ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ-ಹುಕ್ಕಾ: ಮಣಿಪಾಲದ 6 ಬಾರ್ ಗಳ ಮೇಲೆ ಪೊಲೀಸ್ ದಾಳಿ, ಪ್ರಕರಣ ದಾಖಲು
ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ಮಾರಾಟ ಮಾಡುವುದು ಹಾಗೂ ಹುಕ್ಕಾ ಸೇವನೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ನಗರದ ವಿವಿಧ ಸಿಎಲ್-7 (CL-7) ಬಾರ್ ಹಾಗೂ ಪಬ್ಗಳ ಮೇಲೆ ಶನಿವಾರ ರಾತ್ರಿ ಏಕಕಾಲದಲ್ಲಿ ದಾಳಿ ನಡೆಸಿದ್ದು, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ 99 ವಿದ್ಯಾರ್ಥಿಗಳು ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಓರ್ವ ಬಾಲಕ ಪತ್ತೆಯಾಗಿದ್ದಾರೆ. ಈ ಸಂಬಂಧ ಒಟ್ಟು ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಿಎಲ್-7 ಬಾರ್ ಹಾಗೂ ಪಬ್ಗಳಲ್ಲಿ ರಾತ್ರಿ ವೇಳೆ ವಿದ್ಯಾರ್ಥಿಗಳಿಗೆ ಹುಕ್ಕಾ ಸೇವನೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದು ಕೋಟ್ಪಾ ಕಾಯ್ದೆಯ ಕಲಂ 4(ಎ), 21(ಎ) ಉಲ್ಲಂಘನೆಯಾಗಿದ್ದು, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವ ಮೂಲಕ ಕರ್ನಾಟಕ ಅಬಕಾರಿ ಲೈಸೆನ್ಸ್ ನಿಯಮಾವಳಿ ಹಾಗೂ ಕರ್ನಾಟಕ ಅಬಕಾರಿ ಅಧಿನಿಯಮ-1967ರ ಕಲಂ 36(1)(ಬಿ) ಉಲ್ಲಂಘಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಈ ಹಿನ್ನೆಲೆಯಲ್ಲಿ ಉಡುಪಿ ಎರಡನೇ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಅನುಮತಿ ಪಡೆದು ವಿವಿಧ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಮೊದಲ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನಿರೀಕ್ಷಕ ಶಂಭುಲಿಂಗಯ್ಯ ಎಂ.ಇ. ನೇತೃತ್ವದ ತಂಡವು ಪೆರಂಪಳ್ಳಿ ರಸ್ತೆಯಲ್ಲಿರುವ Ecstasy 7th Heaven Pub ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ, ಅಲ್ಲಿ ಮೂರು ಯುವಕರು ಹಾಗೂ ಮೂರು ಯುವತಿಯರು, ಒಟ್ಟು ಆರು ಮಂದಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪತ್ತೆಯಾಗಿದ್ದಾರೆ. ಅಲ್ಲದೆ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರವೇಶ ನಿಷೇಧಿಸಿರುವ ಕುರಿತು ಕಡ್ಡಾಯ ಸೂಚನಾ ಫಲಕವೂ ಇರಲಿಲ್ಲ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 114/2026 ದಾಖಲಿಸಲಾಗಿದೆ.
ಇದೇ ವೇಳೆ ಪೊಲೀಸ್ ಉಪನಿರೀಕ್ಷಕ ತಿಮ್ಮೇಶ್ ಬಿ.ಎನ್. ನೇತೃತ್ವದ ತಂಡ ಈಶ್ವರನಗರದ Sai Sagar CL-7 Bar & Restaurant ಮೇಲೆ ದಾಳಿ ನಡೆಸಿದ್ದು, ಅಲ್ಲಿ 12 ಯುವಕರು ಹಾಗೂ ಇಬ್ಬರು ಯುವತಿಯರು, ಒಟ್ಟು 14 ಮಂದಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವುದು ಪತ್ತೆಯಾಗಿದೆ. ಇಲ್ಲಿ ಕೂಡ ಸೂಚನಾ ಫಲಕ ಇರಲಿಲ್ಲ. ಈ ಸಂಬಂಧ ಅಪರಾಧ ಸಂಖ್ಯೆ 115/2026 ದಾಖಲಾಗಿದೆ.
ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶ್ರೀಶೈಲ ಡಿ.ಎಂ. ನೇತೃತ್ವದ ತಂಡ Down The Road CL-7 Bar & Restaurant ಮೇಲೆ ದಾಳಿ ನಡೆಸಿದ ವೇಳೆ 14 ಯುವಕರು ಹಾಗೂ ಐದು ಯುವತಿಯರು, ಒಟ್ಟು 19 ಮಂದಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಈ ಸಂಬಂಧ ಅಪರಾಧ ಸಂಖ್ಯೆ 116/2026 ದಾಖಲಾಗಿದೆ.
ಅದೇ ತಂಡ ನಂತರ Dexter Bar & Restaurant ಮೇಲೆ ದಾಳಿ ನಡೆಸಿದಾಗ 21 ಮಂದಿ ಬಾಲಕ-ಬಾಲಕಿಯರು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವುದು ಬೆಳಕಿಗೆ ಬಂದಿದೆ. ಬಾರ್ನಲ್ಲಿ ಕಡ್ಡಾಯ ಸೂಚನಾ ಫಲಕವೂ ಇರಲಿಲ್ಲ. ಈ ಸಂಬಂಧ ಅಪರಾಧ ಸಂಖ್ಯೆ 117/2026 ದಾಖಲಿಸಲಾಗಿದೆ.
ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ಡಿ. ನೇತೃತ್ವದ ತಂಡ D.T. Bar & Restaurant ಮೇಲೆ ದಾಳಿ ನಡೆಸಿದ್ದು, ಅಲ್ಲಿ ಏಳು ಮಂದಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಈ ಸಂಬಂಧ ಅಪರಾಧ ಸಂಖ್ಯೆ 118/2026 ದಾಖಲಾಗಿದೆ.
ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪುನೀತ್ ಕುಮಾರ್ ಬಿ.ಇ. ನೇತೃತ್ವದ ತಂಡ Janani Bar & Restaurant ಮೇಲೆ ದಾಳಿ ನಡೆಸಿದ ವೇಳೆ 17 ಮಂದಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳು ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಓರ್ವ ಬಾಲಕ ಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಜುವೆನೈಲ್ ಜಸ್ಟಿಸ್ (ಜೆಜೆ) ಕಾಯ್ದೆಯ ಕಲಂ 77 ಹಾಗೂ ಕರ್ನಾಟಕ ಅಬಕಾರಿ ಅಧಿನಿಯಮ-1967ರ ಕಲಂ 36(1)(ಬಿ) ಅಡಿಯಲ್ಲಿ ಅಪರಾಧ ಸಂಖ್ಯೆ 119/2026 ದಾಖಲಿಸಲಾಗಿದೆ.
ಒಟ್ಟಾರೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಆರು ಬಾರ್ ಹಾಗೂ ಪಬ್ಗಳಿಂದ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ 99 ವಿದ್ಯಾರ್ಥಿಗಳು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಓರ್ವ ಬಾಲಕ ಪತ್ತೆಯಾಗಿದ್ದಾರೆ. ಎಲ್ಲ ಬಾರ್ಗಳಲ್ಲಿಯೂ ಕಾನೂನು ಪ್ರಕಾರ ಪ್ರದರ್ಶಿಸಬೇಕಾದ ವಯೋಮಿತಿ ಸೂಚನಾ ಫಲಕಗಳು ಇರದಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಒಟ್ಟು ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಬಾರ್ ಮಾಲೀಕರು ಹಾಗೂ ಸಂಬಂಧಪಟ್ಟವರ ವಿರುದ್ಧ ಕರ್ನಾಟಕ ಅಬಕಾರಿ ಅಧಿನಿಯಮ-1967, ಕರ್ನಾಟಕ ಅಬಕಾರಿ ಲೈಸೆನ್ಸ್ ನಿಯಮಾವಳಿ, ಕೋಟ್ಪಾ ಕಾಯ್ದೆ ಹಾಗೂ ಅನ್ವಯವಾಗುವ ಇತರ ಕಾನೂನುಗಳಡಿ ಮುಂದಿನ ತನಿಖೆ ಮುಂದುವರಿದಿದೆ.

Post a Comment