ಮಣಿಪಾಲ: ಕೆಫೆಯಲ್ಲಿ ಹುಕ್ಕಾ ಸೇವನೆ: 8 ಮಂದಿಯ ವಿರುದ್ಧ ಪ್ರಕರಣ ದಾಖಲು
ಮಣಿಪಾಲ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ವಿದ್ಯಾರತ್ನನಗರದಲ್ಲಿರುವ ಐರಿಸ್ ಪ್ಲಾಜಾ ಕಟ್ಟಡದ ಮೊದಲ ಮಹಡಿಯ DRNK LAB ಕೆಫೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ನಿಷೇಧಿತ ಹುಕ್ಕಾ ಸೇವನೆ ಮಾಡುತ್ತಿದ್ದ 8 ಮಂದಿ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ಡಾರೆ.
ಅಕ್ರಮವಾಗಿ ಹುಕ್ಕಾ ಸೇವನೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿ, ಹುಕ್ಕಾ ಉಪಕರಣಗಳು ಹಾಗೂ ತಂಬಾಕು ಫ್ಲೇವರ್ ಪ್ಯಾಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆಗಸ್ಟ್ 6ರಂದು ರಾತ್ರಿ ಸುಮಾರು 9.35ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಡೆದ ಕಾರ್ಯಾಚರಣೆ ವೇಳೆ ಎರಡು ಪ್ರತ್ಯೇಕ ಕ್ಯಾಬಿನ್‌ಗಳಲ್ಲಿ ಒಟ್ಟು 8 ಮಂದಿ ಹುಕ್ಕಾ ಸೇವಿಸುತ್ತಿರುವುದು ಪತ್ತೆಯಾಗಿದೆ.
ಸ್ಥಳದಿಂದ ಮೂರು ಹುಕ್ಕಾ ಸೆಟ್‌ಗಳು, ತಂಬಾಕು ಮಿಶ್ರಿತ ಹುಕ್ಕಾ ಫ್ಲೇವರ್ ಪ್ಯಾಕ್‌ಗಳು ಸೇರಿದಂತೆ ಒಟ್ಟು ಸುಮಾರು 4,000 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹುಕ್ಕಾ ಸೇವನೆಗಾಗಿ ಕೆಲವರು ಆನ್‌ಲೈನ್ ಮೂಲಕ ಹಣ ಪಾವತಿಸಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್ ಅವರ ನಿರ್ದೇಶನದಂತೆ ಮಣಿಪಾಲ ಠಾಣಾ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಎಎಸ್ಐ ವಾಮನ, ಸುರೇಶ್ ಶೆಟ್ಟಿ, ಚೇತನ್, ರವಿರಾಜ್, ಉಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಅಕ್ರಮ ಹುಕ್ಕಾ ಸೇವನೆ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Post a Comment