ಚಡ್ಡಿಗ್ಯಾಂಗ್ ಆರೋಪಿಗಳ ಬಂಧನ ನಂತರವೂ ಮತ್ತೆ ನಗರದಲ್ಲಿ ಕಳ್ಳರ ಹಾವಳಿ
ನಗರದಲ್ಲಿ ಕಳ್ಳರ ಹಾವಳಿಯೂ ಪ್ರಾರಂಭವಾಗಿತ್ತು. ಹಲವು ಸಮಯಗಳಿಂದ ಸುಮಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಭಯ ಹುಟ್ಟಿಸಿದ್ದ ಚಡ್ಡಿಗ್ಯಾಂಗ್ ಸೇರಿದಂತೆ ಹಲವು ಪ್ರಕರಣಗಳ ಆರೋಪಿಗಳ ಬಂಧನವು ಆಗಿದೆ.
ಏನೇ ಆದರೂ ಕಳ್ಳರ ಹಾವಳಿ ಕಮ್ಮಿಯಾಗಿಲ್ಲ. ಒಂಟಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ದರೋಡೆಕೋರರು ಸದ್ಯ ಮನೆಮಂದಿಯಿರುವಾಗಲೇ ನುಗ್ಗುವ ಪ್ರಕರಣಗಳು ನಡೆಯುತ್ತಿದೆ. ಜನರು ಆತಂಕದಲ್ಲೇ ನಿದ್ರಿಸುವ ಪರಿಸ್ಥಿತಿ ಎದುರಾಗಿದೆ.
ಪದವಿನಂಗಡಿ ಬಳಿ ಎರಡು ಕಡೆ ಘಟನೆ ಬೆಳಕಿಗೆ ಬಂದಿದ್ದು, ಮಹಾತ್ಮನಗರ ಬಡಾವಣೆಯ ಮನೆಯೊಂದರ ಮುಖ್ಯಗೇಟ್ ತೆಗೆದು ಒಳನುಗ್ಗಿರುವ ಕಳ್ಳರು ಬಾಗಿಲಿನ ಬಳಿ ಇದ್ದ ಇನ್ನೊಂದು ಸ್ಟೀಲ್ ಗೇಟ್‌ನ್ನು ತೆರೆದು ಮನೆಯ ಬಾಗಿಲನ್ನು ರಾಡ್‌ನಿಂದ ಒಡೆಯಲು ಯತ್ನಿಸಿರುವ ಘಟನೆ ತಡ ರಾತ್ರಿ ನಡೆದಿದೆ. ರಾತ್ರಿ 1.45 ರ ವೇಳೆಗೆ ಈ ಘಟನೆ ನಡೆದಿದ್ದು, ಈ ವೇಳೆ ಎಚ್ಚರಗೊಂಡು ಎಲ್ಲ ಲೈಟ್ ಹಾಕಿ ಮನೆ ಮಂದಿ ಕೂಗಿಕೊಂಡಾಗ ಕಳ್ಳರು ಓಡಿ ಹೋಗಿದ್ದಾರೆ. ತಕ್ಷಣ ಮನೆಯವರು ಪೊಲೀಸರು ಹಾಗೂ ನೆರೆಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕಾವೂರು ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಶನಿವಾರ ತಡರಾತ್ರಿ ನಾಲ್ವರ ತಂಡ ಪದವಿನಂಗಡಿಯ ಪೆರ್ಲಗುರಿಯ ಪ್ರಸನ್ನ ಗಣಪತಿ ದೇವಸ್ಥಾನದಿಂದ ಕಳವಿಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ದೇವಸ್ಥಾನದ ಬಳಿ ಓಡಾಡುತ್ತಿದ್ದ ಕಳ್ಳರ ಕೈಯಲ್ಲಿದ್ದ ಟಾರ್ಚ್ ಬೆಳಕು ದೇವಸ್ಥಾನದ ಪಕ್ಕದ ಮನೆಯವರಿಗೆ ಕಂಡು ಅವರು ಎಚ್ಚರಗೊಂಡರು ಎನ್ನಲಾಗಿದೆ. ಮನೆಯ ಹೊರಭಾಗದ ಲೈಟ್‌ಗಳನ್ನು ಅವರು ಹಾಕಿದಾಗ ಕಳ್ಳರು ಪರಾರಿಯಾದರು ಎಂದು ತಿಳಿದು ಬಂದಿದೆ.
ಹೀಗೆ ಜೋರು ಮಳೆಯ ನಡುವೆ ಕಳ್ಳರ ಕೈಚಳವು ಮಂಗಳೂರು ನಗರದಾದ್ಯಂತ ನಡೆಯುತ್ತಿದೆ. ಈ ಹಿಂದೆ ನಗರದಲ್ಲಿ ಭಯ ಹುಟ್ಟಿಸಿದ್ದ ಚಡ್ಡಿಗ್ಯಾಂಗ್ ಪೊಲೀಸರ ದಕ್ಷ ಕಾರ್ಯಾಚರಣೆಯಿಂದ ತಕ್ಷಣ ಸೆರೆಯಾಗಿದ್ದರು. ಇನ್ನೂ ಹಲವು ಮನೆ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಆದರೂ ಕಳ್ಳರ ಹಾವಳಿ ಕಮ್ಮಿಯಾಗದಿರೂವುದು ಜನರ ನಿದ್ದೆಗೆಡಿಸಿದೆ. ಪೊಲೀಸರು ಮನೆಗಳಲ್ಲಿ ಸಿಸಿಟಿವಿ ಅಳವಡಿಸಿವಂತೆ ಈ ಹಿಂದೆಯೇ ಜನರಲ್ಲಿ ಮನವಿ ಮಾಡಿದ್ದರು.
ಸದ್ಯ ಪೊಲೀಸರು ಈ ಪ್ರಕರಣಗಳ ಹಿಂದೆ ಬಿದ್ದಿದ್ದು, ಆದಷ್ಟೂ ಬೇಗ ಖದೀಮರ ಬಂಧನವಾಗುವ ಸಾಧ್ಯತೆಯಿದೆ.
Post a Comment