ಉಡುಪಿ:- ಕೆಮ್ಮಣ್ಣು ಸಮೀಪ ಬಾವಿಗೆ ಬಿದ್ದ ದಂಪತಿ
ಕೆಮ್ಮಣ್ಣು ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪ ಆಕಸ್ಮಿಕವಾಗಿ ಬಾವಿಗೆ ಬಿದ್ದ ದಂಪತಿಯನ್ನು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸಮಯೋಚಿತವಾಗಿ ರಕ್ಷಿಸಿದ ಘಟನೆ ಬುಧವಾರ ನಡೆದಿದೆ.ಕೆಮ್ಮಣ್ಣು ನಿವಾಸಿಗಳಾದ ಗೋಪಾಲಕೃಷ್ಣ (65) ಹಾಗೂ ಅವರ ಪತ್ನಿ ಶ್ಯಾಮಲಾ (60) ರಕ್ಷಿಸಲ್ಪಟ್ಟವರು. ಶ್ಯಾಮಲಾ ಅವರು ಮನೆ ಸಮೀಪದ ಬಾವಿಯ ಬಳಿ ತೆರಳಿದ್ದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಪತಿ ಗೋಪಾಲಕೃಷ್ಣ ಅವರು ಪತ್ನಿಯನ್ನು ರಕ್ಷಿಸುವ ಉದ್ದೇಶದಿಂದ ಬಾವಿಗೆ ಹಾರಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಈಶ್ವರ ಮಲ್ಪೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹಗ್ಗದ ಸಹಾಯದಿಂದ ಬಾವಿಯೊಳಗೆ ಸಿಲುಕಿದ್ದ ದಂಪತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.
ಬಾವಿಗೆ ಬಿದ್ದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ದಂಪತಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಸ್ಥಳೀಯರ ತ್ವರಿತ ಮಾಹಿತಿ ಮತ್ತು ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

Post a Comment