ಹೇಮಾ ಸದಾನಂದ ಅಮೀನ್ ಸಂಪಾದಕತ್ವದ "ಸೆರಗಿನಂಚಿನಲಿ ಮುಂಬಯಿ" ಕೃತಿ ಬಿಡುಗಡೆ
ಲೇಖಕರು ಇನ್ನೊಬ್ಬರ ಕೃತಿಗಳನ್ನು ಓದುವ ಮೂಲಕ ಕನ್ನಡ ಸಾಹಿತ್ಯವನ್ನು ಬೆಳೆಸೋಣ- ಶ್ರೀನಿವಾಸ ಜೋಕಟ್ಟೆ
ಮುಂಬಯಿ ಮಹಾನಗರ ಕ್ರಿಯಾಶೀಲ ಬರಹಗಾರರಿಗೆ ಅವಕಾಶಗಳನ್ನು ನೀಡುತ್ತಲೇ ಬಂದಿದೆ. ಕಳೆದೆರಡು ದಶಕಗಳಲ್ಲಿ ಮುಂಬಯಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕೃತಿಗಳು ಪ್ರಕಟವಾಗುತ್ತಿರುವುದು ಕಾಣುತ್ತೇವೆ.ಕನ್ನಡ ಸಣ್ಣಕಥಾಕ್ಷೇತ್ರಕ್ಕೆ ಮಾಸ್ತಿಯವರ ನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕತೆಗಾರ ಯಶವಂತ ಚಿತ್ತಾಲರು ಮುಂಬಯಿಯವರು. ಹಾಗಾಗಿ ಸಣ್ಣಕಥಾ ಕ್ಷೇತ್ರದಲ್ಲಿ ಮುಂಬಯಿಯ ಕತೆಗಾರರನ್ನು ಮರೆಯುವಂತಿಲ್ಲ. ಲೇಖಕರು ಇನ್ನೊಬ್ಬರ ಬರಹಗಳನ್ನು, ಇನ್ನೊಬ್ಬರ ಕೃತಿಗಳನ್ನು ಓದುವ, ಪ್ರತಿಕ್ರಿಯಿಸುವ ಅಭ್ಯಾಸ ಇರಿಸಬೇಕು.ಆ ಮೂಲಕ ಕನ್ನಡ ಸಾಹಿತ್ಯಲೋಕ ಇನ್ನಷ್ಟು ಬೆಳವಣಿಗೆ ಕಾಣಲು ಸಾಧ್ಯವಾಗಬಹುದು ಎಂದು ಪತ್ರಕರ್ತ ಸಾಹಿತಿ, ಗೋಕುಲವಾಣಿ ಮಾಸಿಕದ ಸಂಪಾದಕ ಶ್ರೀನಿವಾಸ ಜೋಕಟ್ಟೆ ಹೇಳಿದರು.
ಲೇಖಕಿ ಹೇಮಾ ಸದಾನಂದ ಅಮೀನ್ ಸಂಪಾದಕತ್ವದ ವಿವಿಧ ಲೇಖಕಿಯರು ಬರೆದ "ಸೆರಗಿನಂಚಿನಲಿ ಮುಂಬಯಿ" ಎನ್ನುವ ಕಥಾಸಂಕಲನವನ್ನು ಮಯೂರವರ್ಮ ಸಾಂಸ್ಕ್ರತಿಕ ಪ್ರತಿಷ್ಠಾನ ( ರಿ) ಮುಂಬಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜೂನ್ 2 , ರವಿವಾರದಂದು ಸಂಜೆಗೆ ಘಾಟ್ಕೋಪರ್ ಪೂರ್ವದ ಕನ್ನಡ ವೆಲ್ಫೇರ್ ಸೊಸೈಟಿಯ ಸಭಾಗೃಹದಲ್ಲಿ ಜರಗಿದ ಕೃತಿಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.
ಮುಂಬಯಿಯಲ್ಲಿ 1994 ರಿಂದ ಈ ಸಂಕಲನ ಸೇರಿ ಈತನಕ ಆರು ಪ್ರಾತಿನಿಧಿಕ ಕಥಾಸಂಕಲನಗಳು ಬಂದಿವೆ . ಅಲ್ಲದೆ ಡಾ.ಮಮತಾರಾವ್ ಮುಂಬಯಿ ಕನ್ನಡ ಕಥಾಸಾಹಿತ್ಯದ ಬಗ್ಗೆ ಸಂಶೋಧನಾ ಪ್ರಬಂಧವನ್ನೂ ಪ್ರಕಟಿಸಿದ್ದಾರೆ.ಎಲ್ಲ ಕತೆಗಾರ್ತಿಯರು ಇಂತಹ ಪುಸ್ತಕಗಳನ್ನು ಓದಬೇಕು ಎನ್ನುತ್ತಾ ಬೆಂಗಳೂರಿನ ಸಪ್ನ ಬುಕ್ ಈ ಕಥಾಸಂಕಲನ ಪ್ರಕಟಿಸಿರುವುದು ಮುಂಬಯಿಯ ನಮಗೆಲ್ಲ ಗೌರವದ ಸಂಗತಿ.ಅದಕ್ಕಾಗಿ ಸಂಪಾದಕಿ ಹೇಮಾ ಅಮೀನ್ ಅವರು ಅಭಿನಂದನಾರ್ಹರು ಎಂದರು.
ಕೃತಿಯನ್ನು ಲೋಕಾರ್ಪಣೆ ಗೊಳಿಸಿದ ಹೆಸರಾಂತ ಸಂಘಟಕ,ಕನ್ನಡ ಪರಿಚಾರಕ ಎಸ್.ಕೆ.ಸುಂದರ್ ಮಾತನಾಡುತ್ತಾ 1960-70 ರ ದಶಕದಲ್ಲಿ ನಾನು ಮುಂಬಯಿಗೆ ಬಂದಾಗಿನ ದಿನಗಳಲ್ಲಿ ಗಮನಾರ್ಹ ಕನ್ನಡ ಕಾರ್ಯಕ್ರಮಗಳು ಅಪರೂಪಕ್ಕೆ ಅಲ್ಲಿ ಇಲ್ಲಿ ಮಾತ್ರ ನಡೆಯುತ್ತಿದ್ದುವು. ಆ ದಶಕಗಳಲ್ಲಿ ಹೆಚ್ಚಾಗಿ ಸಂಘ ಸಂಸ್ಥೆಗಳ ವಾರ್ಷಿಕೋತ್ಸವಗಳು ಮತ್ತು ನಾಟಕಗಳು ಅಷ್ಟೇ ಹೆಚ್ಚಿನ ಕಡೆಗಳಲ್ಲಿ ಕಾಣುತ್ತಿದ್ದೆವು. ಆದರೆ ಎಂಭತ್ತರ ದಶಕದ ನಂತರ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆರಂಭವಾದದ್ದು,ತೊಂಭತ್ತರ ದಶಕದಲ್ಲಿ ದೈನಿಕಗಳು ಆರಂಭವಾದದ್ದು .... ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ರೂಪು ಸಿಗಲು ಆರಂಭವಾಯಿತು. ಇಂದಿನ ದಿನಗಳಲ್ಲಿ ಕನ್ನಡ ದೈನಿಕಗಳ ಪ್ರೋತ್ಸಾಹ, ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳು ಇವೆಲ್ಲ ಮುಂಬೈಯ ಸಾಹಿತ್ಯಾಸಕ್ತರನ್ನು ಹುರಿದುಂಬಿಸುತ್ತಿವೆ. ಆ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ರೂಪವನ್ನು ಮುಂಬಯಿಯಲ್ಲಿ ನಾವಿಂದು ಕಾಣುತ್ತಿದ್ದೇವೆ .ಈ ಕಥಾಸಂಕಲನದ ಸಂಪಾದಕಿ ಹೇಮಾ ಸದಾನಂದ ಅಮೀನ್ ಅವರನ್ನು ಶಾಲಾಕಾಲೇಜ್ ದಿನಗಳಿಂದಲೂ ಬಲ್ಲೆ. ಅವರ ಸಾಹಿತ್ಯಾಸಕ್ತಿಯನ್ನು ಆಗಲೇ ಗಮನಿಸಿದ್ದೇನೆ . ಅವರ ಕಥೆ ಕವಿತೆಗಳನ್ನು ಓದುತ್ತಿರುತ್ತೇನೆ. ಇಂದು ಅವರು ಮುಂಬೈಯ 38 ಕಥೆಗಾರ್ತಿಯರ ಕಥಾಸಂಕಲನವನ್ನು ಹೊರ ತರುತ್ತಿರುವುದಕ್ಕೆ ಅವರನ್ನು ಅಭಿನಂದಿಸುತ್ತೇನೆ ಎಂದರು ಎಸ್ ಕೆ.ಸುಂದರ್.
ಅತಿಥಿಯಾಗಿ ಆಗಮಿಸಿದ ಕನ್ನಡ ಭವನ ಎಜ್ಯುಕೇಷನ್ ಸೊಸೈಟಿಯ ಉಪಾಧ್ಯಕ್ಷರಾದ ಕೇಶವ್ ಕೋಟ್ಯಾನ್ ಮಾತನಾಡುತ್ತಾ ನಾನು ಸಾಹಿತಿಗಳು ಬರೆದ ಪುಸ್ತಕಗಳನ್ನು ಖರೀದಿಸಿ ಓದುವವ.ನನ್ನ ಮನೆಯಲ್ಲಿ ಪುಸ್ತಕಗಳ ಗ್ರಂಥ ಭಂಡಾರವೇ ಇದೆ. ಅದರಲ್ಲಿ ಮುಂಬಯಿ ಲೇಖಕರ ಪುಸ್ತಕಗಳೇ ಹೆಚ್ಚು ಇವೆ ಎನ್ನುವುದು ಅಭಿಮಾನ. ಇಲ್ಲಿನ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಆದಷ್ಟು ಹೊಸ ತಲೆಮಾರಿಗೆ ಅವಕಾಶಗಳು ಸಿಗುತ್ತಿರಲಿ ಎಂದು ಅವರು ಆಶಿಸಿದರು.
ಕೃತಿಯನ್ನು ಪತ್ರಕರ್ತ, ಕತೆಗಾರ ಏಳಿಂಜೆ ನಾಗೇಶ್ ಪರಿಚಯ ಮಾಡಿದರು. ಮಾಯಾನಗರಿಯ ಧಾವಂತದ ನಿತ್ಯ ಜಂಜಾಟದ ನಡುವೆಯೂ ಇಲ್ಲಿನ ಕತೆಗಾರ್ತಿಯರೆಲ್ಲ ಸಂವೇದನಾ ಶೀಲ ಕತೆಗಳನ್ನು ಬರೆಯುವ ಹವ್ಯಾಸವನ್ನು ಇಟ್ಟುಕೊಂಡು ಮುಂದುವರಿಯುತ್ತಿರುವುದು ಖುಷಿಯ ಸಂಗತಿ. ಹಿರಿಯರ ಜತೆಗೆ ಹೊಸ ಕತೆಗಾರ್ತಿಯರಿಗೆ ತಮ್ಮ ಪ್ರತಿಭೆ ತೋರಿಸುವ ಇಂತಹ ಕೃತಿಗಳು ಮುಂದೆಯೂ ಬರುತ್ತಿರಲಿ ಎಂದು ನಾಗೇಶ್ ಹಾರೈಸಿದರು.
ಈ ಸಂದರ್ಭದಲ್ಲಿ ಸೆರಗಿನಂಚಿನಲಿ ಮುಂಬಯಿ ಕೃತಿಯ ಆಯ್ದ ಕಥೆಗಳ ಕೆಲವು ಭಾಗವನ್ನು ಗೋರೆಗಾಂವ್ ಕರ್ನಾಟಕ ಸಂಘದ ಗುಣೋದಯ ಐಲ್ ವಾಚನಮಾಡಿದರು. ಪ್ರಾಸ್ತಾವಿಕ ನುಡಿಗಳನ್ನು ರಂಗನಿರ್ದೇಶಕ ನಾರಾಯಣ ಶೆಟ್ಟಿ ನಂದಳಿಕೆ ಆಡಿದರು.ಸಭಾ ಅಧ್ಯಕ್ಷರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.ಪ್ರಾರ್ಥನೆಯನ್ನು ಕನ್ನಡ ವೆಲ್ಪೇರ್ ಸೊಸೈಟಿಯ ಮಹಿಳಾ ವಿಭಾಗದವರು ಮಾಡಿದರು. ಸಂಪಾದಕಿ ಹೇಮಾ ಅಮೀನ್ ಈ ಕೃತಿ ತಂದಿರುವ ಕಾರಣ, ತನ್ನ ಗುರು ರವಿ ರಾ. ಅಂಚನ್ ಕುರಿತು ಕೆಲವು ಮಾತುಗಳನ್ನಾಡಿದರು.ಈ ಸಮಯ ಹೇಮಾ ಸದಾನಂದ ಅಮೀನ್ ದಂಪತಿಯನ್ನು ವೇದಿಕೆಯ ಗಣ್ಯರು ಶಾಲು ಹೊದಿಸಿ ಗೌರವಿಸಿದರು.ಕೃತಿ ಬಿಡುಗಡೆ ಕಾರ್ಯಕ್ರಮದ ನಿರೂಪಣೆಯನ್ನು ಲೇಖಕಿ ಡಾ. ಜಿ. ಪಿ. ಕುಸುಮ ಮಾಡಿದರು. ಶ್ರೀ ಕ್ಷೇತ್ರ ಗೀತಾಂಬಿಕ ದೇವಸ್ಥಾನ ಅಸಲ್ಪೆ ಇದರ ಮಹಿಳಾ ವಿಭಾಗದವರಿಂದ ಗೀತ ಗಾಯನ ನಡೆಯಿತು.
ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ (ರಿ ) ಮುಂಬಯಿ ಇದರ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಶುಭಹಾರೈಸಿದರು. ಕಥಾಸಂಕಲನದಲ್ಲಿ ಕತೆ ಪ್ರಕಟವಾಗಿರುವ ಕತೆಗಾರ್ತಿಯರಿಗೆ ವೇದಿಕೆಯಲ್ಲಿ ಅಂದಿನ ಅಧ್ಯಕ್ಷ ಶ್ರೀನಿವಾಸ ಜೋಕಟ್ಟೆ ಅವರು ಸೆರಗಿನಂಚಿನಲಿ ಮುಂಬಯಿ ಕಥಾಸಂಕಲನವನ್ನು ನೀಡಿದರು. ಕೃತಿ ಬಿಡುಗಡೆ ಸಮಯ ಬಂಟರವಾಣಿ ಗೌರವ ಸಂಪಾದಕ ಅಶೋಕ್ ಪಕ್ಕಳ ಮತ್ತು ಕನ್ನಡ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸದಾನಂದ ಅಮೀನ್, ಅವಿನಾಶ್ ಬಂಗೇರ,ರಾಜವರ್ಮಾ ಜೈನ್, ಪೂಜಾ ಪೂಜಾರಿ, ಮಾಲತಿ ಪುತ್ರನ್, ಯೋಗೇಶ್ ಪೂಜಾರಿ, ಸತೀಶ್ ಬಂಗೇರ
ಮಲ್ಲಿಕಾರ್ಜುನ್ ಕಲ್ಲೂರ್ ಸಹಕರಿಸಿದರು.



Post a Comment