ಕಾರ್ಯಕ್ರಮದಿಂದ ಮನೆಗೆ ಹೊರಡಲು ತಡ ಮಾಡಿದ ಪತಿ: ಅಸಮಾಧಾನಗೊಂಡ ಹೆಂಡತಿ ಆತ್ಮಹತ್ಯೆ
ನೆರೆಮನೆಯಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ತಮ್ಮ ಮನೆಗೆ ಪತಿ ಒಟ್ಟಿಗೆ ಬರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಸುರತ್ಕಲ್ ನಲ್ಲಿ ನಡೆದಿದೆ. ಮೃತರನ್ನು ಬಾಳ ಗ್ರಾಮದ ಒಟ್ಟೆಕಾಯಾರ್ ಮನೆಯ ಹರೀಶ್ ಅವರ ಪತ್ನಿ ದಿವ್ಯಾ (26) ಎಂದು ಗುರುತಿಸಲಾಗಿದೆ.ಹರೀಶ್ ಅವರು ಸುರತ್ಕಲ್ ನಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ದಿವ್ಯಾ ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ನಾಲ್ಕು ಗಂಟೆಯ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 'ಮಗಳು ಮುಂಗೋಪಿ ಸ್ವಭಾವದವಳು. ನೆರೆಮನೆಯಲ್ಲಿ ಶನಿವಾರ ನಡೆದಿದ್ದ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಒಟ್ಟಿಗೆ ಭಾಗವಹಿದ್ದರು. ಅಲ್ಲಿಂದ ಮನೆಗೆ ಹೊರಡುವಾಗ ಹರೀಶ ತಡ ಮಾಡಿದ್ದರು. ಈ ಕಾರಣದಿಂದ ಅಸಮಾಧಾನಗೊಂಡಿದ್ದ ದಿವ್ಯಾ ಒಬ್ಬಳೇ ಮನೆಗೆ ಮರಳಿದ್ದಳು. ಭಾನುವಾರ ಸಂಜೆ 3 ರಿಂದ 4 ಗಂಟೆ ನಡುವೆ ಮನೆಯ ಬೆಡ್ ರೂಂನಲ್ಲಿ ಚೂಡಿದಾರದ ಶಾಲು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ.ಈ ಬಗ್ಗೆ ದಿವ್ಯಾ ಅವರ ತಾಯಿ ಗಿರಿಜಾ ದೂರು ನೀಡಿದ್ದು, ಮಗಳ ಸಾವಿನ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದಾರೆ.
'ಮಗಳು ದಿವ್ಯಾ ನಗರದ
ಲೇಡಿಹಿಲ್ ನ ಔಷಧಾಲಯವೊಂದರಲ್ಲಿ ಕೆಲಸಮಾಡುತ್ತಿದ್ದಳು. ಮೊಗವೀರ ಯುವಕ ಹರೀಶ್ ಅವರನ್ನು
ಪ್ರೀತಿಸಿದ್ದಳು. ನಗರದ ಆರ್ಯ ಸಮಾಜದಲ್ಲಿ 2022 ಮಾರ್ಚ್ 24ರಂದು ಅವರಿಬ್ಬರು ಸರಳವಾಗಿ
ಮದುವೆಯಾಗಿದ್ದರು. ನಮಗೆ ವಿಷಯ ಗೊತ್ತಾದ ಬಳಿಕ ನಾವೂ ಅವರ ಮನೆಗೆ ಹೋಗಿ
ಬರುತ್ತಿದ್ದೆವು. ದಂಪತಿ ಅನ್ಯೋನ್ಯವಾಗಿದ್ದರು.' ಎಂದು ತಾಯಿ ಹೇಳಿದ್ದಾರೆ.
ಪಕ್ಕದ ಮನೆಯ ಕಾರ್ಯಕ್ರಮ ಮುಗಿಸಿ ಮನೆಗೆ ಬರಲು ಗಂಡ ತಡ ಮಾಡಿದರು ಎಂಬ ಕಾರಣಕ್ಕೆ ಅಸಮಾಧಾನಗೊಂಡ ಪತ್ನಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment