಯಲ್ಲಿ ಕೂತಿದ್ದ ಆದಿತ್ಯ ತುಂಬಾ ಹೆದರಿಕೊಂಡಿದ್ದ. ಮುಂದೇನಾಗುತ್ತದೋ ಅಂತ ಎಲ್ಲರಿಗೂ ಭಯ. ಆಗ ಆ ಹಿರಿಯರು ಮತ್ತೆ ಗಟ್ಟಿಯಾಗಿ "ಇದೆಲ್ಲ ನಾಟಕ ಮಾರಾಯ್ರೆ, ಅವನು ಬಾವಿಗೆ ಹಾರುವುದಿಲ್ಲ. ನಮ್ಮನ್ನು ಹೆದರಿಸಲು ಈ ನಾಟಕ ಅಷ್ಟೇ. ಎಂತಹ ದೈವವೂ ಅವನ ಮೈಮೇಲೆ ಬಂದಿಲ್ಲ. ನನ್ನ ಮೇಲಿನ ಸಿಟ್ಟಲ್ಲಿ ಕುಣಿಯುತ್ತಿದ್ದಾನೆ...."
ಆದಿತ್ಯ ತಿಳಿದುಕೊಂಡ-ಅಮ್ಮ ಕೂಡಾ ಹೀಗೆಯೇ ಹೆದರಿಸಲು ಮಾತ್ರ 'ಬಾವಿಗೆ ಹಾರುತ್ತೇನೆ' ಅಂತ ಹೇಳುವುದಲ್ಲವೇ. ಆಮೇಲೆ ಅಮ್ಮನ ಮೇಲೂ ನಂಬಿಕೆ ಕಮ್ಮಿಯಾಗುತ್ತಾ ಬಂತಲ್ಲವೇ? ಸಂಬಂಧಗಳಿಗೆ ಅರ್ಥ ಹುಡುಕಲು ಅಂದಿನಿಂದಲೇ ಪ್ರಯತ್ನಿಸಿದ. ಅಮ್ಮ ಯಾಕೆ ನಮ್ಮನ್ನು ಹೆದರಿಸುವುದು ........?
ಸಿಗರೇಟು ಎಳೆಯುವ ಮನಸ್ಸಾಯ್ತು. ಯಾರಲ್ಲಿ ಕೇಳಲಿ.....? ಅಂಗಡಿಗೆ ಹೋದರೆ ತಾನು ಕಾಣುವುದಿಲ್ಲ. ಸ್ವರವಾದರೂ ಕೇಳಬಹುದೇನೋ ಅಂದರೆ ಅದೂ ಇಲ್ಲವಲ್ಲ..... ಈಗಾಗಲೇ ಮನೆಗೆ ಹೋಗಿ ಬಂದದ್ದರಿಂದ ಇದು ಸ್ಪಷ್ಟವಾಗಿದೆ. ಬೇಡ 'ಪ್ರೇತ ಬಂತು' ಅಂತ ಅಂಗಡಿಯವ ಬೊಬ್ಬಿಡಬಹುದು.
ಆದಿತ್ಯ ಮತ್ತೆ ಮುಂದುವರಿದ. ಎದುರು ಹಣ್ಣಿನ ಬುಟ್ಟಿಯೊಂದನ್ನು ಹೊತ್ತುಕೊಂಡವನೊಬ್ಬ ಬರುತ್ತಿದ್ದ. ಹತ್ತಿರ ಬರುತ್ತಿದ್ದಂತೆ ಆದಿತ್ಯ ಒಂದು ಹಣ್ಣನ್ನು ಮೆಲ್ಲನೆ ತೆಗೆದು ಬಿಟ್ಟ.ಹಣ್ಣನ್ನು ಮೇಲೆ ಕೆಳಗೆ ತಿರುಗಿಸಿದ.
ಹರಿದ ಚಡ್ಡಿಯ ಮಕ್ಕಳು ಎಲ್ಲಿಂದಲೋ ನೆರೆದರು. "ಏ, ಹಣ್ಣು ಗಾಳಿಯಲ್ಲಿ ತಿರುಗುತ್ತಿದೆ" ಎಂದು ಬೊಬ್ಬಿಟ್ಟರು.
ಆದಿತ್ಯ ಹಣ್ಣನ್ನು ದೂರ ಎಸೆದ.
"ವಿಚಿತ್ರ ನೋಡಿರಿ, ವಿಚಿತ್ರ ಅನ್ನುತ್ತಾ ಮಕ್ಕಳು ಹಣ್ಣಿನ ಹಿಂದೆ ಓಡಿದರು.
ಆದಿತ್ಯ, ಉಸ್ಸಪ್ಪಾ...... ಅನ್ನುತ್ತಾ ಒಂದು ಕಡೆ ಕೂತ. ಈಗಲೂ ಈ ಜನಗಳಂತೆ ತನಗೂ ಕುತೂಹಲಗಳು ಯಾಕೆ ಏಳುತ್ತಿವೆ...? ತನ್ನನ್ನು ಸುಟ್ಟು ಬಿಟ್ಟಿದ್ದು ನಿಜ. ಹೇಗೆ ಇನ್ನೂ ತಿರುಗಾಡುತ್ತಿದ್ದೇನೆ? ಐದು ವರ್ಷದ ಮೇಲೆ ಮತ್ತೆ
ಬಂದದ್ದು ತಪ್ಪಾಯ್ತೇ......? ಐದು ವರ್ಷ ಊರು ಬಿಟ್ಟದ್ದು ಯಾರಿಗಾಗಿ....? ಆದಿತ್ಯ ತರ್ಕಿಸಿಕೊಂಡ.
ತನ್ನ ಮನೆಯವರಿಗಾಗಿ ಅಲ್ಲವೇ.....? ಯಾಕೆ.....? ಎಲ್ಲಾ ನೆನಪು ಮತ್ತೆ ಬರುತ್ತಿದೆ....
ಅಪ್ಪ-ಯಾವುದೋ ಶಾಂತಿಹೋಮಕ್ಕೆ ತೆರಳಿ, 'ಎಳ್ಳು' ಕಟ್ಟನ್ನು ದಾನ ಹಿಡಿದು ಮನೆಗೆ ಬಂದ ದಿನ- "ಶನಿಕಾಟ ನೋಡಿ. ಎಳ್ಳು ನಿಮಗೇ ಸಿಗಬೇಕಿತ್ತೋ.....? ಜಪ ಇಲ್ಲ, ಏನೂ ಇಲ್ಲ. ಗ್ರಹಚಾರ ಶುರುವಾಗಿದೆ. ಇನ್ನು ಅನುಭವಿಸುವ....." ಅಮ್ಮನ ಸಿಟ್ಟು,
ಕಾಕತಾಳೀಯ ಅಂದರೆ ಅಮ್ಮ ನಂಬಲಿಲ್ಲ. ಒಂದೇ ವಾರದಲ್ಲಿ ಅಪ್ಪನನ್ನು ಕೆಲಸದಿಂದ ತೆಗೆದು ಹಾಕಿದರು. ಯಾಕೆ? ಉತ್ತರ ಸ್ವಷ್ಟವಾಗುವುದಿಲ್ಲ. "ಎಳ್ಳು" ತನ್ನ ಪ್ರಭಾವ ತೋರಿಸಿತು ಅಂದಿದ್ದಳು ಅಮ್ಮ.
ಆದಿತ್ಯ ಆ ರಾತ್ರಿ ಯಾರಿಗೂ ಹೇಳದೆ ಹೊರಟೇ ಬಿಟ್ಟ. ಎಲ್ಲರೂ ತಿಳಕೊಂಡಿದ್ದು ಅದಿತ್ಯ ಕೆಲಸ ಹುಡುಕುವುದಕ್ಕೋಸ್ಕರ ಊರು ಬಿಟ್ಟ ಎಂದು. 'ಎಲ್ಲಿಗೆ ಹೋಗುತ್ತಿ.......?' ಯಾರೂ ವಿಚಾರಿಸಲಿಲ್ಲ. ವಿಚಾರಿಸುವ ಮೊದಲೇ ಎದ್ದು ಹೋಗಿದ್ದ. ದೂರ, ಬಹುದೂರ ಐದು ವರ್ಷ.
ಕೂತವ ಎದ್ದ. ಮತ್ತೆ ಮುಂದೆ ನಡೆದ.
ಎದುರಿಗೆ ಕಂಡಿತು ದೊಡ್ಡದಾದ ಲಾಡ್ಜ್. ಕೋಣೆಯೊಂದು ಇವನಿಗೆ ಸ್ಪಷ್ಟವಾಗಿ ಗೋಚರವಾಯ್ತು. ಆದಿತ್ಯ ಅದನ್ನೇ ನೋಡಿದ. ನೋಡುತ್ತಾ ನಿಂತ.
ಅದು- ಶಾಸ್ತ್ರಿಗಳು 'ಭವಿಷ್ಯ' ಹೇಳುವ ಕೋಣೆ. ಇವನ ನೇರಕ್ಕೆ ಕಾಣುತ್ತಿತ್ತು- ದೊಡ್ಡದಾದ ಶಾಸ್ತ್ರಿಗಳ ನಾಮಫಲಕ.
