ಸುಳ್ಯ: ಸಂಚಾರ ಜಾಗೃತಿ ಶಿಕ್ಷೆಗೆ ಗುರಿಯಾಗಿದ್ದ ಯುವಕ ಆತ್ಮಹತ್ಯೆಗೆ ಯತ್ನ; ವಿಡಿಯೋ ವೈರಲ್ ಆದ ಬೆನ್ನಲ್ಲೇ ಮನನೊಂದು ವಿಷ ಸೇವನೆ!
ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಲಯದಿಂದ 15 ದಿನಗಳ ಕಾಲ ‘ಸಮುದಾಯ ಸೇವೆ’ಯ ಶಿಕ್ಷೆಗೆ ಒಳಗಾಗಿದ್ದ ಸುಳ್ಯ ನಿವಾಸಿ ರಕ್ಷಿತ್ ಜಿ. (29) ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಸುಳ್ಯದ ಜೆಎಂಎಫ್‌ಸಿ ನ್ಯಾಯಾಲಯವು ರಕ್ಷಿತ್‌ಗೆ 15 ದಿನಗಳ ಕಾಲ ಸಾರ್ವಜನಿಕವಾಗಿ ಸಂಚಾರ ನಿಯಮಗಳ ಅರಿವು ಮೂಡಿಸುವ ಶಿಕ್ಷೆ ವಿಧಿಸಿತ್ತು. ಅದರಂತೆ ಮಾರ್ಚ್ 15 ರಂದು ರಕ್ಷಿತ್ ಸುಳ್ಯ ಪೇಟೆಯ ಜಂಕ್ಷನ್‌ನಲ್ಲಿ ನಿಂತು ಟ್ರಾಫಿಕ್ ರೂಲ್ಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಿರ್ವಹಿಸಿದ್ದರು.
ರಕ್ಷಿತ್ ರಸ್ತೆಯಲ್ಲಿ ಬೋರ್ಡ್ ಹಿಡಿದು ನಿಂತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗಿದ್ದವು. ಸಮಾಜ ಸೇವೆಯ ರೂಪದಲ್ಲಿದ್ದ ಈ ಶಿಕ್ಷೆಯ ವಿಚಾರ ಇಂಟರ್ನೆಟ್‌ನಲ್ಲಿ ಚರ್ಚೆಗೆ ಗ್ರಾಸವಾದದ್ದನ್ನು ಕಂಡು ರಕ್ಷಿತ್ ತೀವ್ರ ಬೇಸರಗೊಂಡಿದ್ದರು. ಇದರಿಂದ ಮಾನಸಿಕವಾಗಿ ನೊಂದ ಅವರು ಮನೆಯಲ್ಲಿ ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದಾರೆ. ತಕ್ಷಣವೇ ಗಮನಿಸಿದ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Post a Comment