ಉಡುಪಿ : ಪರ್ಯಾಯ ಪುರಪ್ರವೇಶ ಮೆರವಣಿಗೆಗೆ ಸಂಚಾರ ನಿರ್ಬಂಧ - ಮಾರ್ಗ ಬದಲಾವಣೆ
2026ರ ಜ.17 ಮತ್ತು 18ರಂದು ನಡೆಯಲಿರುವ ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಮಹೋತ್ಸವದ ಅಂಗವಾಗಿ ಪರ್ಯಾಯ ಪುರಪ್ರವೇಶ ಮೆರವಣಿಗೆ ಜ.9ರಂದು ನಡೆಯಲಿದೆ.
ಶಾರದಾ ಕಲ್ಯಾಣ ಮಂಟಪದಿಂದ ಮೆರವಣಿಗೆ ಆರಂಭವಾಗಿ, ಮಾರ್ಗ 169(ಎ) ಮೂಲಕ ಶಿರಿಬೀಡು ಜಂಕ್ಷನ್ಗೆ ತೆರಳಿ, ಅಲ್ಲಿಂದ ಸರ್ವಿಸ್ ಬಸ್ ನಿಲ್ದಾಣ - ತ್ರಿವೇಣಿ ಜಂಕ್ಷನ್ - ಕನಕದಾಸ ರಸ್ತೆ ಮೂಲಕ ಸಾಗಲಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಅನುಕೂಲತೆಯನ್ನು ಪರಿಗಣಿಸಿ, ಉಡುಪಿ ನಗರ ಪೊಲೀಸರು ಜನವರಿ 9 ರಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಚಾರ ನಿರ್ಬಂಧ ಮತ್ತು ಬದಲಾವಣೆಗಳನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸಂಚಾರ ಬದಲಾವಣೆಗಳು ಮತ್ತು ನಿರ್ಬಂಧಗಳು : ಮಣಿಪಾಲದಿಂದ ಉಡುಪಿ ನಗರಕ್ಕೆ ಹೋಗುವ ವಾಹನಗಳು ಸುನಾಗ್ ಆಸ್ಪತ್ರೆ ಬಳಿ (ಎಂಬಿಎಂ ಎದುರು) ಎಡ ತಿರುವು ಪಡೆದು, ಸುಧೀಂದ್ರ ಕಲ್ಯಾಣ ಮಂಟಪದ ಮೂಲಕ ಸಾಗಿ, ಎಸ್ಕೆಎಂ ಬಳಿ ಮತ್ತೊಂದು ಎಡ ತಿರುವು ಪಡೆದು, ಬೀಡಿನಗುಡ್ಡೆ - ಚಿತ್ತಡಿ - ಅಮ್ಮಣಿ ರಾಮಣ್ಣ ಹಾಲ್ ರಸ್ತೆ ಮೂಲಕ ಮುಂದುವರಿದು, ನಂತರ ಮಿಷನ್ ಕಾಂಪೌಂಡ್ ಜಂಕ್ಷನ್ ತಲುಪಿ ಉಡುಪಿ ನಗರ ಪ್ರವೇಶಿಸಬೇಕು.
ಮೆರವಣಿಗೆ ಪ್ರವೇಶದ ಸಮಯದಲ್ಲಿ ಶಿರಿಬೀಡು ಜಂಕ್ಷನ್ನಿಂದ ಕಿದಿಯೂರು ಹೋಟೆಲ್ ಮೂಲಕ ಸರ್ವಿಸ್ ಬಸ್ ನಿಲ್ದಾಣದವರೆಗಿನ ಏಕಮುಖ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು. ಮಂಗಳೂರು ಕಡೆಯಿಂದ ಉಡುಪಿ ನಗರ ಪ್ರವೇಶಿಸುವ ಎಲ್ಲಾ ವಾಹನಗಳು ಹಳೆ ಡಯಾನಾ ವೃತ್ತದಿಂದ ಮಿತ್ರ ಪ್ರಿಯ ಜಂಕ್ಷನ್ ಕಡೆಗೆ ತಿರುಗಿ, ಚಿತ್ರಾಂಜನ ವೃತ್ತ, ಸಂಸ್ಕೃತ ಕಾಲೇಜು ಜಂಕ್ಷನ್, ಜಾಮಿಯಾ ಮಸೀದಿ ಜಂಕ್ಷನ್ ಮೂಲಕ ಎಡ ತಿರುವು ಪಡೆದು ಸರ್ವಿಸ್ ಬಸ್ ನಿಲ್ದಾಣ ತಲುಪಬೇಕು.
ಈ ಸಂಚಾರ ನಿರ್ಬಂಧಗಳು ವಿವಿಐಪಿ ವಾಹನಗಳು, ಸರ್ಕಾರಿ ವಾಹನಗಳು ಮತ್ತು ಎಲ್ಲಾ ರೀತಿಯ ತುರ್ತು ಸೇವಾ ವಾಹನಗಳಿಗೆ ಅನ್ವಯಿಸುವುದಿಲ್ಲ. ಪರ್ಯಾಯ ಪುರಪ್ರವೇಶ ಮೆರವಣಿಗೆ ಸುಗಮವಾಗಿ ನಡೆಯುವ ಹಿತದೃಷ್ಟಿಯಿಂದ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಮತ್ತು ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
Post a Comment