".

Header Ads

ಪೊಲೀಸರೇ ಕಳ್ಳರಾದರೆ ಹೇಗೆ..? ಚಿನ್ನ ಕಸಿದುಕೊಂಡ ಇಬ್ಬರು ಪಿಎಸ್ ಐ ಅರೆಸ್ಟ್

 

ಕಾರವಾರ ಮೂಲದ ಚಿನ್ನದ ವ್ಯಾಪಾರಿಯೊಬ್ಬರಿಗೆ ತಾವು ಐಜಿ ಸ್ಕ್ವಾಡ್ ನವರು ಎಂದು ಸುಳ್ಳು ಹೇಳಿ ಹೆದರಿಸಿ ಪೊಲೀಸರೇ ಬಂಗಾರವನ್ನು ಕಸಿದುಕೊಂಡ ಘಟನೆ ದಾವಣಗೆರೆಯಲ್ಲಿ  ನಡೆದಿದೆ.  ಬಂಧಿತ ಪಿಎಸ್‍ಐಗಳನ್ನು ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ.

ಈ ಇಬ್ಬರಿಗೆ ಸಹಕರಿಸಿದ್ದ ಚಿನ್ನದಂಗಡಿಯ ಕೆಲಸಗಾರರಾದ ಸತೀಶ್ ರೇವಣಕರ್, ನಾಗರಾಜ್ ರೇವಣಕರ್ ಎಂಬವರನ್ನು ಸಹ ದಾವಣಗೆರೆಯ ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರವಾರ ಮೂಲದ ವ್ಯಾಪಾರಿ ವಿಶ್ವನಾಥ್ ಅರ್ಕಸಾಲಿ ಎಂಬವರು 80 ಗ್ರಾಂ ಬಂಗಾರದ ಒಡವೆಗಳನ್ನು ತೆಗೆದುಕೊಂಡು ದಾವಣಗೆರೆಯ ಬಸ್ ನಿಲ್ದಾಣಕ್ಕೆ ಬಂದಿದ್ದರು.ಈ ವೇಳೆ ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಸೇರಿ ವ್ಯಾಪಾರಿಗೆ ನಾವು ಐಜಿ ಸ್ಕ್ವಾಡ್ ಎಂದು ಹೇಳಿ ಹೆದರಿಸಿದ್ದರು. ಪೊಲೀಸ್ ಐಡಿ ಕಾರ್ಡ್, ನಕಲಿ ಗನ್ ತೋರಿಸಿ ಕೆಟಿಜೆ ನಗರ ಪೊಲೀಸ್ ಠಾಣೆಗೆ ಕಾರಿನಲ್ಲಿ ಕರೆದೊಯ್ದು, ಒಳಗೆ ಹೋಗದೆ ವಾಪಸ್ ಕರೆತಂದಿದ್ದರು.

ಬಳಿಕ ವ್ಯಾಪಾರಿಯ ಬಳಿ ಇದ್ದ ಬಂಗಾರವನ್ನು ಕಸಿದುಕೊಂಡು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಬಂಗಾರ ಕಳೆದುಕೊಂಡ ವ್ಯಾಪಾರಿ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಕೆಟಿಜೆ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

Powered by Blogger.