ಮೊನ್ನೆ ಮೊನ್ನೆ ಊರಿಗೆ ಬಂದಾಗ-
ಇದೇ ಲಾಡ್ಜ್‌ನಲ್ಲಿ ಮನೆಗೆ ಕಾಲಿಡುವುದಕ್ಕಿಂತ ಮೊದಲು ಒಂದು ರಾತ್ರಿ ರೂಮು ಮಾಡಿಕೊಂಡಿದ್ದ. ಮರುದಿನ ಬೆಳಿಗ್ಗೆ ಇವನು ಸ್ನಾನ ಮಾಡಿ, ಕೆಳಗೆ ಕಾಫಿ ಕುಡಿಯಲು ಹೋದಾಗ ಈ ಶಾಸ್ತ್ರಿಗಳು ಇವನನ್ನೇ ನೋಡುತ್ತಿದ್ದರು. ಆಂಜನೇಯನ ಪ್ರಸಾದ ಪಡೆದಿರುವೆನೆಂದು ಅವರು ಬೋರ್ಡಲ್ಲಿ ಬರೆಸಿಕೊಂಡಿದ್ದರು.
ಆಂಜನೇಯ!
ಹೀಗೆಂದ ಕೂಡಲೇ ಆದಿತ್ಯನಿಗೆ ಪ್ರಸನ್ನರ 'ಮಹಿಮಾಪುರ' ನಾಟಕ ನೆನಪಾಯಿತು. ಎಣ್ಣೆ ಕದಿಯುವ ಅರ್ಚಕನ ದೂರನ್ನು ಮೊಕ್ತೇಸರನಿಗೆ ಹೇಳಿ ಹೇಳಿ ಆಂಜನೇಯನಿಗೆ ಸಾಕಾಗಿ ಹೋಗಿತ್ತು. ಆದರೂ ಆಂಜನೇಯ ಗೆಲ್ಲಲೇ ಇಲ್ಲ. ಹಾಗೆಯೇ ಇರಬಹುದಲ್ಲವೇ......? ಆಂಜನೇಯ ಹೇಳಿದ್ದನ್ನು(?) ಈ ಶಾಸ್ತ್ರಿಗಳು ತಿರುಚಿ ಹೇಳುತ್ತಿದ್ದಾರೋ....?ಅಥವಾ....!
ಆದಿತ್ಯನಿಗೆ ಈವಾಗ ತನ್ನ ಬಾಲ್ಯದ ನೆನಪಾಯ್ತು.
ಇಂತದ್ದೇ ಲಾಡ್ಜ್ ಒಂದರಲ್ಲಿ ರೂಮು ಮಾಡಿಕೊಂಡಿದ್ದ ಒಬ್ಬರು ಭವಿಷ್ಯ ಹೇಳುವ ಶಾಸ್ತ್ರಿಗಳ ಬಳಿಗೆ ಆದಿತ್ಯ ಅಮ್ಮನ ಜೊತೆ ಒಮ್ಮೆ ಹೋಗಿದ್ದುದು
ನೆನಪಾಯ್ತು, ಈತನ ಜಾತಕ ಪುಸ್ತಕ ಶಾಸ್ತ್ರಿಗಳಿಗೆ ಕೊಟ್ಟು ಅಮ್ಮ ಭವಿಷ್ಯವನ್ನು ವಿಚಾರಿಸಿದ್ದಳು. ಅಮ್ಮನಿಗೆ ತೃಪ್ತಿಯಾಗುವ ಹಾಗೆ ಶಾಸ್ತ್ರಿಗಳು ಮಾತಾಡಿದ್ದರು. ಹೌದು, ಅದೆಲ್ಲ ಸುಳ್ಳಾಗಿದೆ. ಯಾಕೆ ಹಾಗೆ? ಅಮ್ಮ ಪ್ರಶ್ನಿಸಿಕೊಳ್ಳುವಳೇ...?
ಮತ್ತೆ ವಾಸ್ತವದ ಕುರಿತು ಚಿಂತಿಸಿದ. ಸುಟ್ಟು ಬಿಟ್ಟರೂ ಇನ್ನೂ ಹೇಗೆ ಜೀವಂತವಾಗಿದ್ದೇನೆ? ಯಾಕೆ ತಾನು ಯಾರಿಗೂ ಕಾಣಿಸುತ್ತಿಲ್ಲ? ಯಾರಲ್ಲಿ ವಿಚಾರಿಸಲಿ ತಾನು?
ಇಲ್ಲ, ಉತ್ತರ ಸಿಗುತ್ತಿಲ್ಲ.
ನಡೆಯುತ್ತಾ ರಸ್ತೆಯ ಈ ತುದಿಯಲ್ಲಿರುವ ಸರ್ಕಲ್ ಕಡೆ ಬಂದ. ನಾಲೈದು ಹುಡುಗರು ರೇಡಿಯೋ ಕಿವಿಗೆ ತಗಲಿಸಿ ಕ್ರಿಕೆಟ್ ಕಾಮೆಂಟ್ರಿ ಕೇಳುತ್ತಾ ಉತ್ಸಾಹದಿಂದ ಕುಣಿಯುತ್ತಾ ಹೋಗುತ್ತಿದ್ದರು.
ಮೊನ್ನೆ ಮೊನ್ನೆಯ ತನಕ ತಾನೂ ಟಿವಿಯಲ್ಲಿ ಕ್ರಿಕೆಟ್ ನೋಡುತ್ತಿದ್ದೆನಲ್ಲ! ಆದಿತ್ಯ ಅ ದಿನಗಳನ್ನು ನೆನಪಿಸಿಕೊಂಡ. ಐದು ವರ್ಷ ಊರು ಬಿಟ್ಟ ನಂತರದ ಸಂಗತಿಗಳು.........
ಟಿವಿ ನೋಡಲು ಹೋಗುತ್ತಿದ್ದ ಆ ಮನೆ... ಅಲ್ಲಿಯ ಹುಡುಗಿಯನ್ನು ಆಸೆ ಪಡುತ್ತಿದ್ದ ದಿನಗಳು... ಹೆಸರುಗೊತ್ತಿಲ್ಲ. ಅವರ ಮಗಳು ಮುದ್ದಾಗಿದ್ದಳು. ನೀಲಿ ಪ್ಯಾಂಟ್ ಹಾಕಿದ ದಿನ ತುಂಬ ಚೆಂದ ಕಾಣುತ್ತಿದ್ದಳು. ಅಲ್ಲಿ ಕ್ರಿಕೆಟ್ ಮ್ಯಾಚ್‌ಗಳನ್ನು ಆಗಾಗ ನೋಡುತ್ತಿದ್ದುದು... ಒಮ್ಮೆ ಕಸ ಗುಡಿಸುತ್ತಿರುವಾಗ ಆಕೆ ತನ್ನ ಮೇಲೆ ಜಾರಿ ಬಿದ್ದದ್ದು... ಕೆನ್ನೆ ಎಷ್ಟು ತಣ್ಣಗಿತ್ತು! ಊರಿನ ಗೆಳತಿ ರೇಖಾಳ ನೆನಪೇ ಯಾಕೋ ಆಗಲಿಲ್ಲ. ಒಂದು ದಿನ ಈ ಹುಡುಗಿಗೆ ಮದುವೆ ಅಂದಾಗ, ಟಿವಿ ನೋಡುತ್ತಿದ್ದುದನ್ನು ನಿಲ್ಲಿಸಿದ್ದು... ಹೌದು. ಸ್ವಲ್ಪ ದಿನ ನೋವಿತ್ತು. ದಾರಿಯಲ್ಲಿ ಅವಳ ಅಮ್ಮ ಒಮ್ಮೆ ಹೇಳಿದ್ದರು. “ಟಿವಿ ನೋಡಲು ಯಾಕೆ ಬರುವುದಿಲ್ಲ...?"
ಯಾಕೆ? ಯಾಕೆ? ಆ ಹುಡುಗಿಯ ನೆನಪಿನಿಂದ ಆದಿತ್ಯ ದೂರ ಹೋಗಲು ನೋಡಿದ........
ಆ ದಿನ-
ಗೆಳೆಯ ಸತ್ಯನಾರಾಯಣನ ಜೊತೆ ಕಾಫಿ ಕುಡಿಯುತ್ತಿದ್ದಾಗ ಆದಿತ್ಯ ಹೇಳಿದ್ದ. "ಸತ್ಯ. ನನ್ನಂತವನಿಗೆ ಮದುವೆಯಾಗಲು ಸಾಧ್ಯವೇ ಇಲ್ಲ ಅಂದರೆ ನಂಬುವಿಯಾ...? ಎರಡು ಹುಡುಗಿಯರು ಈತನಕ ಬಂದಿದ್ದರು. ಎಲ್ಲಾ ಮರೆತು ಬಿಟ್ಟೆ..."
ಸತ್ಯ ಹೇಳಿದ. “ಮರೆಯುವುದು ನಿಜವೇ? ಯಾಕೆ? ಮದುವೆಯಾದರೆ ಮಾತ್ರ ಬದುಕಿನಲ್ಲಿ ನೀನು ಹೆಚ್ಚು ಗಟ್ಟಿಯಾಗುವುದು. ನಿನ್ನಂತವನಿಗೆ ಇಷ್ಟೇ ಸಾಕು. ಹೆಣ್ಣು ಇಲ್ಲದೆ ಬದುಕುವುದು ನಿನ್ನ ಭ್ರಮೆ...!"
