".

Header Ads

ಮಾನದಂಡಗಳನ್ನು ಮೀರಿ ರೇಷನ್‌ ಕಾರ್ಡ್‌ ಹೊಂದಿದ್ದರೆ, ನಿಮ್ಮ ರೇಷನ್‌ ಕಾರ್ಡ್‌ ರದ್ದಾಗಲಿದೆ ..!


ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿಗಳನ್ನು ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಬಿಪಿಎಲ್‌ ರೇಷನ್‌ ಕಾರ್ಡ್‌ ಭಾರೀ ಬೇಡಿಕೆ ಬಂದಿದೆ. ಆದರೆ, ಹೊಸ ರೇಷನ್‌ ಕಾರ್ಡ್‌ ಅರ್ಜಿ ಸಲ್ಲಿಸಲು ಇನ್ನೂ ಅವಕಾಶ ನೀಡಿಲ್ಲ. ಇದಲ್ಲದೆ, ಈಗಾಗಲೇ ಬಿಪಿಎಲ್‌ ಹಾಗೂ ಎಎವೈ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮಾನದಂಡಗಳನ್ನು ಮೀರಿ ರೇಷನ್‌ ಕಾರ್ಡ್‌ ಹೊಂದಿದ್ದರೆ, ಅಂತಹ ಪಡಿತರ ಚೀಟಿಗಳು ರದ್ದಾಗಲಿವೆ. 

ರಾಜ್ಯದಲ್ಲಿ ಅಂತ್ಯೋದಯ ಅನ್ನ ಯೋಜನೆ (ಎಎವೈ ) ಹಾಗೂ ಪಿಎಚ್‌ಎಚ್‌ (ಆದ್ಯತಾ/ಬಿಪಿಎಲ್‌) ಪಡಿತರ ಚೀಟಿಗಳನ್ನು (AAY, BPL Ration Card) ಹೊಂದಿರುವ ಕುಟುಂಬಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮಾನದಂಡಗಳನ್ನು ಮೀರಿ ಎಎವೈ ಹಾಗೂ ಪಿಎಚ್‌ಎಚ್‌ ಪಡಿತರ ಕಾರ್ಡ್‌ಗಳನ್ನು ಹೊಂದಿರುವವರು ಸ್ವಯಂಪ್ರೇರಿತವಾಗಿ ತಾಲೂಕು ಕಚೇರಿಯ ಆಹಾರ ಶಾಖೆಗೆ ಪಡಿತರ ಚೀಟಿಗಳನ್ನು ಹಿಂದಿರುಗಿಸುವಂತೆ ತುಮಕೂರು ಗ್ರಾಮಾಮತರ ತಹಸೀಲ್ದಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯಾದ್ಯಂತ ಇದೇ ರೀತಿ ಅನರ್ಹ ಪಡಿತರ ಚೀಟಿ ಹೊಂದಿರುವ ಕುರಿತು ಪರಿಸೀಲನೆ ನಡೆಯುತ್ತಿದೆ.

ಈ ಹಿಂದೆ ತನಿಖಾ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿ ಇಲಾಖೆ ಮಾನದಂಡಗಳನ್ನು ಮರೆಮಾಚಿ ಎಎವೈ ಹಾಗೂ ಬಿಪಿಎಲ್‌ ಪಡಿತರ ಚೀಟಿ ಪಡೆದುಕೊಂಡಿರುವವರು ಈ ಪಡಿತರ ಕಾರ್ಡ್‌ಗಳನ್ನು ಹಿಂದಿರುಗಿಸಿ ಆದ್ಯತೇತರ ಕಾರ್ಡ್‌ಗಳನ್ನು ಪಡೆಯಬೇಕು. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಯಾರೆಲ್ಲ ಎಎವೈ/ ಬಿಪಿಎಲ್‌ ರೇಷನ್‌ ಕಾರ್ಡ್‌ ಪಡೆಯಲು ಅನರ್ಹರು

  • ಕಾಯಂ ನೌಕರರು ಅಂದರೆ ಸರಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರಕಾರಿ ಪ್ರಾಯೋಜಿತ, ಸರಕಾರಿ ಸೌಮ್ಯದ ಸಂಸ್ಥೆ/ ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು.
  • ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್‌, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು.
  • ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚಿನ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವುದು. ಅಥವಾ
  • ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಸ್ವಂತ ಮನೆ ಹೊಂದಿರುವ ಕುಟುಂಬಗಳು.
  • ಕುಟುಂಬದ ವಾರ್ಷಿಕ 1.20 ಲಕ್ಷ ರೂ.ಗಳಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು.
  • ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಅಂದರೆ ಟ್ರ್ಯಾಕ್ಟರ್‌, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ 4 ಚಕ್ರದ ವಾಹನ ಹೊಂದಿರುವುದು.
  • ಒಂದೇ ಮನೆಯಲ್ಲಿ ವಾಸವಿದ್ದು, ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವುದು.
  • ಕುಟುಂಬವು ಆ ವಿಳಾಸದಲ್ಲಿ ವಾಸವಿಲ್ಲದಿರುವುದು, ಮರಣ ಹೊಂದಿರುವ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೇ ಇರುವುದು/ಪಡಿತರ ಚೀಟಿಯನ್ನು ರದ್ದುಗೊಳಿಸದೇ ಇರುವುದು.

ಇಂತಹ ಮಾನದಂಡಗಳನ್ನು ಮೀರಿ ಎಎವೈ (ಅಂತ್ಯೋದಯ) ಹಾಗೂ ಪಿಎಚ್‌ಎಚ್‌ (ಆದ್ಯತಾ/ ಬಿಪಿಎಲ್‌) ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. 

 

ಸ್ವಯಂಪ್ರೇರಿತವಾಗಿ ರೇಷನ್‌ ಕಾರ್ಡ್ ಹಿಂದಿರುಗಿಸಲು ಮನವಿ

ಇಂತಹ ಪಡಿತರ ಚೀಟಿದಾರರು ಸ್ವಯಂಪ್ರೇರಿತವಾಗಿ ತಾಲೂಕು ಕಚೇರಿಯ ಆಹಾರ ಶಾಖೆಗೆ ಎಎವೈ (ಅಂತ್ಯೋದಯ) ಹಾಗೂ ಪಿಎಚ್‌ಎಚ್‌ (ಆದ್ಯತಾ/ ಬಿಪಿಎಲ್‌) ಪಡಿತರ ಚೀಟಿಗಳನ್ನು ಕೂಡಲೇ ಹಿಂದಿರುಗಿಸಿ ರದ್ದು ಅಥವಾ ಆದ್ಯತೇತರ (ಎಪಿಎಲ್‌) ಪಡಿತರ ಚೀಟಿಯನ್ನು ಕಚೇರಿಯಿಂದ ತಕ್ಷಣವೇ ಪಡೆಯಬಹುದು. ತಪ್ಪಿದಲ್ಲಿಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಪ್ಪು ಮಾಹಿತಿ ನೀಡಿ ಎಎವೈ (ಅಂತ್ಯೋದಯ) ಹಾಗೂ ಪಿಎಚ್‌ಎಚ್‌ (ಆದ್ಯತಾ/ ಬಿಪಿಎಲ್‌) ಪಡಿತರ ಚೀಟಿ ಪಡೆದುಕೊಂಡ ಫಲಾನುಭವಿಗಳ ಮಾಹಿತಿಯನ್ನು ಸೂಕ್ತ ದಾಖಲೆಸಹಿತ ಆಹಾರ ಶಾಖೆಯಲ್ಲಿನೀಡಬಹುದು. ಇಂತಹ ದೂರುದಾರರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.

 

Powered by Blogger.