ಕಾರ್ಕಳ: ಜ.03 ರಂದು ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳ
ಮಿಯ್ಯಾರು ಕಂಬಳ ಸಮಿತಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ 22ನೇ ವರ್ಷದ ಮಿಯ್ಯಾರು ಲವ–ಕುಶ ಜೋಡುಕರೆ ಕಂಬಳವು ಜ.3ರಂದು ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಡಿ.24 ರಂದು ಬುಧವಾರ ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಕಳದ ಮಿಯ್ಯಾರು ಕಂಬಳವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಶಿಷ್ಟ ಕಂಬಳವಾಗಿದೆ. ರಾಜ್ಯದ ನಾನಾ ಭಾಗಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಸಾವಿರಾರು ಕಂಬಳ ಅಭಿಮಾನಿಗಳು ಕಂಬಳ ವೀಕ್ಷಿಸಲು ಆಗಮಿಸಲಿದ್ದಾರೆ ಎಂದರು. ಕಂಬಳದ ಸಂಪ್ರದಾಯ, ಶಿಸ್ತು ಹಾಗೂ ಸಮಯಪಾಲನೆ ಅತ್ಯಂತ ಮುಖ್ಯವಾಗಿದ್ದು, ಕೋಣದ ಮಾಲಕರು ನಿಗದಿತ ಸಮಯ ಪಾಲನೆ ಮಾಡುವಂತೆ ಕಡ್ಡಾಯ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ಭಾರಿ ಎಲ್ಲೆಡೆಯಿಂದ 200ಕ್ಕೂ ಅಧಿಕ ಜೋಡಿ ಕೋಣ ಭಾಗಿಯಾಗಲಿವೆ. ಸರಕಾರ ನಿಗದಿಪಡಿಸಿರುವ ಕಾನೂನು ಚೌಕಟ್ಟು ಹಾಗೂ ಸಮಯ ಮಿತಿಯೊಳಗೆ ಕಂಬಳವನ್ನು ಯಶಸ್ವಿಯಾಗಿ ಮುಗಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್ ಭಟ್, ಮಿಯ್ಯಾರು ಚರ್ಚ್‌ನ ರೆ। ಕ್ಯಾನ್ವಿಟ್ ಬರ್ಬೋಜ, ಜಾಮೀಯ ಮಸೀದಿಯ ಮೌಲನಾ ರಾಜಿಕ್ ಅಹಮದ್, ಗ್ರಾ. ಪಂ. ಅಧ್ಯಕ್ಷೆ ಸನ್ಮತಿ ನಾಯಕ್, ರಾಜ್ಯ ಸಹಕಾರ ಮಾರಾಟ ಮಂಡಲ ಅಧ್ಯಕ್ಷ ಡಾ। ಎಂ. ಎನ್. ರಾಜೇಂದ್ರ ಕುಮಾರ್ ಬಹುಮಾನ ವಿತರಿಸಲಿದ್ದಾರೆ. ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಜೀವನ್ ದಾಸ್ ಅಡ್ಯಂತಾಯ, ಉಪಾಧ್ಯಕ್ಷರಾದ ಉದಯ ಎಸ್. ಕೊಟ್ಯಾನ್,
ಅಂತೋನಿ ನಕ್ರೆ, ತಿರ್ಪುಗಾರ ರವೀಂದ್ರ ಮಡಿವಾಳ, ವಿಜಯಕುಮಾರ್ ಕಂಗಿನಮನೆ, ಕೋಶಾಧಿಕಾರಿ ಶ್ಯಾಮ್ ಎನ್. ಶೆಟ್ಟಿ ಸಮಿತಿ ಪ್ರಮುಖರಾದ ಭಾಸ್ಕರ್ ಕೊಟ್ಯಾನ್, ಪ್ರಭಾಕರ್ ಶೆಟ್ಟಿ, ಜೀವಂಧರ್ ಜೈನ್, ಎಂ. ಜಯರಾಮ ಪ್ರಭು, ರಮೇಶ್ ಹೆಗ್ಡೆ, ಸುಮಿತ್, ಆನಂದ ನಾಯಕ್, ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
Post a Comment