ಲೋಕಸಭೆಯಲ್ಲಿ ಬಿಲ್ ಪಾಸ್, UPI ಗೂ ಶುಲ್ಕ ಫಿಕ್ಸ್
ಲೋಕಸಭೆಯಲ್ಲಿ ಮಹತ್ವದ ಮಸೂದೆ ಅಂಗೀಕಾರವಾಗಿದ್ದು, UPI ಮೇಲೂ ಶುಲ್ಕ ವಿಧಿಸಲು ಕೇಂದ್ರಕ್ಕೆ ಅಧಿಕಾರ ಇದೆ. ಈಗ ಇದು ಯಾರಿಗೆಲ್ಲಾ ಪರಿಣಾಮ ಬೀರುತ್ತೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿರುವ UPI ಪಾವತಿಗಳಿಗೆ ಭವಿಷ್ಯದಲ್ಲಿ ಶುಲ್ಕ ಬೀಳುವ ಸಾಧ್ಯತೆ ಇದೆ. ಆಯ್ದ ಡಿಜಿಟಲ್ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸಲು ಬ್ಯಾಂಕುಗಳು ಮತ್ತು ಪೇಮೆಂಟ್ ಸರ್ವಿಸ್ ಕಂಪನಿಗಳಿಗೆ ಅಧಿಕಾರ ನೀಡುವ ತಿದ್ದುಪಡಿ ಮಸೂದೆಗೆ ಲೋಕಸಭೆಯು ಗುರುವಾರ ಅನುಮೋದನೆ ನೀಡಿದೆ.
ಡಿಜಿಟಲ್ ಪಾವತಿಗಳ ಮೇಲೆ MDR ಶುಲ್ಕ ವಿಧಿಸುವುದನ್ನು ತಡೆಯುತ್ತಿದ್ದ ಹಳೆಯ ನಿಯಮಗಳನ್ನು ತೆಗೆದುಹಾಕುವ ಪ್ರಸ್ತಾವನೆಯನ್ನು ಕೇಂದ್ರವು ಮಂಡಿಸಿದೆ. ಈ ಪ್ರಸ್ತಾವನೆಗೆ ಸದನದಲ್ಲಿ ಯಾವುದೇ ಚರ್ಚೆಯೂ ಇಲ್ಲದೇ ಅನುಮೋದನೆ ಸಿಕ್ಕಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿದ ‘ತೆರಿಗೆ ಮತ್ತು ಇತರ ಕಾನೂನುಗಳು (ತಿದ್ದುಪಡಿ) ಮಸೂದೆ, 2026’ರ ಭಾಗವಾಗಿ ‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ-2007’, ‘ಆದಾಯ ತೆರಿಗೆ ಕಾಯ್ದೆ-2025’ ಮತ್ತು ‘ಹಣಕಾಸು ಕಾಯ್ದೆ-2026’ಗಳನ್ನು ಸರ್ಕಾರ ತಿದ್ದುಪಡಿ ಮಾಡಿದೆ.
ಹೊಸ ನಿಯಮಗಳು: ಪ್ರಸ್ತುತ ‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ-2007’ರ ಸೆಕ್ಷನ್ 10A ಪ್ರಕಾರ ಎಲೆಕ್ಟ್ರಾನಿಕ್ ವಹಿವಾಟುಗಳ ಮೇಲೆ ಬ್ಯಾಂಕುಗಳು ಮತ್ತು ಸಿಸ್ಟಮ್ ಪೂರೈಕೆದಾರರು ಶುಲ್ಕ ವಿಧಿಸಲು ಅವಕಾಶವಿರಲಿಲ್ಲ. ಆದಾಯ ತೆರಿಗೆ ಕಾಯ್ದೆ - 1961ರ ಸೆಕ್ಷನ್ 269SU ಪ್ರಕಾರ ವರ್ಷಕ್ಕೆ 50 ಕೋಟಿ ರೂ. ಗಿಂತ ಹೆಚ್ಚು ಟರ್ನೋವರ್ ಹೊಂದಿರುವ ದೊಡ್ಡ ವ್ಯಾಪಾರ ಸಂಸ್ಥೆಗಳು RuPay ಡೆಬಿಟ್ ಕಾರ್ಡ್ ಮತ್ತು BHIM-UPI QR ಕೋಡ್ ಮೂಲಕ ಗ್ರಾಹಕರ ವಹಿವಾಟುಗಳನ್ನು ಉಚಿತವಾಗಿಯೇ ಸ್ವೀಕರಿಸಬೇಕು.
ಈಗಿನ ಹೊಸ ತಿದ್ದುಪಡಿ ಮಸೂದೆಯ ಮೂಲಕ ಸೆಕ್ಷನ್ 10A ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಬ್ಯಾಂಕುಗಳು ಮತ್ತು ಸೇವೆ ನೀಡುವ IT ಮೂಲಸೌಕರ್ಯ ಕಂಪನಿಗಳು ನಿಗದಿತ ಶುಲ್ಕ ವಸೂಲಿ ಮಾಡಬಹುದು. ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆ ದೀರ್ಘಕಾಲ ನಡೆಯಬೇಕಾದರೆ ಬ್ಯಾಂಕುಗಳು ಮತ್ತು ಪೇಮೆಂಟ್ ಸರ್ವಿಸ್ ಪ್ರೊವೈಡರ್ಗಳಿಗೆ ಸ್ಥಿರ ಆದಾಯ ಅಗತ್ಯ ಎಂಬ ಉದ್ದೇಶದಿಂದ ಸರ್ಕಾರ ಈ ಹೆಜ್ಜೆ ಇಟ್ಟಿದೆ.
ವ್ಯಾಪಾರಿಗಳಿಗೆ ಭಾರ: ಡಿಜಿಟಲ್ ವಹಿವಾಟುಗಳ ಮೇಲೆ ವಿಧಿಸುವ MDR ಗ್ರಾಹಕರಿಗೆ ಅಲ್ಲ, ವ್ಯಾಪಾರಿಗಳಿಗೆ ಮಾತ್ರ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Xನಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬರುವ ಆದಾಯವನ್ನು ಬ್ಯಾಂಕುಗಳು/ಫಿನ್ಟೆಕ್ ಕಂಪನಿಗಳು ಮೂಲಸೌಕರ್ಯ ವಿಸ್ತರಣೆ, ತಾಂತ್ರಿಕ ನಾವೀನ್ಯತೆ ಮತ್ತು ಭದ್ರತೆಗೆ ಹೂಡಿಕೆ ಮಾಡಲು ಬಳಸುತ್ತವೆ ಎಂದು ಹೇಳಿದ್ದಾರೆ. NPCI ಅಡಿಯ UPI & Services Steering Committee ಇನ್ನೂ MDR ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.
2000 ರೂ. ಒಳಗಿನ ವಹಿವಾಟು ಫ್ರೀ:2,000 ರೂ. ಒಳಗಿನ ವಹಿವಾಟುಗಳಿಗೆ MDRನಿಂದ ಸಂಪೂರ್ಣ ವಿನಾಯಿತಿ ಇದೆ. UPI ವಹಿವಾಟುಗಳಲ್ಲಿ 95% ಇವುಗಳೇ ಆಗಿರುವುದರಿಂದ ಸಾಮಾನ್ಯರಿಗೆ ತೊಂದರೆಯಿಲ್ಲ.
P2P ವಹಿವಾಟು ಫ್ರೀ:ಒಬ್ಬ ವ್ಯಕ್ತಿ ತನ್ನ ಕುಟುಂಬ ಸದಸ್ಯರು ಅಥವಾ ಸ್ನೇಹಿತರ ಬ್ಯಾಂಕ್ ಖಾತೆಗೆ UPI ಮೂಲಕ ಕಳುಹಿಸುವ ವೈಯಕ್ತಿಕ ಹಣ ವರ್ಗಾವಣೆಗೆ ಶುಲ್ಕ ಅನ್ವಯಿಸುವುದಿಲ್ಲ.
ದೊಡ್ಡ ವ್ಯಾಪಾರಿಗಳಿಗೆ ಮಾತ್ರ:1.5 ಕೋಟಿ ರೂ. ಗಿಂತ ಹೆಚ್ಚು ವಾರ್ಷಿಕ ಟರ್ನೋವರ್ ಹೊಂದಿರುವ ಶಾಪಿಂಗ್ ಮಾಲ್, ಕಾರ್ಪೊರೇಟ್ ಸೂಪರ್ ಮಾರ್ಕೆಟ್, ಲಕ್ಸುರಿ ಹೋಟೆಲ್ಗಳಲ್ಲಿ 2,000 ರೂ. ಗಿಂತ ಹೆಚ್ಚಿನ ಮೌಲ್ಯದ ಪಾವತಿಗಳ ಮೇಲಷ್ಟೇ MDR ವಿಧಿಸುವ ಸಾಧ್ಯತೆ ಇದೆ.
ಪ್ರಸ್ತುತ ಚರ್ಚೆಯಲ್ಲಿರುವ ಪ್ರಸ್ತಾವನೆಯ ಪ್ರಕಾರ ದೊಡ್ಡ ವ್ಯಾಪಾರ ವಹಿವಾಟುಗಳ ಮೇಲೆ 0.3-0.5% ವರೆಗೆ (10,000 ರೂ. ಗೆ 30-50 ರೂ.) MDR ವಿಧಿಸಬಹುದು. ಈ ಶುಲ್ಕವನ್ನು ವ್ಯಾಪಾರ ಸಂಸ್ಥೆಗಳೇ ತಮ್ಮ ಬ್ಯಾಂಕ್ಗಳಿಗೆ ಪಾವತಿಸಬೇಕು. ದೊಡ್ಡ ವ್ಯಾಪಾರಿಗಳು ತಮ್ಮ ಲಾಭದ ಪ್ರಮಾಣ ಉಳಿಸಿಕೊಳ್ಳಲು ಪರೋಕ್ಷವಾಗಿ ವಸ್ತುಗಳ ಬೆಲೆಯನ್ನು ಸ್ವಲ್ಪ ಏರಿಸುವ ಸಾಧ್ಯತೆಯೂ ಇದೆ.

Post a Comment