ಪ್ರೀತಿಸುವಂತೆ ನಿರಂತರ ಕಿರುಕುಳ, ನೇಣಿಗೆ ಶರಣಾದ ಪಿಯುಸಿ ವಿದ್ಯಾರ್ಥಿನಿ
ಆಕೆಗೆ 17 ವರ್ಷ. ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಆದರೆ, ಆ ಹುಡುಗನಿಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಈ ಘಟನೆ ನಡೆದಿರೋದು ಮೈಸೂರು ನಂಜನಗೂಡು ಪಟ್ಟಣದ ನೀಲಕಂಠ ನಗರದಲ್ಲಿ. ದಿವ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಆದಿತ್ಯ ಎಂಬ ಯುವಕ, ದಿವ್ಯಳಿಗೆ ತನ್ನನ್ನು ಪ್ರೀತಿಸುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ದಿವ್ಯಳ ತಂದೆ ಗುರುಮೂರ್ತಿ, ಆದಿತ್ಯನನ್ನು ಕರೆದು ಕಿವಿಮಾತು ಹೇಳಿ, ಮಗಳನ್ನು ಇನ್ನು ಮುಂದೆ ಸಂಪರ್ಕಿಸಬಾರದು ಎಂದು ಎಚ್ಚರಿಕೆ ನೀಡಿದ್ದರಂತೆ. ಆದರೆ, ಆದಿತ್ಯ ಮಾತ್ರ ತನ್ನ ಚಾಳಿ ಮುಂದುವರಿಸಿದ್ದಾನೆ.
ತನ್ನನ್ನು ಪ್ರೀತಿಸುವಂತೆ ಮತ್ತೆ ಕಿರುಕುಳ ನೀಡಲಾರಂಭಿಸಿದ್ದ. ಈ ನಿರಂತರ ಮಾನಸಿಕ ಕಿರುಕುಳದಿಂದ ತೀವ್ರವಾಗಿ ನೊಂದ ದಿವ್ಯ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ, ಮೃತ ವಿದ್ಯಾರ್ಥಿನಿಯ ತಂದೆ ಗುರುಮೂರ್ತಿ ನೀಡಿದ ದೂರಿನ ಮೇರೆಗೆ, ಆದಿತ್ಯ ವಿರುದ್ಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment