ಅಂಧೇರಿಯಲ್ಲಿ ತುಂಗಾ ಹಾಸ್ಪಿಟಲ್ಸ್ ಇದರ ನೂತನ ಶಾಖೆಯ ಸೇವಾರ್ಪಣೆ
ತುಳು-ಕನ್ನಡಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವೆಗೆ ಬದ್ಧ : ಡಾ| ಸತೀಶ್ ಬಿ. ಶೆಟ್ಟಿ
(ಚಿತ್ರ-ವರದಿ : ರಮೇಶ್ ಉದ್ಯಾವರ )
ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಅವಿಷ್ಕಾರ, ನೂತನ ತಂತ್ರಜ್ಞಾನದೊಂದಿಗೆ ಮೂಲಭೂತ ಸಂಪನ್ಮೂಲಗಳನ್ನು ಬಳಸಿ ಸದಭಿರುಚಿಯ ಸೇವೆ ನೀಡಿದ ಯಶಸ್ಸು ತುಂಗಾ ಹಾಸ್ಪಿಟಲ್ ಸಮೂಹದ್ದಾಗಿದೆ. ಜನ ಸಾಮಾನ್ಯರ ಆರ್ಥಿಕತೆಗೆ ಅನುಗುಣವಾಗಿ ವೈದ್ಯಕೀಯ ಸೇವೆ ನೀಡಬೇಕು ಎಂಬ ಉದ್ಧೇಶದಿಂದ ಪ್ರಾರಂಭವಾದ ಸಂಸ್ಥೆ ಗುಣಮಟ್ಟದ ಪರಿಣಿತ ವೈದ್ಯರ ತಂಡವನ್ನು ಹೊಂದಿದೆ. ರೋಗಿಗಳ ಆರೈಕೆಗೆ ತಕ್ಕಂತೆ ನಗುಮೊಗದ ಸಿಬಂದಿ ವರ್ಗ ಈ ಸಂಸ್ಥೆಯ ವಿಶೇಷತೆಯಾಗಿದೆ. ತುಳು-ಕನ್ನಡಿಗರು ಬಹು ಸಂಖ್ಯೆಯಲ್ಲಿ ವಾಸಿಸುತ್ತಿರುವ ಅಂಧೇರಿ - ಜುಹು ಪರಿಸರದಲ್ಲಿ ನಮ್ಮ ಶಾಖೆಯನ್ನು ಹೊಂದುವ ಇಚ್ಚೆ ನಮ್ಮ ವೈದ್ಯರ ತಂಡದ್ದಾಗಿತ್ತು ಎಂದು ತುಂಗಾ ಆಸ್ಪತ್ರೆಯ ಮುಖ್ಯ ಆಡಳಿತ ನಿರ್ದೇಶಕ ಡಾ| ಸತೀಶ್ ಬಿ. ಶೆಟ್ಟಿ ನುಡಿದರು.
ಜು. 14 ರಂದು ಜುಹು - ಅಂಧೇರಿ ವರ್ಸೋವಾ ಲಿಂಕ್‌ರೋಡ್‌ನ ಅಭಿಷೇಕ್ ಅಪಾರ್ಟ್ಮೆಂಟ್‌ನಲ್ಲಿ ತಮ್ಮ ತುಂಗಾ ಹಾಸ್ಪಿಟಲ್ಸ್ ಇದರ ನೂತನ ಶಾಖೆಯ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾನಗರದ ಹೃದಯ ಭಾಗದಲ್ಲಿರುವ ಪ್ರದೇಶದಲ್ಲಿ ಪ್ರಾರಂಭವಾದ ಎಲ್ಲಾ ಸೌಲಭ್ಯಗಳನ್ನೊಳಗೊಂಡ ನಮ್ಮ ಶಾಖೆಯಲ್ಲಿ ತುಳು-ಕನ್ನಡಿಗರ ಆರ್ಥಿಕತೆಗೆ ಅನುಗುಣವಾಗಿ ಚಿಕಿತ್ಸೆ ದೊರೆಯಲಿದೆ. ಬೆಂಗಳೂರಿನಲ್ಲಿಯೂ ಶಾಖೆಯನ್ನು ಪ್ರಾರಂಭಿಸುವ ಮೂಲಕ ಮಹಾನಗರದಲ್ಲಿ ಹಾಗೂ ಥಾಣೆ ಜಿಲ್ಲೆಯಲ್ಲಿ ಆರು ಶಾಖೆಗಳನ್ನು ಹೊಂದಿರುವ ನಮ್ಮ ವೈದ್ಯಕೀಯ ಸಮೂಹ ಸಂಸ್ಥೆ ಶ್ರೀದೇವಿ ಕಟೀಲು ಅಮ್ಮನವರ ಹಾಗೂ ತಾಯಿಯ ಆಶೀರ್ವಾದಿಂದ ಸಹೋದರರಾದ ರಾಜೇಶ್ ಬಿ. ಶೆಟ್ಟಿ, ಉಮೇಶ್ ಬಿ. ಶೆಟ್ಟಿ ಅವರ ಸಹಕಾರ, ಕುಟುಂಬಸ್ಥರ ಸಹಯೋಗದೊಂದಿಗೆ ಯಶಸ್ವಿಯತ್ತ ಸಾಗುತ್ತಿದೆ ಎಂದು ನುಡಿದರು.
ಧಾರ್ಮಿಕ ಕರ‍್ಯಕ್ರಮದ ಬಳಿಕ ಖ್ಯಾತ ಸೆಲೆಬ್ರಿಟಿ ಮನೀಷ್ ಪೌಲ್ ಅವರು ರಿಬ್ಬನ್ ಕತ್ತರಿಸುವ ಮೂಲಕ ತುಂಗಾ ಆಸ್ಪತ್ರೆಯ ಅಂಧೇರಿ ಶಾಖೆಯನ್ನು ಉದ್ಘಾಟಿಸಿದರು. ಬಳಿಕ ಉತ್ತರ ಮುಂಬಯಿ ಸಂಸದ ಗೋಪಾಲ್ ಸಿ. ಶೆಟ್ಟಿ ಅವರು ವಿವಿಧ ವೈದ್ಯಕೀಯ ಸೌಲಭ್ಯಗಳ ಕೊಠಡಿಗಳಿಗೆ ಚಾಲನೆ ನೀಡಿದರು.
ಅತಿಥಿಯಾಗಿ ಆಗಮಿಸಿದ ಬಾಲಿವುಡ್ ಕೊರಿಯೊಗ್ರಾಫರ್ ಗಣೇಶ್ ಆಚಾರ್ಯ ಅವರು ಮಾತನಾಡಿ, ಅಂಧೇರಿ ಪರಿಸರದಲ್ಲಿ ಹಲವಾರು ವೈದ್ಯಕೀಯ ಸಂಸ್ಥೆಗಳಿದ್ದು, ಉದ್ಘಾಟನೆಗೊಂಡ ತುಂಗಾ ಆಸ್ಪತ್ರೆ ಮಾತ್ರ ತನ್ನ ಆದ ವೈಶಿಷ್ಟ್ಯತೆಯಿಂದ ಪ್ರಸಿದ್ಧಿಯನ್ನು ಪಡೆದಿದೆ. ಎಲ್ಲಾ ಮಾದರಿಯ ಪರಿಣಿತ ವೈದ್ಯರುಗಳ ತಂಡವನ್ನು ಸಂಸ್ಥೆಯು ಹೊಂದಿರುವುದು ವಿಶೇಷತೆಯಾಗಿದೆ. ಸುಧಾರಿತ ಪ್ರದೇಶದಲ್ಲಿ ಇಂತಹ ಆಸ್ಪತ್ರೆಯ ಅವಶ್ಯಕತೆಯಿತ್ತು. ಪರಿಸರದ ಜನರಿಗೆ ಸಕಾರಾತ್ಮಕ ಸೇವೆ ಸದಾ ಸಿಗುವಂತಾಗಲಿ ಎಂದು ನುಡಿದು ಶುಭಹಾರೈಸಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸೆಲೆಬ್ರಿಟಿಗಳು, ತುಳು-ಕನ್ನಡಿಗರು, ಸಮಾಜ ಬಾಂಧವರು ಸೇರಿದಂತೆ ಬಂಟರ ಸಂಘ ಮುಂಬಯಿ ಇದರ ಪದಾಧಿಕಾರಿಗಳು, ಕರ‍್ಯಕಾರಿ ಸಮಿತಿಯ ಸದಸ್ಯರು, ಬಂಟರ ಸಂಘದ ವಿವಿಧ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಜವಾಬ್ ಸಂಸ್ಥೆಯ ಪದಾಧಿಕಾರಿಗಳು, ಸಮಾಜ ಸೇವಕರು, ರಾಜಕೀಯ ನೇತಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೂತನ ಶಾಖೆಗೆ ಶುಭ ಹಾರೈಸಿದರು. ಕರ‍್ಯಕ್ರಮದಲ್ಲಿ ಡಾ| ಸತೀಶ್ ಬಿ. ಶೆಟ್ಟಿ, ರಾಜೇಶ್ ಬಿ. ಶೆಟ್ಟಿ, ಉಮೇಶ್ ಬಿ. ಶೆಟ್ಟಿ ಮತ್ತು ಪರಿವಾರದವರು, ಉಪಸ್ಥಿತರಿದ್ದು ಅತಿಥಿ-ಗಣ್ಯರುಗಳನ್ನು ಗೌರವಿಸಿದರು. ಮಧ್ಯಾಹ್ನದ ಬಳಿಕ ಆಸ್ಪತ್ರೆಯ ವೈದ್ಯಕೀಯ ತಂಡದವರಿಂದ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಪ್ರಾರಂಭಗೊಂಡಿತು.
ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಮಾದರಿ ವೈದ್ಯರ ತಂಡದದೊಂದಿಗೆ ಅಂಧೇರಿ ಪರಿಸರದಲ್ಲಿ ಉತ್ತಮ ವೈದ್ಯಕೀಯ ಸಂಸ್ಥೆಯೊಂದು ಪ್ರಾರಂಭ ಗೊಂಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಅತ್ಯಾಆಧುನಿಕ ತಂತ್ರಜ್ಞಾನದ ಮೂಲಕ ಕ್ಲಪ್ತ ಸಮಯದಲ್ಲಿ ಉತ್ತಮ ಚಿಕಿತ್ಸೆ ಪಡೆಯಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಈ ಸಂಸ್ಥೆಯಿಂದ ಗುಣಮಟ್ಟದ ಚಿಕಿತ್ಸೆ ದೊರೆಯುವಲ್ಲಿ ಯಶಸ್ಸನ್ನು ಕಂಡು ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ - ಮನೀಷ್ ಪೌಲ್ (ಸೆಲೆಬ್ರಿಟಿ).
ವೈದ್ಯಕೀಯ ಕ್ಷೇತ್ರದಲ್ಲಿ ಜಟಿಲವಾದ ಸಮಸ್ಯೆಯ ನಡುವೆ ತುಂಗಾ ಆಸ್ಪತ್ರೆ ನೀಡುತ್ತಿರುವ ಸೇವೆ ಅನುಕರಣೀಯ ಮತ್ತು ಮಾದರಿಯಾಗಿದೆ. ಕೋವಿಡ್ ಸಂಧರ್ಭದಲ್ಲೂ ಆಸ್ಪತ್ರೆಯು ಎದೆಗುಂದದೆ ಸಾವಿರಾರು ರೋಗಿಗಳ ಜೀವ ಉಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ವೈದ್ಯಕೀಯ ಸಂಸ್ಥೆಗಳು ಸಮಾಜದ ಹಿತದೃಷ್ಟಿಯಿಂದ ಕರ‍್ಯವೆಸಗಿದಾಗ ಸಫಲತೆಯನ್ನು ಕಂಡುಕೊಳ್ಳಲು ಸಾಧ್ಯ. ಆ ಮೂಲಕ ಹಲವಾರು ಶಾಖೆಗಳನ್ನು ಹೊಂದಿರುವ ತುಂಗಾ ಆಸ್ಪತ್ರೆ ಸಮೂಹವು ವೈದ್ಯಕೀಯ ರಂಗದಲ್ಲಿ ವಿಶೇಷ ಸಾಧನೆ ಮಾಡುತ್ತಿದೆ. ಸಂಸ್ಥೆಯ ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರಿಯಾಗಲಿ. ಭವಿಷ್ಯದಲ್ಲೂ ಸಂಸ್ಥೆಯಿಂದ ಇನ್ನಷ್ಟು ಶಾಖೆಗಳು ಲೋಕಾರ್ಪಣೆಗೊಂಡು ವಿಶ್ವವ್ಯಾಪಿಯಾಗಲಿ - ಗೋಪಾಲ್ ಸಿ. ಶೆಟ್ಟಿ (ಸಂಸದರು : ಉತ್ತರ ಮುಂಬಯಿ).









Post a Comment