ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ 58 ನೇ ವರ್ಷದ ನವರಾತ್ರಿ ಮಹೋತ್ಸವ
ವರದಿ : ಇನ್ನಂಜೆ ಜಯರಾಮ್.
ಮುಂಬಯಿ ಪರಿಸರದಲ್ಲಿ ಮಿನಿ ತುಳುನಾಡು ಎಂದೇ ಪ್ರಸಿದ್ಧಿ ಪಡೆದಿರುವ ಡೊಂಬಿವಲಿಯ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ 58 ನೇ ವರ್ಷದ ನವರಾತ್ರಿ ಮಹೋತ್ಸವವು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರ ವರಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಶ್ರದ್ಧಾಭಕ್ತಿ, ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರತಿ ದಿನ ಬೆಳಿಗ್ಗೆ ಹಾಗೂ ಸಾಯಂಕಾಲ ವಿವಿಧ ಭಜನ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು.
ಪ್ರತಿದಿನ ಬೆಳಿಗ್ಗೆ ತುಲಬಾರ ಸೇವೆ ನಡೆಯಿತು.
ಸೆಪ್ಟೆಂಬರ್ 30 ರಂದು ಮಹಿಳಾ ವಿಭಾಗದವರಿಂದ ಹಳದಿ ಕುಂಕುಮ ನಡೆಯಿತು.
ಈ ನವರಾತ್ರೋತ್ಸವದ ಸಂದರ್ಭದಲ್ಲಿ ವಿವಿಧ ಸಂಸ್ಥೆಯವರು ಶ್ರೀ ದೇವಿಗೆ ಹೊರೆಕಾಣಿಕೆ ಸಮರ್ಪಿಸಿದರು.
ಪ್ರತಿ ದಿನ ಮದ್ಯಾಹ್ನ ಹಾಗೂ ರಾತ್ರಿ ಮಹಾಪೂಜೆ ನಡೆದು ದೇವಿಗೆ ಮಹಾ ಮಂಗಳಾರತಿ ಬೆಳಗಲಾಯಿತು.
ಅಕ್ಟೋಬರ್ 2 ಮತ್ತು 3 ರಂದು ಶ್ರೀ ದೇವಿಗೆ ರಂಗ ಪೂಜೆ ನಡೆಯಿತು.
ಪ್ರತಿ ದಿನ ಮದ್ಯಾಹ್ನ ಹಾಗೂ ರಾತ್ರಿ ಪಲ್ಲಪೂಜೆ ನಡೆದು, ತೀರ್ಥ ಪ್ರಸಾದ ಮಹಾಪ್ರಸಾದ ನೆರವೇರಿತು. ಸಾವಿರಾರು ಭಕ್ತರು ಅನ್ನಸಂತರ್ಪಣೆ ಯಲ್ಲಿ ಪಾಲ್ಗೊಂಡರು.
ನವರಾತ್ರಿಯ ಪ್ರಯುಕ್ತ ಆಕ್ಟೋಬರ್ 4 ರಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಹಾಗೂ ನುರಿತ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
ಮಧ್ಯಂತರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಂಡಳಿಯ ಧರ್ಮದರ್ಶಿ ಅಶೋಕ್ ಡಿ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಘಟಕೋಪರ್ ಅಸಲ್ಪದ ಶ್ರೀ ಗೀತಾಂಬಿಕ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದರಾದ ಕೆಮ್ರಾಲ್ ನಾಗಪ್ಪ ಶ್ಯಾಮ ಶೆಟ್ಟಿ ಹಾಗೂ ನಗರದ ಪ್ರಸಿದ್ಧ ಭಜನ ಗಾಯಕ, ಖ್ಯಾತ ಶನಿಕಥಾ ಅರ್ಥಧಾರಿ, ಯಾಕ್ಷರಂಗದ ಬಹುಮುಖ ಪ್ರತಿಭಾ ಸಂಪನ್ನರಾದ ತೆಂಕ ಎರ್ಮಾಳು ನಾಗೇಶ್ ಎಸ್ ಸುವರ್ಣ ರವರಿಗೆ ನವರಾತ್ರೋತ್ಸವ ಮಂಡಳಿಯ ಸಂಸ್ಥಾಪಕರಾದ ಇನ್ನ ಬಾಳಿಕೆ ದಾಸು ಬಾಬು ಶೆಟ್ಟಿ ಯವರ ಸಂಸ್ಮರಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪರಿಸರದ ಉದ್ಯಮಿಗಳು, ಸಮಾಜಸೇವಕರುಗಳು ಉಪಸ್ಥಿತರಿದ್ದು ಮಂಡಳಿಯು ಮಾಡುತ್ತಿರುವ ಕಾರ್ಯಗಳನ್ನು ಹಾಗೂ ದೇವಿಯ ಕಾರ್ಣಿಕವನ್ನು ವರ್ಣಿಸಿದರು.
ನವರಾತ್ರೋತ್ಸವ ಸಂದರ್ಭದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.
ಕಿಶೋರ್ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರೆ, ರಘುವೀರ್ ಭಟ್ ಸಹಕರಿಸಿದರು.
ಆಕ್ಟೋಬರ್ 5 ರ ಸಂಜೆ ತವರಿನಿಂದ ಆಗಮಿಸಿದ ಕಲಾವಿದರ ತಂಡಗಳಿಂದ ಚಂಡೆ ಓಲಾಗ ವಿವಿಧ ವೇಷ ಭೂಷಣ ದೊಂದಿಗೆ ವೈಭವಯುತವಾಗಿ ವಿಸರ್ಜನ ಮೆರವಣಿಗೆ ನಡೆಯಿತು.
ಭಜನೆ, ಚೆಂಡೆ ಕುಣಿತ, ಗೊಂಬೆ ಕುಣಿತ, ಯಕ್ಷಗಾನ ವೇಷಗಳು, ಪಿಲಿನಲಿಕೆ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.
ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತ ಸದಾ ಚಟುವಟಿಕೆ ಯಿಂದ ಸಂಪನ್ನವಾಗಿರುವ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯು ಎಲ್ಲಾ ಕಾರ್ಯಕರ್ತರ ಭಕ್ತರ ಸಹಕಾರ ದೊಂದಿಗೆ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ ಯವರ ಸದೃಢ ನೇತೃತ್ವದಲ್ಲಿ 58 ನೇ ವಾರ್ಷಿಕ ನವರಾತ್ರೋತ್ಸವವನ್ನು ಬಹು ವಿಜೃಂಭಣೆಯಿಂದ ಅದ್ದೂರಿಯಾಗಿ ಆಚರಿಸಿಕೊಂಡಿತು.






Post a Comment