ನಿಟ್ಟೆ : ಲಾರಿ ಹಾಗೂ ಕಾರಿನ ನಡುವೆ ಭೀಕರ ಅಪಘಾತ; ಲಾರಿ ಮುಗುಚಿಬಿದ್ದು ಪಾದಚಾರಿ ಗಂಭೀರ
ದಾವಣಗೆರೆಯಿಂದ ಕಾರ್ಕಳ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುತ್ತಿದ್ದ ಮೊಟ್ಟೆ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಸಿಬ್ಬಂದಿಯ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿ ಪಾದಚಾರಿ ವ್ಯಕ್ತಿ ಲಾರಿಯಡಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಎಂಬಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಮೊಟ್ಟೆ ಸಾಗಾಟದ ಲಾರಿಯು ನಿಟ್ಟೆ ಪಂಚಾಯತ್ ಮುಂಭಾಗದ ರಸ್ತೆಯಲ್ಲಿ ಅತೀ ವೇಗವಾಗಿ ಸಾಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಈ ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂ ಆಗಿದ್ದು, ಕಾರು ಚಾಲಕ ಕಾರ್ಕಳ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಾನಂದ ಎಂಬವರು ಗಾಯಗೊಂಡಿದ್ದಾರೆ.
ಅದೇ ಸಮಯದಲ್ಲಿ ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದ ಉತ್ತರಪ್ರದೇಶ ಮೂಲದ ಟೈಲ್ಸ್ ಅಳವಡಿಸುವ ಕಾರ್ಮಿಕ ಸುನಿಲ್ ಕುಮಾರ್ ಎಂಬವರ ಮೇಲೆ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಉರುಳಿ ಬಿದಿದ್ದು, ಅವರ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಕ್ಷಾಂತರ ರೂ ಮೌಲ್ಯದ ಮೊಟ್ಟೆ ನಾಶ:
ಅಪಘಾತದ ಭೀಕರತೆ ಲಾರಿಯಲ್ಲಿದ್ದ ಸುಮಾರು 50 ಸಾವಿರಕ್ಕೂ ಅಧಿಕ ಮೊಟ್ಟೆಗಳು ರಸ್ತೆಯುದ್ದಕ್ಕೂ ಬಿದ್ದು ನಾಶವಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಈ ದುರ್ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post a Comment