ಒಂಟಿ ವೃದ್ದೆ ಮನೆಗೆ ನೀರು ಕೇಳುವ ನೆಪದಲ್ಲಿ ನುಗ್ಗಿ ಚಿನ್ನಾಭರಣ ದರೋಡೆಗೈದಿದ್ದ ಮೂವರು ಅರೋಪಿಗಳು ಅರೆಸ್ಟ್
ವೃದ್ದೆಯೊಬ್ಬರ ಮನೆಗೆ ನೀರು ಕೇಳುವ ನೇಪದಲ್ಲಿ ನುಗ್ಗಿ ಚಿನ್ನಾಭರಣ ನಗದು ದರೋಡೆ ಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಸುರತ್ಕಲ್ ಗುಡ್ಡೆಕೊಪ್ಲ ಶ್ರೀ ರಾಮ ಭಜನಾ ಮಂದಿರ ಬಳಿಯ ನಿವಾಸಿ ಶೈನ್ ಎಚ್. ಪುತ್ರನ್ ಯಾನೆ ಶಯನ್ ಯಾನೆ ಶೈನ್ (21), ಬೆಂಗಳೂರು ಎಳಚನಹಳ್ಳಿ, ಕಾಶಿನಗರ 5ನೇ ಕ್ರಾಸ್ ನಿವಾಸಿ ವಿನೋದ್ ಯಾನೆ ಕೋತಿ ಯಾನೆ ವಿನೋದ್ ಕುಮಾರ್ (33), ಬೆಂಗಳೂರು ಉಡಿಪಾಳ್ಯ ಕನಕಪುರ ಮುಖ್ಯ ರಸ್ತೆ ನಿವಾಸಿ ಗಿರೀಶ್ ಯಾನೆ ಸೈಕಲ್ ಗಿರಿ (28) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 4.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಬೈಕ್, 3 ಮೊಬೈಲ್ ಫೋನ್ ಹಾಗೂ 3 ಸಾವಿರ ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಸುರತ್ಕಲ್ ಮುಕ್ಕದ ಸಸಿಹಿತ್ಲು ರಸ್ತೆಯ ಮಿತ್ರಪಟ್ಣದ ನಿವಾಸಿ ಜಲಜ(85) ಎಂಬವರ ಮನೆಗೆ ಡಿ.3ರಂದು ತಡರಾತ್ರಿ 2.30 ಗಂಟೆ ಸುಮಾರಿಗೆ ಯಾರೋ ಅಪರಿಚಿತರು ಮನೆಯ ಬಾಗಿಲು ಬಡಿದು ಕುಡಿಯಲು ನೀರು ಬೇಕು ಬಾಗಿಲು ತೆರೆಯಿರಿ ಎಂದು ಹೇಳಿದ್ದಾರೆ. ಪಿರ್ಯಾದಿದಾರರು ಬಾಗಿಲು ತೆರೆಯದೇ ಇದ್ದಾಗ ಆರೋಪಿತರು ಮನೆಯ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ ಪಿರ್ಯಾದಿದಾರರನ್ನು “ಬಂಗಾರ್ ಒಲ್ಪ ಉಂಡು” (ಬಂಗಾರ ಎಲ್ಲಿದೆ) ಎಂದು ತುಳುವಿನಲ್ಲಿ ಜೋರಾಗಿ ಬೆದರಿಸಿ, ಬೈರಾಸನ್ನು ಪಿರ್ಯಾದಿದಾರರ ಕುತ್ತಿಗೆಗೆ ಬಿಗಿದು “ಬೊಬ್ಬೆ ಪಾಡುಂಡ ಕೆರ್ಪೆ ಬಂಗಾರ್ ಇಜ್ಜಾ ಉಂಡಾ ತೂಪ ಎಂಕುಲ್ ಏರೆನ್ಲಾ ಲೆತ್ತ್ಂಡ ನಾಲಿಡ್ ಪತ್ತ್ದ್ ಕೆರ್ಪೆ” (ಬೊಬ್ಬೆ ಹೊಡೆದರೆ ಸಾಯಿಸುತ್ತೇನೆ ಬಂಗಾರ ಇದೆಯೋ ಇಲ್ಲವೋ ನೋಡುತ್ತೇನೆ ಯಾರನ್ನಾದರೂ ಕರೆದರೆ ಕುತ್ತಿಗೆ ಹಿಸುಕಿ ಸಾಯಿಸುತ್ತೇನೆ) ಎಂದು ತುಳುವಿನಲ್ಲಿ ಬೆದರಿಸಿದ್ದಾರೆ.
ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬಳಿಕ ಸುರತ್ಕಲ್ ಪೊಲೀಸ್ ಉಪ ನಿರೀಕ್ಷಕ ರಘು ನಾಯ್ಕ್ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ಆರಂಭಿಸಿ, ಕಳವು ಕೃತ್ಯ ನಡೆದಿದ್ದ ಮನೆಯ ಸಮೀಪದ ಎಲ್ಲಾ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ಶೈನ್ ಎಚ್. ಪುತ್ರನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಉಡುಪಿ ಜಿಲ್ಲೆ ಕಾರ್ಕಳ ನಿವಾಸಿ ಜೈಸನ್ ಯಾನೆ ಲೆನ್ಸನ್ ಎಂಬಾತನೊಂದಿಗೆ ಸೇರಿಕೊಂಡು ಕೃತ್ಯ ಎಸಗಿದ್ದು, ಕಳವುಗೈದ ಚಿನ್ನಾಭರಣವನ್ನು ಬೆಂಗಳೂರಿನ ವಿನೋದ್ ಕುಮಾರ್‌ಗೆ ಮಾರಾಟ ಮಾಡಿರುವುದಾಗಿ ಬಾಯಿಬಿಟ್ಟಿದ್ದ.
ಇದೇ ಜಾಡು ಹಿಡಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯದಲ್ಲಿ ನೇರ ಭಾಗಿಯಾಗಿದ್ದ ಇನ್ನೋರ್ವ ಆರೋಪಿ ಜೈಸನ್ ಯಾನೆ ಲೆನ್ಸನ್ ಕಾರ್ಕಳ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
Post a Comment