ಕಾರ್ಕಳ ಪಳ್ಳಿ: ಹಿಟ್ ಆ್ಯಂಡ್ ರನ್: ಬೈಕ್‌ಗೆ ಕಾರು ಡಿಕ್ಕಿ, ಸವಾರನಿಗೆ ಗಂಭೀರ ಗಾಯ..
ಪಳ್ಳಿ ವೈಶಾಲಿ ಬಾರ್ ಎದುರು ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮೇ 26ರಂದು ಸಂಜೆ 6:50ರ ಸುಮಾರಿಗೆ ಮೂಡುಬೆಳ್ಳೆಯ ನಾಗೇಶ್ ಆಚಾರ್ಯ (34) ಅವರು ತಮ್ಮ ಬೈಕ್ ನಲ್ಲಿ ಪಳ್ಳಿ ಕಡೆಯಿಂದ ಮೂಡುಬೆಳ್ಳೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಪಳ್ಳಿ ಗ್ರಾಮದ ವೈಶಾಲಿ ಬಾರ್ ಎದುರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೇ ಏಕಾಏಕಿ ಬಲಗಡೆಗೆ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದಾನೆ ಎನ್ನಲಾಗಿದೆ.
ಇದರಿಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ನಾಗೇಶ್ ಆಚಾರ್ಯ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಅಪಘಾತದ ಪರಿಣಾಮ ಬೈಕ್ ಹ್ಯಾಂಡಲ್ ಹೊಟ್ಟೆಗೆ ತಾಗಿ ಗಾಯವಾಗಿದ್ದು, ಕಿರು ಬೆರಳಿಗೆ ಜಜ್ಜಿದ ಗಾಯ ಹಾಗೂ ಎಡ ಕಾಲಿಗೆ ತರಚಿದ ಗಾಯಗಳಾಗಿವೆ. ಬೈಕ್ ಕೂಡ ಜಖಂಗೊಂಡಿದೆ.
ಗಾಯಾಳುವನ್ನು ಮೊದಲಿಗೆ ಉಡುಪಿಯ ಟಿ.ಎಂ.ಎ ಪೈ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೆ ಕಾರಣವಾದ ಕಾರು ಚಾಲಕನು ವಾಹನವನ್ನು ನಿಲ್ಲಿಸದೇ, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯದೇ ಹಾಗೂ ಪೊಲೀಸರಿಗೆ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment