ಸಿಲಿಂಡರ್ ಸ್ಫೋಟ: 9 ಮಂದಿ ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಗಂಭೀರ
ತುರ್ತು ಚಿಕಿತ್ಸಾ ಘಟಕದಲ್ಲಿಯೇ ಗಾಯಾಳುಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ರಚಿಸಲಾಗಿದ್ದು, ಪ್ಲಾಸ್ಟಿಕ್ ಸರ್ಜರಿ ತಜ್ಞ ಡಾ. ರವೀಂದ್ರ ಯಲಿಗಾರ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.
'ಶೇ 25ರಷ್ಟು ಸುಟ್ಟಗಾಯವಾಗಿರುವ ಹನ್ನೊಂದು ವರ್ಷದ ಬಾಲಕ ವಿನಾಯಕ ಬಾರಕೇರ್ ಹೊರತುಪಡಿಸಿ ಉಳಿದ ಎಂಟು ಮಂದಿಗೂ ಶೇ 80ರಷ್ಟು ಸುಟ್ಟಗಾಯಗಳಾಗಿವೆ. ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇಟ್ಟಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಹೊರ ಜಿಲ್ಲೆಗಳಿಂದಲೂ ತಜ್ಞ ವೈದ್ಯರನ್ನು ಕರೆಸಲು ಚಿಂತನೆ ನಡೆಸಲಾಗಿದೆ' ಎಂದು ಕೆಂಎಸಿ-ಆರ್‌ಐ ನಿರ್ದೇಶಕ ಎಸ್.ಎಫ್. ಕಮ್ಮಾರ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ನಡೆದದ್ದೇನು?: ಅಚ್ಚವ್ವನ ಕಾಲೊನಿಯ ಈಶ್ವರ ದೇವಸ್ಥಾನದ ಮೇಲ್ಮಹಡಿಯ ಚಿಕ್ಕ ಕೊಠಡಿಯಲ್ಲಿ ಅಯ್ಯಪ್ಪನ ಸನ್ನಿಧಾನ ಮಾಡಿಕೊಂಡು 14 ಮಂದಿ ಮಾಲಾಧಾರಿಗಳು ವೃತಾಚರಣೆ ಮಾಡುತ್ತಿದ್ದರು. ರಾತ್ರಿ ಪೂಜೆ ಮುಗಿಸಿ, ಒಂಬತ್ತು ಮಂದಿ ಅಲ್ಲಿಯೇ ಮಲಗಿದ್ದರು. ಮಾಲಾಧಾರಿಯೊಬ್ಬರ ಕಾಲು ತಾಗಿ ಅಲ್ಲಿದ್ದ ಸಿಲಿಂಡರ್ ಉರುಳಿದೆ. ರೆಗ್ಯುಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿ ಹಚ್ಚಿದ್ದ ದೀಪಕ್ಕೆ ತಗುಲಿ ತಕ್ಷಣ ಕೊಠಡಿಯಲ್ಲಿ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಫೋಟವಾಗಿದೆ. ಅದರ ತೀವ್ರತೆಗೆ ಅಲ್ಲಿದ್ದ ಸಾಮಗ್ರಿಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಅಯ್ಯಪ್ಪಸ್ವಾಮಿ ಭಾವಚಿತ್ರ ಹಾಗೂ ಮಾಲಾಧಾರಿಗಳ ಬಟ್ಟೆಗಳೆಲ್ಲ ಸುಟ್ಟುಕರಕಲಾಗಿವೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಗಾಯಾಳುಗಳನ್ನು ಕೆಎಂಸಿ-ಆರ್‌ಐಗೆ ಕರೆತಂದಾಗ ಕರ್ತವ್ಯದಲ್ಲಿದ್ದ ಸಿಎಂಒ ಸರಿಯಾಗಿ ಸ್ಪಂದಿಸಿಲ್ಲ. ಸುಟ್ಟಗಾಯಕ್ಕೆ ಹಚ್ಚುವ ಬರ್ನಾಲ್ ನಮ್ಮ ಬಳಿಯಿಲ್ಲ, ಹೊರಗಡೆಯಿಂದ ತರುವಂತೆ ಸೂಚಿಸಿ ಚೀಟಿ ಬರೆದುಕೊಟ್ಟಿದ್ದರು. ಅವರ ನಿರ್ಲಕ್ಷ್ಯ ಅರಿತು ಕೆಲವು ಮಾಲಾಧಾರಿಗಳು, ಔಷಧ ದಾಸ್ತಾನು ಕೊಠಡಿಯ ಕೀಲಿ ಮುರಿದು ಅಲ್ಲಿ ಸಂಗ್ರಹಿಸಿಟ್ಟಿದ್ದ ಬರ್ನಾಲ್ ತಂದುಕೊಟ್ಟಿದ್ದಾರೆ' ಎಂದು ಗಾಯಾಳುಗಳ ಸಂಬಂಧಿಕರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾಧಿಕಾರಿ ದಿವ್ಯಪ್ರಭು ಎದುರು ಆರೋಪಿಸಿ, ಅಳಲು ತೋಡಿಕೊಂಡಿದ್ದಾರೆ.

Post a Comment