“ಇಲ್ಲ. ನನಗೆ ಹೆಂಡತಿಯ ಸುಖಃದುಃಖ ವಿಚಾರಿಸುವಷ್ಟೂ ಸಮಯ ಸಿಗಲಾರದು. ನನಗಿನ್ನೂ ದೂರಕ್ಕೆ ಓಡಬೇಕೆನ್ನುವ ಆಸೆ. ಮದುವೆಯ ನಂತರ ಹೆಂಡತಿಯ ಜವಾಬ್ದಾರಿಯನ್ನು ಹೊರಲು ಈ ಓಟದಲ್ಲಿ ನನ್ನಂತವನಿಂದ ಸಾಧ್ಯವೇ ಆಗಲಾರದು.
ಅವಳ ಸುಖವನ್ನು ಲಕ್ಷ್ಯದಲ್ಲಿರಿಸಿಕೊಳ್ಳಲು ನಾನು ಅಸಹಾಯಕ. ಈ ಎಲ್ಲ ತೊಂದರೆಗಳ ನಡುವೆ 'ಮದುವೆ'ಎನ್ನುವ ಶಬ್ದಕ್ಕೆ ಏನು ಅರ್ಥ?"
ಆದಿತ್ಯನ ಮಾತಿಗೆ ಸತ್ಯ ಒಂದಷ್ಟು ನಕ್ಕ.
"ಸುಳ್ಳು. ನೀನೊಬ್ಬ ಸಂಪ್ರದಾಯವಾದಿ ತರಹ ಮಾತನಾಡಲು ಶುರು ಮಾಡಿದ್ದಿ. ಹೆಂಡತಿ ನಿನ್ನ ಗುಲಾಮಳು ಅನ್ನುವ ಹಟ ಇಟ್ಟುಕೊಂಡಂತೆ ಕಾಣುತ್ತದೆ. ಅವಳ ಜವಾಬ್ದಾರಿಯನ್ನು ನೀನೇ ವಹಿಸಿಕೊಳ್ಳುವುದು ಎಂಬ ಮಾತು ನಿನ್ನ ಭ್ರಮೆ. ಅದು ಪ್ರತಿಗಾಮೀ ನಿಲುವು. ಯಾಕೆ? ಅವಳಿಗೂ ಸ್ವಂತಿಕೆ ಎಂಬುದು ಇಲ್ಲವೇ...? ನಿನ್ನಷ್ಟೇ ಅವಳಿಗೂ ನಿನ್ನ ಬಗ್ಗೆ ಜವಾಬ್ದಾರಿ ಇರವುದೆಂಬ ಪ್ರಜ್ಞೆ ನಿನ್ನಲ್ಲಿರಬೇಕು...."
ಆದಿತ್ಯ ಕೊನೆಗೂ ಇದನ್ನು ಒಪ್ಪಲಿಲ್ಲ. ಮತ್ತೆ ಹೇಳಿದ. "ಇಲ್ಲ ಸತ್ಯ. ನಾನು ಯಾವ ಕ್ಷಣದಲ್ಲೂ ಮತ್ತೆ ಎಲ್ಲಿಗಾದರೂ ಓಡಿ ಹೋಗುವವ. ಇಂತವನಿಗೆ ಮದುವೆಯಾದರೂ ಯಾಕೆ? ಬದುಕನ್ನು ಸ್ವತಂತ್ರವಾಗಿ ಉಪಯೋಗಿಸಿಕೊಳ್ಳಲು ನೋಡುವ ಯುವಕ ನಾನು, ಸಮಾಜದ ಸಂಪ್ರದಾಯಗಳಿಗೆ ನನ್ನನ್ನು ನಾನು ಮಾರಿಕೊಳ್ಳಲಾರೆ....?
"ಹುಚ್ಚು ಹಿಡಿಯುವ ಲಕ್ಷಣ ಪ್ರಾರಂಭವಾಗಿದೆ. ಓಡು, ಓಡು.." ಅಂದ ಸತ್ಯ ಮತ್ತೆಂದೂ ಭೇಟಿಯಾದ ನೆನಪಾಗಲಿಲ್ಲ.
ಇದೀಗ ಸರ್ಕಲ್‌ನಲ್ಲಿ ನಿಂತುಕೊಂಡ ಆದಿತ್ಯನಿಗೆ ತಲೆಯೊಳಗೇ ವಾಹನಗಳು ಓಡುತ್ತಿರುವಂತಹ ಅನುಭವಗಳ ಸದ್ದು.
ನೋಡುತ್ತಾ ನಿಂತ ಸರ್ಕಲ್ ನ ಗೊಂದಲಗಳನ್ನು....
