".

Header Ads

ಡೊಂಬಿವಲಿಯ ಶ್ರೀ ಜಗದಂಬಾ ಮಂದಿರದಲ್ಲಿ ಎಂಟನೇ ವಾರ್ಷಿಕ ಮಹೋತ್ಸವ ಸಂಭ್ರಮ

ರಂಗಸ್ಥಳ ಲೋಕಾರ್ಪಣೆ, ರಸ್ತೆ ಹಾಗೂ ಶೌಚಾಲಯ ದ ಉದ್ಘಾಟನೆ

ಮಹಾರಾಷ್ಟ್ರದ ಮಿನಿ ತುಳುನಾಡು ಎಂದೇ ಕರೆಯಲ್ಪಡುವ, ತುಳು, ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ನೆಲೆಯಾಗಿರುವ ಹಿಂದಿನ ಡೊಮ್ಮನ ಹಳ್ಳಿ ಇಂದಿನ ಡೊಂಬಿವಲಿಯಲ್ಲಿ ದಶಕಗಳ ಹಿಂದೆ ಯಕ್ಷಗುರು ಗಣೇಶ್ ರಾವ್ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ಭಾಗವತಿಕೆ ತರಬೇತಿ ಪಡೆಯುತ್ತಿದ್ದವರು ಹಾಗೂ ಪರಿಸರದ ಸಹವರ್ತಿಗಳಿಂದ ರಚಿತವಾಗಿರುವ ಯಕ್ಷಕಲಾ ಸಂಸ್ಥೆಯ ನೇತೃತ್ವದಲ್ಲಿ ಸ್ಥಾಪನೆಯಾಗಿರುವ ಶ್ರೀ ಜಗದಂಬಾ ಮಂದಿರಕ್ಕೆ ಇದೀಗ ಎಂಟನೇ ವಾರ್ಷಿಕೋತ್ಸವದ ಸಂಭ್ರಮ. 

ಯಾವುದೋ ಅಮೋಘವಾದ ದಿವ್ಯಶಕ್ತಿಯೊಂದಿಗೆ ಭಕ್ತಾಭೀಸ್ಟ ಫಲಪ್ರದಾಯಿನಿ, ಸರ್ವ ಮಂಗಳೆಯಾದ ಶ್ರೀ ದೇವಿಯು ನೆಲೆಸಿದ್ದಾಳೆ ಎಂದು ಶ್ರೀ ಕೇಶವ ಪೋದುವಾಲರ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದ ನಂತರ ಇಲ್ಲಿ ಶ್ರೀ ಜಗದಂಬಾ ಮಂದಿರವನ್ನು ಸ್ಥಾಪಿಸಲಾಯಿತು. 


ಡೊಂಬಿವಲಿ ಗೋಪಿನಾಥ್ ಚೌಕ್ ಬಳಿ ಇರುವ ಈ ಮಂದಿರದಲ್ಲಿ ಅಷ್ಟಭುಜೆ ಜಗದಂಬೆಯ ಮೂರ್ತಿ ಪ್ರತಿಷ್ಠಪನೆ ನಡೆಸಿದ ನಂತರ ಭಜನೆ, ಕೀರ್ತನೆ, ಅರ್ಚನೆ ಯೊಂದಿಗೆ, ಪ್ರತೀವರ್ಷವೂ ಪ್ರತಿಯೊಂದು ಹಬ್ಬಗಳನ್ನು ಆಚರಿಸುವುದರೊಂದಿಗೆ ವಾರ್ಷಿಕ ಸತ್ಯನಾರಾಯಣ ಮಹಾಪೂಜೆ, ಶನೀಶ್ವರ ಮಹಾಪೂಜೆ, ಯಕ್ಷಗಾನ, ನಾಟಕ, ಮಹಿಳೆಯರಿಗಾಗಿ ಹಳದಿ ಕುಂಕುಮ,  ನವರಾತ್ರೋತ್ಸವ ಮುಂತಾದ ವಿವಿಧ ರೀತಿಯ ಧಾರ್ಮಿಕೋತ್ಸವಗಳಿಂದ ನಮ್ಮೂರ ಹಬ್ಬದ ಜಾತ್ರೆಯನ್ನು ನೆನಪಿಸುವಂತೆ ಮಾಡುತ್ತದೆ.  ಇಲ್ಲಿ ನೆರೆಯುವ ಭಕ್ತ ಜನರ ಸಾಗರ, ಎಲ್ಲಿಯೂ ತೊಡಕಾಗದಂತೆ ವ್ಯವಸ್ಥಿತವಾಗಿ ಜರಗುವ ಅನ್ನಸಂತರ್ಪಣೆ, ಪೂಜಾ ಸಮಯ ಪ್ರತಿಯೊಬ್ಬ ಕಾರ್ಯಕರ್ತರ ಲವಲವಿಕೆಯ ದುಡಿಮೆ, ಎಲ್ಲರ ಗಮನಸೆಳೆಯುವ ದೇವರ ಮೂರ್ತಿ ಶೃಂಗಾರ, ಪ್ರಧಾನ ಅರ್ಚಕರಾದ ರಘುಪತಿ ಭಟ್ ಇವರಿಂದ ಜರಗುವ ವಿಧಿ ಬದ್ಧವಾದ ಪೂಜಾ ವಿಧಾನಗಳು, ನೇತ್ರಾನಂದಕರವಾಗಿ ಜರುಗಿಸಲ್ಪಡುವ ಮೆರವಣಿಗೆ, ಅಖಂಡ ಭಜನೆ, ಇವೇ ಮೊದಲಾದ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪೂಜಾ ಸಮಿತಿಯ ಶಿಸ್ತು ನಿಯಮಾವಳಿಗಳಿಂದಾಗಿ ಸ್ವಚ್ಛತೆಗೆ ಆದ್ಯತೆ ಇರುವುದರಿಂದ ದೇವಸ್ಥಾನಕ್ಕೆ ಕಾಲಿಡುತ್ತಲೇ ಶಾಂತಿ, ಸಮಾಧಾನಗಳು ಭಕ್ತರಿಗೆ ಪ್ರಾಪ್ತಿಯಾಗುತ್ತದೆ ಎಂಬ ಭರವಸೆ ಹಾಗೂ ಭಕ್ತರ ಪೀಡೆ ನಿವಾರಣೆಗೊಂಡು ಮನದ ಇಷ್ಟಾರ್ಥಗಳೆಲ್ಲವೂ ಕೈಗೂಡುವುದೆಂಬ ನಂಬಿಕೆಯು ಇರುವುದರಿಂದ ಇಲ್ಲಿ ಅಪಾರ ಭಕ್ತರ ಸಂದಣಿ ನೆರೆಯುತ್ತದೆ.

 ದೇವಸ್ಥಾನದ ಆಡಳಿತ ಮಂಡಳಿಯು ದೇವಸ್ಥಾನದಲ್ಲಿ ಯಕ್ಷಗಾನ, ನಾಟಕ, ಭಜನೆ, ತಬಲಾ, ಹಾರ್ಮೋನಿಯಂ, ಭರತ ನಾಟ್ಯ ಇವೇ ಮೊದಲಾದ ಕಲಾಕ್ಷೇತ್ರದ ತರಬೇತಿ ಶಿಬಿರಕ್ಕೆ ವಿಶೇಷ ಆದ್ಯತೆ ನೀಡಿರುವುದಲ್ಲದೆ ತವರೂರಿನ ಆಮಂತ್ರಿತ ಪ್ರಸಿದ್ಧ ಯಕ್ಷಗಾನ ಮೇಳಗಳ ಯಕ್ಷಗಾನ ಪ್ರದರ್ಶನಕ್ಕೆ ಪ್ರೋತ್ಸಾಹವನ್ನು ನೀಡುತ್ತಿದೆ.

ದೇವಸ್ಥಾನದಲ್ಲಿ ನಿತ್ಯೋತ್ಸವವು ಜರುಗಬೇಕೆಂದು ದೈವಜ್ಞರಿಂದ ತಿಳಿದುಬಂದಿರುವಂತೆ ಊರ ಪರವೂರ ಭಕ್ತಾಭಿಮಾನಿಗಳು ಹಾಗೂ ಸೇವಾಕರ್ತರಿಂದ ಜರುಗುತ್ತಿರುವ ನಿತ್ಯೋತ್ಸವಗಳಿಂದ ನಾಸ್ತಿಕರನ್ನು ಆಸ್ತಿಕರನ್ನಾಗಿ ಭಕ್ತಾರಿಷ್ಟಾರ್ಥಗಳನ್ನು ಈಡೇರಿಸುತ್ತಿರುವ

ಶ್ರೀ ಜಗದಂಬಾ ಮಂದಿರದಲ್ಲಿ ವಿಜೃಂಭಣೆಯಿಂದ ಜರಗುವ ಎಂಟನೇ ವಾರ್ಷಿಕ ಮಹೋತ್ಸವವು ಮಾರ್ಚ್  11 ರಿಂದ 13 ರ ವರಗೆ ಡೊಂಬಿವಲಿಯ ಶ್ರೀ ಶಂಕರ ನಾರಾಯಣ ತಂತ್ರಿ ಅವರ ನೇತೃತ್ವದಲ್ಲಿ ಜರುಗಲಿರುವುದು. 

ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಮಾರ್ಚ್ 11 ರ ಶನಿವಾರ ದಂದು ದೇವಸ್ಥಾನದ ಅಧ್ಯಕ್ಷ ದಿವಾಕರ ಜಿ. ರೈ ಹಾಗೂ ಅವರ ಹಿರಿಯ ಸಹೋದರ ಸುಧಾಕರ ರೈ ಮೂಡುಶೆಡ್ಡೆ ಅಲ್ಲದೆ ದಿವಾಕರ ರೈಯವರ ಅತ್ತೆ ಶ್ರೀಮತಿ ಜಯಂತಿ ಶೆಟ್ಟಿ ಶಿರ್ವ ಮಂಚಕಲ್ ಇವರೆಲ್ಲರೂ ಶ್ರೀ ಜಗದಂಬಾ ದೇವಿಯ ಸಾನಿಧ್ಯಕ್ಕೆ ಸೇವಾ ರೂಪದಲ್ಲಿ ಅರ್ಪಿಸಲು ಮೂಲ್ಕಿಯ ಪ್ರಸಿದ್ಧ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಕ್ತಾದಿಗಳ ಹರಿಕೆಯ ಬಯಲಾಟ ಪ್ರದರ್ಶನಗೊಳ್ಳುತ್ತಿದ್ದ ಭವ್ಯವೂ ದಿವ್ಯವೂ ಆಗಿ ವಿದ್ಯುತ್ ದೀಪಾಲಂಕೃತವಾಗಿರುವ `ರಂಗಸ್ಥಳ' ಮುಂಬಯಿಗೆ ತರಿಸಿ ಅಂದು ಜರುಗಲಿರುವ ಧಾರ್ಮಿಕ ಸಭೆಯಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ.

ಎರಡು ಶತಮಾನಗಳ ಇತಿಹಾಸವುಳ್ಳ ಮುಂಬಯಿ ಯಕ್ಷಗಾನಕ್ಕೆ ಊರಿನಿಂದಲೇ ಮೇಳದ ಪರಿಕರಗಳು ವಿವಿಧ ತಿಟ್ಟಿನ ಮಹಾನ್ ಕಲಾವಿದರನ್ನು ಮುಂಬಯಿಗೆ ತರಿಸಿದ ಕಲಾಪೋಷಕರು ಅನೇಕರಿದ್ದಾರೆ. ಊರಿನಿಂದಲೇ ರಂಗಸ್ಥಳವನ್ನು ಮುಂಬಯಿಗೆ ತರಿಸಿದವರು ಯಾರೂ ಇಲ್ಲ. ಆದರೆ ಊರಿನಿಂದ ರಂಗಸ್ಥಳವನ್ನು ತರಿಸಿದ ಶ್ರೇಯಸ್ಸು ಡೊಂಬಿವಲಿ ಪಶ್ಚಿಮದ ಯಕ್ಷಕಲಾ ಸಂಚಾಲಕತ್ವದ ಶ್ರೀ ಜಗದಂಬಾ ಮಂದಿರದ ಅಧ್ಯಕ್ಷರಾದ ಶ್ರೀ ದಿವಾಕರ ಜಿ. ರೈ ಅವರಿಗೆ ಸಲ್ಲುತ್ತದೆ. ಶ್ರೀಯುತರು ಬಪ್ಪನಾಡು ಮೇಳದ ರಂಗಸ್ಥಳವನ್ನು ಕ್ರಯಕ್ಕೆ ಪಡೆದು ಶ್ರೀ ದೇವಿ ಸಾನಿಧ್ಯಕ್ಕೆ ಅರ್ಪಿಸಿರುವುದು ಅಭಿನಂದನೀಯ. 

`ರಂಗಸ್ಥಳ' ಲೋಕಾರ್ಪಣೆಯ ಬಳಿಕ ಇದೇ ರಂಗಸ್ಥಳದಲ್ಲಿ ಶನೀಶ್ವರ ಮಹಾಪೂಜೆ ಹಾಗೂ ಗ್ರಂಥ ಪಾರಾಯಣ ಯಕ್ಷಗಾನ ರೂಪದಲ್ಲಿ ಶ್ರೀ ಜಗದಂಬಾ ಮಂದಿರದ ಸದಸ್ಯರಿಂದ ಜರುಗಲಿದೆ.

ಮಾರ್ಚ್ 12 ರಂದು ಎಂ. ಟಿ. ಕೋಟಾದ ವತಿಯಿಂದ ಮಂಜೂರಾತಿ ದೊರೆತು ಉತ್ತಮ ರೀತಿಯಲ್ಲಿ ಕಾಂಕ್ರೀಟ್‌ಕರಣಗೊಂಡ ನೂತನ ರಸ್ತೆ  ಹಾಗೂ ಶೌಚಾಲಯ ಉದ್ಘಾಟನೆ ಗೊಳ್ಳಲಿದೆ. ನಿರ್ಮಾಣ ಕಾರ್ಯದಲ್ಲಿ ಸಂಪೂರ್ಣ ರೀತಿಯಲ್ಲಿ ಸಹಕಾರವನ್ನು ನೀಡಿರುವ ಶಿವಸೇನಾ ಸೆಲ್‌ನ ಪದಾಧಿಕಾರಿಗಳಾದ ಅನುಪಮ ಶೆಟ್ಟಿ, ಸುಭಾಷ್ ಶೆಟ್ಟಿ, ಜಯಪೂಜಾರಿ ಇವರೆಲ್ಲರ ಜೊತೆಯಲ್ಲಿ ಈ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಡಾ. ಶ್ರೀಕಾಂತ್ ಏಕನಾಥ್ ಶಿಂಧೆಯವರು ಉಪಸ್ಥಿತರಿರುವರು. ಬಳಿಕ  ನೂತನವಾಗಿ ಉದ್ಘಾಟಿಸಲ್ಪಟ್ಟಿರುವ ರಂಗಸ್ಥಳದಲ್ಲಿ ಪ್ರಥಮ ಸೇವೆಯಾಟವಾಗಿ ಯಕ್ಷ ಗುರು ಮನೋಜ್ ಕುಮಾರ್ ಹೆಜಮಾಡಿ ಇವರ ನೇತೃತ್ವದಲ್ಲಿ ಸ್ಥಳೀಯ ಕಲಾವಿದರಿಂದ `ಶಾಂಭವಿ ವಿಜಯ' ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. 

ಈ ವರ್ಷಾಂತ್ಯದೊಳಗೆ ಶ್ರೀ ಜಗದಂಬಾ ಮಂದಿರದ ಪರಿವಾರ ದೇವರುಗಳಾದ ಶ್ರೀ ನಾಗದೇವರು, ಮಹಾಗಣಪತಿ, ನವಗ್ರಹದ ಅಷ್ಟಬಂಧ ಮೂರ್ತಿ ಪ್ರತಿಷ್ಠಾಪನೆ ಮಾಡಿದಲ್ಲಿ ಶ್ರೀಕ್ಷೇತ್ರವು ಉತ್ತರೋತ್ತರ ಅಭಿವೃದ್ಧಿ ಹೊಂದಿ ಭಕ್ತರ ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ಲಭಿಸುವುದೆಂದು ವಿದ್ವಾನ್ ಶ್ರೀ ಕೃಷ್ಣ ಭಟ್ ಬಪ್ಪನಾಡು ಅವರ ಪ್ರಶ್ನಾ ಚಿಂತನೆಯಲ್ಲಿ ತಿಳಿದುಬಂದಿದ್ದು,  ಈ ಪುಣ್ಯ ಕಾರ್ಯಕ್ಕೆ ಸುಮಾರು ಎಂಟು ಲಕ್ಷ ರೂಪಾಯಿ ಮೊತ್ತದ ಖರ್ಚಿನ ಅಂದಾಜು ಮಾಡಲಾಗಿದ್ದು ಇದಕ್ಕೆ ಶ್ರೀಕ್ಷೇತ್ರದ ಸರ್ವ ಸದ್ಭಕ್ತ ಬಾಂಧವರು ತನು ಮನ ಧನದಿಂದ ಸಹಕರಿಸಬೇಕಾಗಿದೆ. ಶ್ರೀ ಜಗದಂಬಾ ಮಂದಿರದ ಈ ಶುಭ ಕಾರ್ಯವನ್ನು ಶೀಘ್ರವಾಗಿ ನೆರವೇರಿಸಲು ಕಳೆದ ಫೆ.5ರಂದು ರವಿವಾರ ನಡೆದ ವಿಶೇಷ ಮಹಾಸಭೆಯಲ್ಲಿ ನಿರ್ಣಯಿಸಿ, ಮಾ. 30ರಂದು ಮೂರ್ತಿ ಪ್ರತಿಷ್ಠಾಪನೆಗೆ ಶಿಲಾನ್ಯಾಸ ಮಾಡಿ, ಮೇ ತಿಂಗಳ 25ರಂದು ವಿದ್ವಾನ್ ಶ್ರೀ ಕೃಷ್ಣ ಭಟ್ ಬಪ್ಪನಾಡು ಅವರ ಪೌರೋಹಿತ್ಯದಲ್ಲಿ ನಡೆಸುವುದೆಂದು ನಿರ್ಣಯಿಸಲಾಗಿದೆ. ಅಂತೆಯೇ ಇದೇ ಬರುವ ನವರಾತ್ರಿಯ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ನೂತನ ಮಹಾದ್ವಾರದ ಯೋಜನೆಯನ್ನು ಕೈಗೊಂಡಿದ್ದು,  ಈ ಶುಭ ಕಾರ್ಯಕ್ಕೆ ಹದಿನೈದು ಲಕ್ಷ ರೂಪಾಯಿ ಖರ್ಚಾಗಲಿದ್ದು ಈ ಕಾರ್ಯವನ್ನು ದೇವಸ್ಥಾನದ ಭಕ್ತ ಮಹನೀಯರಾದ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ನ   ಶ್ರೀಮತಿ ಅನುಪಮ ಶೆಟ್ಟಿ, ಸುಭಾಷ್ ಶೆಟ್ಟಿ, ಜಯಪೂಜಾರಿ ಅಲ್ಲದೆ ದೇವಸ್ಥಾನದ ಅಧ್ಯಕ್ಷರು, ಗೌರವಾಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಸಹಕರಿಸಲಿದ್ದು ಇವರೆಲ್ಲರ ಸೇವಾರೂಪದಲ್ಲಿ ಈ ನೂತನ ಮಹಾದ್ವಾರವು ಶ್ರೀ ಜಗದಂಬಾ ಮಂದಿರಕ್ಕೆ ಅರ್ಪಣೆಯಾಗಲಿದೆ. 

ವಿ.ಸೂ: ಭಕ್ತಾಭಿಮಾನಿಗಳ ಗಮನಕ್ಕೆ – ಕಳೆದ ವರ್ಷದಿಂದ ಪ್ರತೀವರ್ಷದ ಕಾರ್ತಿಕ ಮಾಸದಲ್ಲಿ ಒಂದು ತಿಂಗಳ ಪರ್ಯಂತವೂ `ದೀಪೋತ್ಸವ ಸೇವಾ ಸಂಕಲ್ಪ’ ಯೋಜನೆಯನ್ನು ಆಯೋಜಿಸಿದ್ದು ಭಕ್ತಾಭಿಮಾನಿಗಳೆಲ್ಲರೂ ಈ ಪುಣ್ಯಕಾರ್ಯದಲ್ಲಿ ಸೇವಾಕರ್ತರಾಗಿ ಸಹಕರಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಲಾಗಿದೆ.

ಮಾ. 11 ರಿಂದ ಮಾ. 13 ರ ವರೆಗೆ ವಿವಿಧ ರೀತಿಯ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗುವ ಶ್ರೀ ಜಗದಂಬಾ ಮಂದಿರದ 8ನೇ ವಾರ್ಷಿಕೋತ್ಸವಕ್ಕೆ ಸರ್ವ ಭಕ್ತಾಭಿಮಾನಿಗಳ ಸಹಕಾರವನ್ನು ಬಯಸುವ ಶ್ರೀಜಗದಂಬಾ ಮಂದಿರದ ಭಕ್ತ ಮಂಡಳಿ ಹಾಗೂ ಅಧ್ಯಕ್ಷರು, ಗೌರವಾಧ್ಯಕ್ಷರು, ಸರ್ವ ಪದಾಧಿಕಾರಿಗಳಿಗೆ, ಸದಸ್ಯ, ಸದಸ್ಯೆಯರಿಗೆ, ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಅಷ್ಟಭುಜೆ ಜಗದಂಬಾ ದೇವಿಯ ಪೂರ್ಣನುಗ್ರಹವಿರಲೆಂದು 8ನೇ ವಾರ್ಷಿಕೋತ್ಸವದ ಯಶಸ್ಸಿಗೆ ಶುಭ ಕೋರುವ.

- ರಾಜೇಶ್ ಕೋಟ್ಯಾನ್, 

ಗೌ.ಕಾರ್ಯದರ್ಶಿ, ಶ್ರೀ ಜಗದಂಬಾ ಮಂದಿರ

Powered by Blogger.