ಕಾಪು ಕಡಲ ಪರ್ಬ” ಆಮಂತ್ರಣ ಪತ್ರಿಕೆ ಬಿಡುಗಡೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ಬಿ ಪ್ರಯುಕ್ತ ಕಾಪು ಶಾಸಕ ಗುರ್ಮ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಡಿ.26, 27 ಮತ್ತು 28ರಂದು ಕಾಪು ಲೈಟ್ ಹೌಸ್ ಬೀಚ್ ಕಡಲ ಕಿನಾರೆಯಲ್ಲಿ ಡಾ.ವಿ.ಎಸ್.ಆಚಾರ್ಯ ಸ್ಮರಣೆಯ ಕಡಲೋತ್ಸವ- ಖಾದ್ಯ- ಕ್ರೀಡೆ- ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳೊಂದಿಗೆ ಕಾಪು ಕಡಲ ಪರ್ಬ ಆಯೋಜಿಸಲಾಗಿದೆ.
ಕಾಪು ಮಂಥನ್ ಬೀಚ್ ರೆಸಾರ್ಟ್ ನಲ್ಲಿ ಮಂಗಳವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕಡಲ ಪರ್ಬದ ಜತೆಗೆ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ನೇತ್ರ ಉಚಿತ ಚಿಕಿತ್ಸೆ ಕನ್ನಡಕ ವಿತರಣೆ, ದಂತ ಚಿಕಿತ್ಸೆ, ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದರು.
ಪ್ರಬಂಧ, ಚಿತ್ರ ಬಿಡಿಸುವ ಸ್ಪರ್ಧೆ, ಮರಳು ಶಿಲ್ಪ ರಚನೆ, ಹಗ್ಗಜಗ್ಗಾಟ, ಮಹಿಳೆಯರಿಗೆ ಥೋಬಾಲ್ ಮತ್ತು ಪುರುಷರ ವಾಲಿಬಾಲ್ ಪಂದ್ಯಾಟ ಸಹಿತ ಬೀಚ್ ಕ್ರೀಡಾಕೂಟಗಳು, ಸಾಧಕರಿಗೆ ಸನ್ಮಾನ, ಸಂಗೀತ ರಸಮಂಜರಿ, ನಾಟಕ ಮೊದಲಾದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದು ಗುರ್ಮೆ ಮಾಹಿತಿ ನೀಡಿದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಪ್ರಮುಖರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಶ್ರೀಕಾಂತ್ ನಾಯಕ್, ವೀಣಾ ಶೆಟ್ಟಿ, ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು ಉಪಸ್ಥಿತರಿದರು.
ಪ್ರಮುಖ ಕಾರ್ಯಕ್ರಮ: ಡಿ.26ರಂದು ಮಧ್ಯಾಹ್ನ 3 ಗಂಟೆಗೆ ‘ನಾ ಕಂಡಂತೆ ಅಟಲ್’ ಪ್ರಬಂಧ ಸ್ಪರ್ಧೆ, ಸಂಜೆ 4 ಗಂಟೆಗೆ ‘ಆತ್ಮನಿರ್ಭರ ಭಾರತ’- ಚಿತ್ರ ಬಿಡಿಸುವ ಸ್ಪರ್ಧೆ, ಆಹಾರ ಮೇಳ ಉದ್ಘಾಟನೆ, ಸಂಜೆ 6ಕ್ಕೆ ಜಗದೀಶ್ ಆಚಾರ್ಯ ಪುತ್ತೂರು ಅವರಿಂದ ಸಂಗೀತ ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ. ಬಳಿಕ “ಶೋಬಾಜಿ” ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನ.
ಡಿ.27ರಂದು ಬೆಳಗ್ಗೆ 9.30ಕ್ಕೆ ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ನೇತ್ರ ಉಚಿತ ತಪಾಸಣೆ ಹಾಗೂ ಗುರ್ಮೆ ಫೌಂಡೇಶನ್ ವತಿಯಿಂದ ಕನ್ನಡಕ ವಿತರಣೆ, ಡಾ.ವಿಜಯೇಂದ್ರ ಅವರ ನೇತೃತ್ವದಲ್ಲಿ ದಂತ ಚಿಕಿತ್ಸಾ ಶಿಬಿರ, ಮಧ್ಯಾಹ್ನ 2.30ಕ್ಕೆ ಪುರುಷರು ಮತ್ತು ಮಹಿಳೆಯರಿಗೆ ಬೀಚ್ ಹಗ್ಗಜಗ್ಗಾಟ, ಮರಳು ಶಿಲ್ಪ ರಚನೆ ಸ್ಪರ್ಧೆ, ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 8ಕ್ಕೆ ರಘುದೀಕ್ಷಿತ್ ಸಂಗೀತ ರಸಮಂಜರಿ ನಡೆಯಲಿದೆ.
ಮಹಿಳೆಯರಿಗೆ ಡಿ.28ರಂದು ಬೆಳಗ್ಗೆ 9.30ಕ್ಕೆ ಆದರ್ಶ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಶಿಬಿರ, 11.30ಕ್ಕೆ ಪುರುಷರ ವಾಲಿಬಾಲ್ ಪಂದ್ಯಾವಳಿ, ಪ್ರೋಬಾಲ್ ಪಂದ್ಯಾವಳಿ, ರಾತ್ರಿ 7ಕ್ಕೆ ಸಭಾ ಕಾಯಕ್ರಮ, ರಾತ್ರಿ 8ಕ್ಕೆ ಕುನಾಲ್ ಗಾಂಜಾವಾಲಾ ಅವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ಜರುಗಲಿದೆ.

Post a Comment