ಲಂಡನ್ ಗೆಳತಿಯ ಹೆಸರಲ್ಲಿ ವಂಚನೆ: ಉಡುಪಿಯ ಶೆಫ್‌ಗೆ ₹1.13 ಲಕ್ಷ ನಾಮ!
ವಾಟ್ಸಾಪ್ ಮೂಲಕ ಪರಿಚಯವಾದ ಲಂಡನ್ ಮೂಲದ ಮಹಿಳೆಯೊಬ್ಬಳು ಉಡುಪಿ ಕುತ್ಪಾಡಿಯ ಹಿರಿಯ ನಾಗರಿಕರೊಬ್ಬರಿಗೆ ಅತಿಥಿಯಾಗಿ ಬರುವುದಾಗಿ ನಂಬಿಸಿ, ವಿವಿಧ ಹಂತಗಳಲ್ಲಿ ₹1,13,300 ಹಣವನ್ನು ವಂಚಿಸಿರುವ ಘಟನೆ ನಡೆದಿದೆ.ಕುತ್ಪಾಡಿಯ ಪಾಂಡು ಕರಿಯಪ್ಪ ಪೂಜಾರಿ (62) ಅವರಿಗೆ ‘ಏಮಿಲ್ಡಾ ವಿಲಿಯಂ’ ಎಂಬ ಹೆಸರಿನಿಂದ ವಾಟ್ಸಾಪ್ ಸಂದೇಶ ಬಂದಿತ್ತು. ತಾನು ಲಂಡನ್ ನಿವಾಸಿಯಾಗಿದ್ದು, ಮಂಗಳೂರಿಗೆ ಬಂದು ಕಾಸ್ಮೆಟಿಕ್ ಮತ್ತು ಹೋಟೆಲ್ ಉದ್ಯಮ ಮಾಡುವುದಾಗಿ ಈಕೆ ನಂಬಿಸಿದ್ದಳು. ಏಪ್ರಿಲ್ 7ರಂದು ದೆಹಲಿಗೆ ಬರುವ ವಿಮಾನದ ಟಿಕೆಟ್‌ನ್ನು ಕೂಡ ಪಾಂಡು ಅವರಿಗೆ ಕಳುಹಿಸಿದ್ದಳು.ಏಪ್ರಿಲ್ 8ರಂದು ಅಪರಿಚಿತ ಮಹಿಳೆಯೊಬ್ಬರು ಕರೆ ಮಾಡಿ, “ನಿಮ್ಮ ಸ್ನೇಹಿತೆ ಏಮಿಲ್ಡಾ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರ ಬಳಿ ₹5 ಕೋಟಿಯ ಡಿ.ಡಿ ಮತ್ತು ಅಧಿಕ ಬೆಲೆಬಾಳುವ ವಸ್ತುಗಳಿವೆ. ಇದನ್ನು ಬಿಡಿಸಿಕೊಳ್ಳಲು ಕೂಡಲೇ ₹70,000 ಹಣ ಪಾವತಿಸಿ” ಎಂದು ತಿಳಿಸಿದ್ದರು. ನಂತರ ಏಮಿಲ್ಡಾ ಕೂಡ ಅಳುತ್ತಾ ಮಾತನಾಡಿದಾಗ, ಪಾಂಡು ಅವರು ಸ್ಕ್ಯಾನರ್ ಮೂಲಕ ವಿವಿಧ ಹಂತಗಳಲ್ಲಿ ಒಟ್ಟು ₹1,13,300 ಹಣವನ್ನು ವರ್ಗಾವಣೆ ಮಾಡಿದ್ದಾರೆ. ತಾನು ವಂಚನೆಗೆ ಒಳಗಾಗಿರುವುದು ತಿಳಿಯುತ್ತಿದ್ದಂತೆಯೇ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಬಿಎನ್‌ಎಸ್ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Post a Comment