ಕಿರುಕುಳಕ್ಕೆ ಬೇಸತ್ತು ಕಚೇರಿಯಲ್ಲೇ ನೇಣಿಗೆ ಶರಣಾದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ
ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿಯೊಬ್ಬರು ಕಚೇರಿಯಲ್ಲೇ ದುರಂತ ಅಂತ್ಯ ಕಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ.
ಮೃತ ಅಧಿಕಾರಿಯನ್ನು ಮಲ್ಲಿಕಾರ್ಜುನ್ ಎಂದು ಗುರುತಿಸಲಾಗಿದ್ದು, ಇವರು ಪಾವಗಡದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮರಣಕ್ಕೂ ಮುನ್ನ ಚಿತ್ರೀಕರಿಸಿರುವ ವಿಡಿಯೋವೊಂದರಲ್ಲಿ, ಇಲಾಖೆಯ ಮೇಲಧಿಕಾರಿ ಕೃಷ್ಣಪ್ಪ ಎಂಬವರ ಕಿರುಕುಳ ತಾಳಲಾರದೇ ಈ ನಿರ್ಧಾರ ಮಾಡಿರುವುದಾಗಿ ಮಲ್ಲಿಕಾರ್ಜುನ ಆರೋಪಿಸಿದ್ದಾರೆ. ನಮ್ಮ ತಾಯಿ ಹೆಂಡತಿ ಮಕ್ಕಳು ನಮ್ಮ ಇಡೀ ಸಂಸಾರ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ನನಗೆ ಒಳ್ಳೆಯ ಬೆಲೆ ಕೊಟ್ಟಿದ್ದಾರೆ. ನಾನು ಅವರಿಗೆ ಇನ್ನು ಸಹಾಯ ಮಾಡಬೇಕಿತ್ತು ಆದ್ರೆ ಆಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ನನಗೆ ತೊಂದರೆ ಕೊಟ್ಟಿರುವುದರಿಂದ ನಾನು ಈ ನಿರ್ಧಾರಕ್ಕೆ ಬಂದಿರುವೆ. ಅವರಿಗೆ ದೇವರೇ ಶಿಕ್ಷೆ ನೀಡುತ್ತಾನೆ. ಅವನು ತರ್ಲೆ ಇರುವುದರಿಂದ ನಮ್ಮ ಕುಟುಂಬದವರು ಏನು ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲಾ. ಅವನಿಗೆ ದೇವರು, ಕಾನೂನು ಶಿಕ್ಷೆ ಕೊಟ್ಟೆ ಕೊಡುತ್ತದೆ ಎಂದು ವೀಡಿಯೋದಲ್ಲಿ ಉಲ್ಲೇಖಿಸಿದ್ದಾರೆ.
ಸಾವಿಗೂ ಮುನ್ನ ಮಾಡಿರುವ ಕೊನೆಯ ವಿಡಿಯೋವನ್ನು ಸ್ವತಃ ಮಲ್ಲಿಕಾರ್ಜುನ ಇತರ ಸಹೋದ್ಯೋಗಿಗಳಿಗೆ ಕಳುಹಿಸಿದ್ದಾರೆ. ಇವರು ಮಾರ್ಚ್ 31ರಂದು ಸೇವೆಯಿಂದ ನಿವೃತ್ತರಾಗಬೇಕಿತ್ತು. ನಿವೃತ್ತಿಯ ಕೆಲವೇ ದಿನಗಳ ಮೊದಲು ಈ ಘಟನೆ ಸಂಭವಿಸಿರುವುದು ವಿಷಾದನೀಯ ವಾಗಿದೆ.

Post a Comment