ಗೋಕುಲ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ
ಮಕರ ಸಂಕ್ರಾಂತಿಯ ಪರ್ವ ಕಾಲದಲ್ಲಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಸಾಯನ್, ಬಿ.ಎಸ್ ಕೆ.ಬಿ. ಎಸೋಸಿಯೇಶನ್ ನ ಸಹಯೋಗದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಶನಿವಾರ ದಿನಾಂಕ 14-01-2023 ರಂದು ದೇವಾಲಯ ಸಭಾಗೃಹದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಿತು.
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಶ್ರೀ ರಾಮವಿಠಲ ಕಲ್ಲೂರಾಯ, ಶ್ರೀಮತಿ ಜ್ಯೋತಿ ಕಲ್ಲೂರಾಯ ದಂಪತಿಯವರ ಯಜಮಾನತ್ವದಲ್ಲಿ, ವೇ.ಮೂ. ದರೆಗುಡ್ಡೆ ಶ್ರೀನಿವಾಸ್ ಭಟ್ ರವರ ಪ್ರಧಾನ ಪೌರೋಹಿತ್ಯದಲ್ಲಿ ದೇವತಾ ಪ್ರಾರ್ಥನೆ, ಮಹಾ ಸಂಕಲ್ಪದೊಂದಿಗೆ ಪೂಜಾ ವಿಧಿವಿ ಧಾನಗಳು ಸಾಂಪ್ರದಾಯಿಕವಾಗಿ ನೆರವೇರಿದವು. ಮಂದಿರದ ಅರ್ಚಕರಾದ ವೇ.ಮೂ. ಗೋಪಾಲ್ ಭಟ್ ಪುರೋಹಿತ ವರ್ಗದವರಾದ ನಾಗರಾಜ್ ಐತಾಳ್, ನಾಗರಾಜ್ ಉಡುಪ, ಭವಾನಿ ಶಂಕರ್, ಜನಾರ್ದನ್ ಮಯ್ಯ, ಚಂದ್ರಶೇಖರ್ ರವರ ಸಹಕಾರದೊಂದಿಗೆ ಸೇವಾರ್ಥಿಗಳಿಗೆ ಸಾ ಮೂಹಿಕ ಸಂಕಲ್ಪ ನೆರವೇರಿಸಿದರು.
ಮಹಾಮಂಗಳಾರತಿಯಾದ ನಂತರ, ವೇ.ಮೂ.ದರೆಗುಡ್ಡೆ ಶ್ರೀನಿವಾಸ್ ಭಟ್ ರವರು ತಮ್ಮ ಪ್ರಾರ್ಥನೆಯಲ್ಲಿ "ಮಕರ ಸಂಕ್ರಾಂತಿಯ ಪರ್ವ ಕಾಲದಿಂದ ದೇವಾಧಿದೇವತೆಗಳಿಗೆ ಹಗಲು ಎನಿಸಿದ ಉತ್ತರಾಯಣದ ಪ್ರಾರಂಭವಾ ಗುತ್ತದೆ. ಇದು ಅತ್ಯಂತ ಪ್ರಶಸ್ತ ಕಾಲ. ಉತ್ತರಾಯಣದಲ್ಲಿ ಮರಣಿಸಿದವರು ವಿಷ್ಣು ಪಾದವನ್ನು ಸೇ ರುತ್ತಾರೆ ಎಂದು ಹಿಂದುಗಳಾದ ನಮ್ಮೆಲ್ಲರ ನಂಬಿಕೆ. ಇಚ್ಚಾ ಮರಣಿಯಾ ದ ಭೀಷ್ಮ ಪಿತಾಮಹರು, ಉತ್ತರಾಯಣ ನಿರೀಕ್ಷೆಯಲ್ಲಿ ಸರಳ ಮಂಚದಲ್ಲಿ ಮಲಗಿ, ಈ ಪುಣ್ಯ ಕಾಲದಲ್ಲಿ ವಿಷ್ಣು ಸಾಯುಜ್ಯವನ್ನು ಪಡೆದರು. ಈ ಪರ್ವ ಕಾಲದಲ್ಲಿ ಭಾಗವತ , ಮಹಾಭಾರತ ಪ್ರವಚನ, ಪೂಜಾದಿ ಸತ್ಕರ್ಮಗಳನ್ನು ಆಚರಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು. ಸಂಕ್ರಮಣದ ಈ ಪರ್ವ ಕಾಲದಲ್ಲಿ ಗೋಕುಲ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ, ಸಹಸ್ರ ನಾಮಾರ್ಚನೆ, ಭಜನೆಯೊಂದಿಗೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಇಂದು ನಾವು ಆಚರಿಸಿದ್ದೇವೆ. ಈ ಪ್ರಸನ್ನ ಕಾಲದಲ್ಲಿ, ನೆರೆದ ಸದ್ಭಕ್ತರಿಗೆಲ್ಲಾ ಆಯುರಾರೋಗ್ಯ ಸುಖ ಸಂಪತ್ತನ್ನಿತ್ತು ಸದಾ ರಕ್ಷಿಸಲಿ ಎಂದು ಭಗವಂತನನ್ನು ಭಕ್ತಿಯಿಂದ ಬೇಡಿಕೊಳ್ಳೋಣ" ಎಂದು ಅನುಗ್ರಹ ನುಡಿಗಳನ್ನಾಡಿದರು.
ಗೋಕುಲ ಭಜನಾ ಮಂಡಳಿ ಮತ್ತು ವಲಯದ ಭಜನಾ ಮಂಡಳಿಗಳಾದ ಮಧ್ವೇಶ ಭಜನಾ ಮಂಡಳಿ, ಗೋಪಾಲಕೃಷ್ಣ ಭಜನಾ ಮಂಡಳಿ, ಹರಿಕೃಷ್ಣ ಭಜನಾ ಮಂಡಳಿ, ವಿಠಲ ಭಜನಾ ಮಂಡಳಿ, ಶ್ರೀಕೃಷ್ಣ ಭಜನಾ ಮಂಡಳಿ, ಸ್ಕಂದ ಭಜನಾ ಮಂಡಳಿ, ಯುವ ಕಲಾವೃಂದ ಹಾಗೂ ಬಾಲ ಕಲಾವೃಂದದವರಿಂದ ಹರಿನಾಮ ಸಂಕೀರ್ತನೆ ಮತ್ತು ಗೋಕುಲ ಮಹಿಳಾ ವಿಭಾಗದವರಿಂದ ಅರಿಸಿನ ಕುಂಕುಮ, ಎಳ್ಳು೦ಡೆ ವಿತರಣೆ ಜರಗಿತು
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ವಿಶ್ವಸ್ಥ ಮಂಡಳಿ ಮತ್ತು ಧಾರ್ಮಿಕ ಸಮಿತಿ ಸದಸ್ಯರು, ಬಿ. ಎಸ್.ಕೆ.ಬಿ. ಎಸೋಸಿಯೇಶನ್ ನ ಪದಾಧಿಕಾರಿಗಳು, ಕಾರ್ಯಕಾರೀ ಸಮಿತಿಯ ಸದಸ್ಯರು ಹಾಗೂ ಸುಮಾರು 500 ಕ್ಕೂ ಮಿಕ್ಕಿ ಭಕ್ತಾದಿಗಳು ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ದೇವರಿಗೆ ನಿತ್ಯ ಪೂಜೆಯಾದ ನಂತರ ತೀರ್ಥ ಪ್ರಸಾದ ವಿತರಣೆ, ಪ್ರಸಾದ ಭೋಜನ ನೆರವೇರಿತು.



Post a Comment