ಸುರತ್ಕಲ್ ಟೋಲ್ ಗೇಟ್ ಬಳಿ ಸತ್ತ ಕುರಿಗಳ ಮೃತದೇಹ, ಎಫ್‌ಐಆರ್ ದಾಖಲು.
ಸುರತ್ಕಲ್ ಹಳೆ ಟೋಲ್ ಗೇಟ್ ಬಳಿ ಸತ್ತ ಕುರಿಗಳನ್ನು ಯಾರೋ ಎಸೆದು ಹೋಗಿದ್ದು ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎನ್‌ಐಟಿಕೆ ಸುರತ್ಕಲ್ ಹಳೆ ಗೇಟ್ ಬಳಿ ಸತ್ತ 15 ಕುರಿಗಳನ್ನು ಎಸೆದು ಹೋಗಿದ್ದಾರೆ.
ಆ.2ರಂದು ವಾರ್ಡ್ ನ ಕಾರ್ಪೋರೇಟರ್ ಶ್ವೇತಾ ಪೂಜಾರಿ ಇವರಿಗೆ ಮಾಹಿತಿ ನೀಡಿದ ಮೇರೆಗೆ ಅವರು ಮಹಾನಗರ ಪಾಲಿಕೆಯ ಅಧಿಕಾರಿ ಹಾಗೂ ಸಿಬಂಧಿಗಳೊಂದಿಗೆ ಸ್ಥಳಕ್ಕೆ ಹೋಗಿ ಸತ್ತ ಕುರಿಗಳ ಮೃತದೇಹವನ್ನು ಸುರಕ್ಷಿತ ಸ್ಥಳಗಳಲ್ಲಿ ದಫನ ಮಾಡಿದ್ದಾರೆ. ಇನ್ನು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಉತ್ತರ ಕರ್ನಾಟಕದ ಕಡೆಯಿಂದ ಮಂಗಳೂರಿಗೆ ಕುರಿ ಮಾರಾಟ ಮಾಡುವ ವ್ಯಾಪಾರಿಗಳು ಈ ಕೃತ್ಯ ನಡೆಸಿರಬಹುದು ಎಂದು ಹೇಳಲಾಗಿದೆ. ವ್ಯಾಪಾರಿಗಳು ಇಲ್ಲಿಂದ ಹಿಂತಿರುಗಿ ಹೋಗುವ ವೇಳೆ ಸತ್ತ ಕುರಿಗಳನ್ನು ರಸ್ತೆ ಪಕ್ಕದಲ್ಲಿರುವ ಪೊದೆಗಳಿಗೆ ಎಸೆದು ಹೋಗಿರಬಹುದು ಎಂದು ಹೇಳಲಾಗಿದೆ. ಅಂತಹ ವ್ಯಕ್ತಿಗಳ ಮೇಲೆ ಕ್ರಮ ವಹಿಸಲಾಗಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಹಾಕಲಾಗಿದೆ.
Post a Comment