ರಸ್ತೆ ದಾಟುವ ಜನಗಳ ಗುಂಪು. ಸರ್ಕಲ್‌ನ ನಡುವೆ ಪೊಲೀಸ್ ನಿಂತುಕೊಂಡಿದ್ದಾನೆ. ಪೊಲೀಸ್ ಕೈ ಎತ್ತಿದ ತಕ್ಷಣ ವಾಹನಗಳು ನಿಂತು ಬಿಟ್ಟವು.ಜನರ ಗುಂಪು ರಸ್ತೆ ದಾಟಿತು.
ಆದಿತ್ಯ ಒಂದು ಬದಿಯಲ್ಲಿ ನಿಂತುಕೊಂಡ.ಸಾಯಂಕಾಲವಾಗುತ್ತಿದೆ. ವಿಪರೀತ ಜನ ಸಂಚಾರ. ಆದಿತ್ಯ ಜನರ ಗುಂಪು ಆ ಬದಿಯಿಂದ ಈ ಬದಿಗೆ ಬರುವುದನ್ನು ನೋಡುತ್ತಿದ್ದಾನೆ. ಯಾರದೂ ಈಗ ಪರಿಚಯವಿಲ್ಲ.
ಇನ್ನೇನು ಜನ ಎಲ್ಲಾ ದಾಟಿದರು ಅನ್ನುವಾಗ.-
ಹಿಂದಿನಿಂದ ಒಂದು ಕಪ್ಪು ಬಣ್ಣದ ನಾಯಿ ಮರಿಯೊಂದು ದಾಟಿ ಬಂದು, ಆಚೆ ಈಚೆ ನೋಡುತ್ತಾ, ಮೆಲ್ಲನೆ ಆದಿತ್ಯನ ಬಳಿ ನಿಂತು ಬಿಟ್ಟಿತು. ಆದಿತ್ಯ ಹೆದರಿದ. ಆಶ್ಚರ್ಯಪಟ್ಟ.
ಈ ನಾಯಿ ಮರಿಗೆ ತಾನು ಕಾಣುತ್ತಿರುವೆನೋ...? ಎಂದವ ಸ್ವಲ್ಪ ಆಚೆ ಹೋದ.
ನಾಯಿ ಮರಿಯೂ ಹಿಂಬಾಲಿಸಿ ಆದಿತ್ಯ ನಿಂತಲ್ಲೇ ಹತ್ತಿರ ಬಂದು ನಿಂತಿತು.
ಒದ್ದು ಬಿಡುವಷ್ಟು ಸಿಟ್ಟು ಬಂತು.
ಇಲ್ಲ, ಫಕ್ಕನೆ ಮತ್ತೆ ಮನೆಯ ನೆನಪು ಬಂತು. ಮನೆಯ ನಾಯಿ ನೆನಪಾಯ್ತು.
ನಾಯಿ! ತನಗೆ ಹೊಸ ಪ್ರಾಣಿಯೇನಲ್ಲ, ಹಲವು ವರ್ಷಗಳ ಹಿಂದಿನ ಸಂಗತಿಯನ್ನು ಕೆದಕುವಂತಾಯಿತು.
ಅಜ್ಜನ ಶ್ರಾದ್ಧದ ಒಂದು ದಿನ. ಪಿಂಡದ ಅನ್ನವನ್ನು ಅಪ್ಪ ಮನೆಯ ಅಂಗಳದಲ್ಲಿಟ್ಟ ಆ ದಿನ-
ಎಲೆಯಲ್ಲಿಟ್ಟ ಅನ್ನವನ್ನು ಮೊದಲು ಕಾಗೆಯೇ ತಿನ್ನಬೇಕು. ಆವಾಗ ಮಾತ್ರ ಪಿತೃಗಳಿಗೆ ತೃಪ್ತಿಯಂತೆ.
ಆದರೆ ಅಂದು-
ಕಾಗೆ ಬರುವುದಕ್ಕೆ ಮೊದಲೇ ಎಲ್ಲರೂ ನೋಡುತ್ತಿದ್ದಂತೆಯೇ ಇನ್ನೊಂದು ಬದಿಯಿಂದ ಓಡಿಬಂದ ಮನೆಯ ನಾಯಿ ಅನ್ನಕ್ಕೆ ಬಾಯಿ ಹಾಕಿತ್ತಲ್ಲ.
ಎಲ್ಲರಿಗೂ ಸಿಟ್ಟು, ಬಾಯಿ ಹಾಕಿದ ನಾಯಿಯನ್ನು ಸುಮ್ಮನೆ ಬಿಡದೆ ಹೊಡೆದೇ ಬಿಟ್ಟರು......
ಆದಿತ್ಯ ಆ ದಿನ ತನ್ನಲ್ಲೇ ಚಿಂತಿಸಿಕೊಂಡಿದ್ದ.
