".

Header Ads

ಬಿ.ಎಂ. ರೋಹಿಣಿ ಅವರಿಗೆ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ (2022)

'ಅಕ್ಷಯ' ಪತ್ರಿಕೆಯ ಗೌರವ ಸಂಪಾದಕ ಎಂ.ಬಿ. ಕುಕ್ಯಾನ್ ಅವರು ಪ್ರಾಯೋಜಿಸಿ ಬಿಲ್ಲವರ ಎಸೋಸಿಯೇಶನ್ ಸಂಯೋಜಿಸುತ್ತಿರುವ 2022ನೇ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಸಾಹಿತಿ, ಸಂಶೋಧಕಿ, ಶಿಕ್ಷಕಿ ಬಿ.ಎಂ. ರೋಹಿಣಿ ಆಯ್ಕೆಯಾಗಿದ್ದಾರೆ. 

ಈ ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳನ್ನೊಳಗೊಂಡಿದೆ. ಇತ್ತೀಚೆಗೆ ಬಿಲ್ಲವ ಭವನದಲ್ಲಿ ಜರಗಿದ ಪ್ರಶಸ್ತಿ ನಿರ್ಣಾಯಕ ಸಮಿತಿಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು. ಕನ್ನಡ ಸಾಹಿತ್ಯ, ಸಂಶೋಧನೆ, ಶಿಕ್ಷಣ ಕ್ಷೇತ್ರಕ್ಕೆ ಬಿ.ಎಂ. ರೋಹಿಣಿಯವರು ನೀಡಿದ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಮಂಗಳೂರು ತಾಲೂಕಿನ ಬಂಟ್ವಾಳ ಹತ್ತಿರದ ತುಂಬೆಯ ಕಾಣೆಮಾರಿನಲ್ಲಿ ತಾ. 06.04.1944 ರಂದು ತಾಯಿ ದೇವಕಿ, ತಂದೆ ಕೊಗ್ಗಪ್ಪ ದಂಪತಿಗಳ ಸುಪುತ್ರಿಯಾಗಿ ಇವರು ಜನಿಸಿದರು. ಕಡು ಬಡತನದಲ್ಲೂ ಶಿಕ್ಷಣವನ್ನು ಪೂರ್ಣವಿಸಿ ಶಿಕ್ಷಕಿಯಾಗಿ ಇವರು ಸುದೀರ್ಘ ಸೇವೆ ಸಲ್ಲಿಸಿದ್ದಾರೆ. 

ಶಾಲಾ ಅಧ್ಯಾಪಕಿಯಾಗಿ ಇವರು ಮಾಡಿದ ಸಾಧನೆ ಅಪಾರ. ಹಿಂದಿಯಲ್ಲಿ `ಪ್ರವೀಣ', ಕನ್ನಡ ಎಂ.ಎ. ಪದವಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಎಳವೆಯಲ್ಲೇ ಬರವಣಿಗೆಯ ಬಗ್ಗೆ ಆಸಕ್ತಿ ಹೊಂದಿದ್ದ ಬಿ.ಎಂ. ರೋಹಿಣಿಯವರು ನಾಡಿನ ಪತ್ರಿಕೆಗಳಲ್ಲಿ ನೂರಾರು ವೈಚಾರಿಕ ಲೇಖನಗಳನ್ನು ಬರೆದಿದ್ದಾರೆ. ಕರ್ತವ್ಯ (1996), ಗರಿಕೆಯ ಕುಡಿಗಳು (2004), ಒಂದು ಹಿಡಿ ಮಣ್ಣು (2016) ಇವರ ಪ್ರಕಟಿತ ಕಥೆಗಳು. ಸ್ತ್ರೀ ಸಂವೇದನೆ (1995), ಸ್ತ್ರೀ ಶಿಕ್ಷಣ ಸಂಸ್ಕೃತಿ (2000), ಸ್ತ್ರೀ ಭಿನ್ನ ಮುಖಗಳು (2005), ಸಾಮಾಜಿಕ ತಲ್ಲಣಗಳು (2007), ಆರಾಧನಾ ರಂಗದಲ್ಲಿ ಸ್ತ್ರೀ (2004), ಪ್ರತಿಸ್ಪಂದನ ಮತ್ತು ಸಮೀಕ್ಷೆ (2020), ವೇಶ್ಯಾವಾಟಿಕೆಯ ಕಥೆ, ವ್ಯಥೆ (2022) ಇವರ ವಿಮರ್ಶಾ ಕೃತಿಗಳು. ಅಧ್ಯಾಪಕಿಯ ಅಧ್ವಾನಗಳು (2007) ಇವರ ಅನುಭವ ಕಥನ. ಸಂಶೋಧನಾ ಕ್ಷೇತ್ರಕ್ಕೆ ಇವರ ಕೊಡುಗೆ ವಿಶಿಷ್ಟವಾಗಿದೆ. ಅವಿವಾಹಿತ ಮಹಿಳೆ ಸಮಾಜೋಸಾಂಸ್ಕೃತಿಕ ಅಧ್ಯಯನ (2008), ತುಳುನಾಡಿನ ಮಾಸ್ತಿ ಕಲ್ಲುಗಳು- ವೀರಗಲ್ಲುಗಳು (2010), ದ.ಕ. ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ (2014), ದ.ಕ. ಜಿಲ್ಲೆಯ ಬಿಲ್ಲವರ ಗುತ್ತುಮನೆಗಳ ಅಧ್ಯಯನ (2020) ಇವು ರೋಹಿಣಿಯವರು ಇತರರೊಂದಿಗೆ ಸೇರಿ ನಡೆಸಿದ ಸಂಶೋಧನಾ ಅಧ್ಯಯನಗಳು, ಲಲಿತಾ ರೈ, ಚಿತ್ರಕಲಾವಿದ ಪಾವಂಜೆ ಗೋಪಾಲ ಕೃಷ್ಣಯ್ಯ, ಸಂಗೀತ ವಿದ್ವಾನ್ ಎನ್. ಕೇಶವ ಭಟ್, ಸಮಾಜ ಸೇವಕಿ ಹಿಲ್ಡಾ ರಾಯಪ್ಪನ್ ಕುರಿತು ವ್ಯಕ್ತಿ ಚಿತ್ರಗಳ ಬರಹಗಳನ್ನು ಇವರು ಬರೆದಿದ್ದಾರೆ. ಇವರ ಸ್ತ್ರೀ  ಸಂವೇದನೆ' ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಬಹುಮಾನ, ಸ್ತ್ರೀ ಶಿಕ್ಷಣ ಸಂಸ್ಕೃತಿ' ಕೃತಿಗೆೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಬಹುಮಾನ ಸ್ತ್ರೀ  ಶಿಕ್ಷಣ ಸಂಸ್ಕೃತಿ' ಕೃತಿಗೆ ದಕ್ಷಿಣ ಕನ್ನಡ ಹಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಪ್ರಶಸ್ತಿ ದೊರಕಿದೆ.

ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಡೀಡ್ಸ್ ವೆಲೊರೆಡ್, ಸಂಚಲನ, ಶಿಕ್ಷಕ ಸಂಗತಿ ಮುಂತಾದ ಸಂಸ್ಥೆಗಳ ಜೊತೆಗೆ ಇವರು ಸಕ್ರಿಯರಾಗಿದ್ದಾರೆ.

ಮೌಲ್ಯ ಗೌರವ ಪ್ರಶಸ್ತಿ (2002), ಕಾಂತಾವರ ಸಾಹಿತ್ಯ ಪ್ರಶಸ್ತಿ (2015), ಕರ್ನಾಟಕ ಸರಕರದ ವೀರರಾಣಿ ಅಬ್ಬಕ್ಕ ಪ್ರಶಸ್ತಿ (2016) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗೌರವ ಪ್ರಶಸ್ತಿ (2015), ಇನ್ಫೋಸಿಸ್ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ (2021) ಹೀಗೆ ಹಲವು ಪ್ರಶಸ್ತಿ ಗೌರವಗಳು ರೋಹಿಣಿಯವರಿಗೆ ದಕ್ಕಿದೆ.

ಬಿ.ಎಂ. ರೋಹಿಣಿಯವರಿಗೆ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಯನ್ನು ಫೆಬ್ರವರಿ 25 ರಂದು ಬಿಲ್ಲವ ಭವನದಲ್ಲಿ ಜರಗುವ ವಿಶೇಷ ಕರ‍್ಯಕ್ರಮದಲ್ಲಿ ಪ್ರದಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Powered by Blogger.