ಕನ್ನಡ ಕಲರವ
ಕನ್ನಡ ನಾಡಿನ ಪುಣ್ಯದ ಬೀಡಿನ
ಹಿರಿಮೆಯ ಕಥೆಯನು ಕೇಳುವಿರಾ
ವೀರರು ಜನಿಸಿಹ ಶೌರ್ಯವ ಮೆರೆದಿಹ
ನಾಡಿನ ಕವಿತೆಯ ಓದುವಿರಾ
ಗಂಧದ ಪರಿಮಳ ಪಸರಿಹ ಕಾಡಿನ
ಸೊಬಗಿನ ಸಿರಿಗಳ ತವರೂರು
ಸಾವಿರ ವರುಷದ ಚರಿತೆಯ ಬರೆದಿಹ
ಗುಡಿಗೋಪುರಗಳ ನೆಲೆವೀಡು
ಬಳುಕುವ ನಡೆಯಲಿ ನಾಡನು ಸುತ್ತುವ
ನದಿಗಳ ಕಲರವ ಎಲ್ಲೆಡೆಯೂ
ಏರುವ ಮುರುಕುವ ಹಾಲ್ನೊರೆ ತೆರೆಗಳ
ಸಾಗರ, ಜಗತಿಯ ರಿಂಗಣವೂ
ಹೊನ್ನನು ಹೊಂದಿಹ ಚಿನ್ನದ ಗಣಿಯಿದು
ತರತರದದಿರಿನ ಆಗರವೂ
ಅನ್ನವ ನೀಡುವ ಭತ್ತದ ನಾಡಲಿ
ಕಾಯಕ ಕಲ್ಪಿತ ಜೋಗುಳವೂ
ಸುಂದರ ಶಿಲೆಗಳ ಶಿಲ್ಪಿಯ ಕೃತಿಗಳು
ಕಥೆಯನು ಒಡಲಲಿ ಚಿತ್ರಿಸಿವೆ
ಗಾನವ ನಾಟ್ಯವ ಜನಪದ ವೈಭವ
ನವಯುಗದಲ್ಲಿಯು ಮೆರೆಯುತಿದೆ
ಸಕ್ಕರೆ ನಾಡಿನ ಅಕ್ಕರೆ ಮಾತಲಿ
ಕಬ್ಬಿಗ ಕಾವ್ಯವೆ ಕೇಳುತಿದೆ
ಮಲೆಗಳ ಸಾಲಲಿ ಕಾಫಿಯ ಘಮಘಮ
ವಿಶ್ವದ ಗಮನವ ಸೆಳೆಯುತಿದೆ
ಗೊಂಬೆಯ ಬೀಡಿನ ರೇಶಿಮೆ ನಾಡಲಿ,
ನೂಲಿನ ಸೀರೆಯ ನಾರಿಯರು
ಶಿಖರದ ಬಗಲಲಿ ಜೋಗದ ಸಿರಿಯಲಿ
ಜಲದಭಿಷೇಕಕೆ ನೀರೆಯರು
ವಿಜಯದಿ ಮೆರೆದಿಹ ರಾಜರ ಮನೆತನ
ಭಾಷೆಯ ಪ್ರೇಮದಿ ಬೆಳೆಸಿದರು
ದೇಶದ ರಕ್ಷೆಗೆ ಕಾಯುವ ಯೋಧರು
ನಾಡಿಗೆ ಜೀವವ ತ್ಯಜಿಸಿದರು
ಪಂಪನು ರನ್ನನು ಜನ್ನನು ಪೊನ್ನನು
ಹಾಡಿದ ಕನ್ನಡ ಮುನ್ನುಡಿಯು
ಗದುಗಿನ ಕುವರನು ದಾಸರು ಶರಣರು
ಬರೆದಿಹ ನುಡಿಗಳು ಅಮೃತವು
ದೇಶದ ಮುಕುಟದ ಮಣಿಯಂತಿಹ ನುಡಿ
ನಮ್ಮದು ನಿಮ್ಮದು ಬಂಧುಗಳೇ
ತೇಜದ ಸೊಡರಲಿ ಪದಗಳ ಹೆಣೆಯುತ
ಕನ್ನಡ ಬೆಳಗಿರಿ ನೇಹಿಗರೇ
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
![]() |
| ✍ ಅನಿತಾ ಪಿ. ಪೂಜಾರಿ ತಾಕೊಡೆ |


Post a Comment