ಅದು ಅಜ್ಜನ ಪ್ರೀತಿಯ ನಾಯಿ. ಅಜ್ಜನ ಕೊನೆಗಾಲದಲ್ಲಿ ಆ ನಾಯಿಯೇ ಅವರಿಗೆ ಉಳಿದಿದ್ದ ಸ್ನೇಹಿತ. ಮನೆಯಲ್ಲಿ ಆವಾಗ ಯಾರೂ ಅಜ್ಜನ ಬಳಿ ಹೆಚ್ಚಾಗಿ ಸುಳಿಯುತ್ತಲೇ ಇರಲಿಲ್ಲ, ಮಾತಾಡಲು ಬಹಳ ಇಚ್ಛೆಪಡುತ್ತಿದ್ದ ಅಜ್ಜನ ಪುರಾಣಗಳನ್ನು. ಕಿರಿಕಿರಿಗಳನ್ನು ಯಾರೂ ಕೇಳಲು ತಯಾರಿದ್ದಿರಲಿಲ್ಲ. ಆವಾಗ ಅಜ್ಜ ಬಹಳ ಯಾತನೆ ಪಟ್ಟುಕೊಳ್ಳುತ್ತಿದ್ದರು. ಆ ಹೊತ್ತು ಆ ನಾಯಿಯೇ ಅವರ ದುಃಖವನ್ನು ಕಡಿಮೆ ಮಾಡುತ್ತಿದ್ದುದು. ಅದರ ಆಟಗಳನ್ನು ನೋಡುತ್ತಾ ತಮ್ಮ ನೋವನ್ನು ಮರೆಯುತ್ತಿದ್ದರು. ಇಂತಹ ನಾಯಿ, ಅಜ್ಜನ ಪ್ರೀತಿಯ ನಾಯಿ, ಅಜ್ಜನಿಗಿಟ್ಟ ಅನ್ನಕ್ಕೆ ಬಾಯಿ ಹಾಕಿದ್ದು ಏನು ತಪ್ಪು...?
ಆದಿತ್ಯನ ಪ್ರಶ್ನೆಗೆ ಯಾರಿಗೂ ಅಂದು ಉತ್ತರಿಸುವಷ್ಟು ಸಮಯವಿರಲಿಲ್ಲ.
ಅಷ್ಟೇ ಅಲ್ಲ, ಅಂದಿನಿಂದ ಮನೆಯಲ್ಲಿ ನಾಯಿ ಸಾಕುವುದನ್ನೂ ನಿಲ್ಲಿಸಿಬಿಟ್ಟರು. ಒಂದೊಂದೇ ನೆನಪುಗಳು ಈ ನಾಯಿಮರಿ ಕಂಡಾಗ...
ಈ ಕಪ್ಪು ನಾಯಿಮರಿ ತನ್ನನ್ನೇ ನೋಡುತ್ತಿರುವಂತೆ ಆದಿತ್ಯನಿಗೆ ಅನಿಸಿತು.
ಆದಿತ್ಯನ ಕಣ್ಣ ಮುಂದೆ ಅಜ್ಜನೇ ಬಂದಂತೆ ಕಾಣಿಸಿತು.
ಅಜ್ಜ ಏನೋ ಹೇಳುತ್ತಿರುವಂತೆ ಅನಿಸಿತು.
ಹೌದು. ತನ್ನಪ್ಪನೂ ಈಗ ಮುದುಕನಾಗುತ್ತಿದ್ದಾನೆ. ತಮ್ಮ ಸರಿಯಾಗಿ ನೋಡಿಕೊಳ್ಳುವ ಭರವಸೆಯಿಲ್ಲ. ಅಪ್ಪನಿಗೆ ಮತ್ತೆ ಅಜ್ಜನ ಸ್ಥಿತಿ, ಯಾತನೆಗಳು ಬರಬಹುದು. ಆಗ, ಅಪ್ಪ ಯಾರಲ್ಲಿ ಮಾತಾಡುವುದು..? ಸಾಕಿದ ನಾಯಿಯೂ ಮನೆಯಲ್ಲಿಲ್ಲ. ಯಾರೂ ಹತ್ತಿರ ಬರದಿದ್ದರೆ, ಅಪ್ಪ ಅಜ್ಜನಂತೆಯೇ ಅಳುತ್ತಾನೆ... ಆವಾಗ ಖುಶಿಕೊಡಲು 'ನಾಯಿ' ಇರಬೇಕು. ಇದರ ಆಟಗಳನ್ನು ನೋಡುತ್ತಾ ಅಪ್ಪ ನೋವು ಮರೆಯಬಹುದು. ಕತ್ತಲಾಗುತ್ತಿದೆ!
ಈ ನಾಯಿಮರಿಯನ್ನು ಮನೆಯಲ್ಲಿ ಬಿಟ್ಟು ಬರಲು ನಿರ್ಧರಿಸಿದ ಆದಿತ್ಯ, ನಾಯಿಮರಿಯನ್ನು ಎತ್ತಿಕೊಂಡ.
ಮ.ಗಾ. ರಸ್ತೆಯನ್ನು ಬಿಟ್ಟು, ಇನ್ನೊಂದು ರಸ್ತೆಯಲ್ಲಿ ನಾಯಿ ಮರಿಯ ಜೊತೆ ಮನೆಯತ್ತ ಹೆಜ್ಜೆ ಇಟ್ಟ. ರಸ್ತೆ ಒಂದಿಷ್ಟು ಶಾಂತವಿತ್ತು.
ಮನೆಯ ಹತ್ತಿರ ಬರುತ್ತಿದ್ದಂತೆ, ಆದಿತ್ಯ ನಾಯಿ ಮರಿಯನ್ನು ಗೇಟಿನ ಬಳಿ ಬಿಟ್ಟ. ಬಿಟ್ಟದ್ದೇ ತಡ ನಾಯಿಮರಿ ಓಡುತ್ತಾ ಓಡುತ್ತಾ ಅಂಗಳದಲ್ಲಿ ನಿಂತು ಬಿಟ್ಟಿತು.
ಅಪ್ಪ ಕಾಣಿಸಿದರು. ನೆಂಟರು ಕೆಲವರು ಹೊರಟು ಹೋಗಿದ್ದರು.
ಅಪ್ಪನಿಗೆ ನಾಯಿಮರಿ ಕಂಡಿತು.
ಮೊದಲು ಕಟ್ಟಿ ಹಾಕುತ್ತಿದ್ದ ಜಾಗಕ್ಕೇ ಹೋಗಿ ನಾಯಿಮರಿ ಕೂತಿತು.ಅಚ್ಚರಿ ಪಟ್ಟ.
ಆದಿತ್ಯ ಖುಷಿ ಪಟ್ಟ. ಕೊನೆಗೂ ಮನೆಗೆ ನಾಯಿಬಂತು ಎಂದು. ಅಷ್ಟೇ.....
ಆ ಕ್ಷಣವೇ ಒಂದೊಂದೇ ನೆನಪುಗಳು ಮಾಯವಾಗುತ್ತಿರುವ ಅನುಭವ ಆದಿತ್ಯನಿಗೆ ಬರಹತ್ತಿತ್ತು. ರೇಖಾ, ಸತ್ಯನಾರಾಯಣ, ನೀಲಿ ಪ್ಯಾಂಟಿನ ಹುಡುಗಿ,ಅಮ್ಮ, ಅಜ್ಜ...ಲಾಡ್ಡಿಂಗ್‌ನ ಶಾಸ್ತ್ರಿ... ನಲಿಕೆಯವ... ಯಾರದೂ ನೆನಪು ಬರುತ್ತಿಲ್ಲ. ತಾನು ಯಾರು..? ಯಾರ ಮಗ..? ಎಲ್ಲಿದ್ದೇನೆ....? ತನ್ನನ್ನೇ ಪ್ರಶ್ನಿಸಿಕೊಳ್ಳತೊಡಗಿದ. ಆದಿತ್ಯ
ಯೋಚಿಸುತ್ತಿದ್ದಂತೆಯೇ ಶರೀರವೆಲ್ಲ ಬೆಂಕಿಯಲ್ಲಿ ಉರಿಯುತ್ತಿತ್ತು.
----
(ಕನಾಟಕ ಸಾಹಿತ್ಯ ಅಕಾಡೆಮಿ 1988ರಲ್ಲಿ ಬಳ್ಳಾರಿಯಲ್ಲಿ ನಡೆಸಿದ ಒಂದು ವಾರದ ಕಥಾ ಕಮ್ಮಟದಲ್ಲಿ ನಿರ್ದೇಶಕರಾದ ಕುಂ. ವೀರಭದ್ರಪ್ಪನವರು ಬರೆಯಲೇ ಬೇಕೆಂದು ಅಭ್ಯರ್ಥಿಗಳಿಗೆ ಕೊಟ್ಟ ವಸ್ತುವಿನ ಮೇಲೆ (ನಾಯಿಮರಿ ರಸ್ತೆಯಲ್ಲಿ ಸಿಗ್ನಲ್ ದಾಟುತ್ತಿರುವ ಸಂದರ್ಭದ ದೃಶ್ಯ ಹಿಡಿದು ಕತೆ ಬರೆಯಬೇಕು) ಬರೆದ ಕತೆ.

Post a Comment